ತಾಯಿಯನ್ನು ಕೊಂದು ಸುಟ್ಟು ಹಾಕಿ ಪಕ್ಕದಲ್ಲೇ ಮಲಗಿದ್ದ ಪುತ್ರ
ಚಿಕ್ಕಮಗಳೂರು: ಮದ್ಯಪಾನದ ಅಮಲಿನಲ್ಲಿ ಪುತ್ರನೇ ಹೆತ್ತ ತಾಯಿಯನ್ನು ಕೊಲೆಗೈದು ಮೃತದೇಹಕ್ಕೆ ಬೆಂಕಿ ಹಚ್ಚಿ ಸುಟ್ಟುಹಾಕಿರುವ ಬೆಚ್ಚಿ ಬೀಳಿಸುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಭವಾನಿ (52) ಮಗನಿಂದಲೇ ಹತ್ಯೆಯಾದ ಮಹಿಳೆ. ಇವರ ಪುತ್ರ ಪವನ್ (28) ಕೊಲೆ ಆರೋಪಿ. ತಾಯಿಯನ್ನು ಮನೆಯಲ್ಲಿ ಕೊಲೆಗೈದು ಮೃತದೇಹಕ್ಕೆ ಬೆಂಕಿ ಹಚ್ಚಿದ್ದ ಆರೋಪಿಯು ಅಲ್ಲೇ ಪಕ್ಕದಲ್ಲಿ ಮಲಗಿದ್ದ ಎಂದು ತಿಳಿದುಬಂದಿದೆ. ಆತನನ್ನು ಆಲ್ದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಭವಾನಿಯವರ ಮನೆ ಜನವಸತಿ ಪ್ರದೇಶದಿಂದ ದೂರದ ಬೆಟ್ಟದ ಮೇಲೆ ದೂರದಲ್ಲಿದೆ. ಮನೆಯಲ್ಲಿ ತಂದೆ, ತಾಯಿ ಮಗ ಮೂವರು ವಾಸವಾಗಿದ್ದು, ತಂದೆ ಮಗ ಇಬ್ಬರು ಮದ್ಯವ್ಯಸನಿಗಳಾಗಿದ್ದಾರೆ. ಮಗ ಎಸಗಿರುವ ದುಷ್ಕೃತ್ಯದ ಬಗ್ಗೆ ತಂದೆಯೇ ಆಲ್ದೂರು ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಭವಾನಿಯ ಮೃತದೇಹ ಬಹುತೇಕ ಸುಟ್ಟು ಹೋಗಿದ್ದು, ಕಾಲು ಹಾಗೂ ಕೈ ಮಾತ್ರ ಉಳಿದಿತ್ತು. ಬುಧವಾರ ತಡರಾತ್ರಿ ಸ್ಥಳಕ್ಕೆ ತೆರಳಿದ ಪೊಲೀಸರು ಮತ್ತು ಸ್ಥಳೀಯರು ಭವಾನಿಯ ಮೃತದೇಹವನ್ನು ಕಿಲೋಮೀಟರ್ ಗಟ್ಟಲೇ ಹೊತ್ತುಕೊಂಡು ಚಿಕ್ಕಮಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಅವಿವಾಹಿತನಾಗಿರುವ ಆರೋಪಿ ಪವನ್ (28) ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಆಲ್ದೂರು ಪಿಎಸ್ಐ ಹಾಗೂ ಇನ್ ಸ್ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.