ತರೀಕೆರೆ | ಬಾಲಕಿಯನ್ನು ಬಲಿ ಪಡೆದಿದ್ದ ಚಿರತೆ ಅರಣ್ಯ ಸಿಬ್ಬಂದಿಯ ಗುಂಡೇಟಿನಿಂದ ಸಾವು
ಚಿಕ್ಕಮಗಳೂರು: ತರೀಕೆರೆಯಲ್ಲಿ ಬಾಲಕಿಯನ್ನು ಬಲಿ ಪಡೆದು, ಇನ್ನೋರ್ವ ಬಾಲಕನ ಮೇಲೆ ಘಾತಕವಾಗಿ ಎರಗಿದ್ದ ಚಿರತೆಯು, ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಹಾರಿಸಿದ ಗುಂಡು ತಗುಲಿ ಸಾವನಪ್ಪಿದೆ.
ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದ ಸಮೀಪ ಪೊದೆಯಲ್ಲಿ ಅವಿತಿದ್ದ ಚಿರತೆ ಸೆರೆ ಹಿಡಿಯುವ ವೇಳೆ ಈ ಘಟನೆ ನಡೆದಿದೆ.
ಇತ್ತೀಚೆಗೆ ತಾಲೂಕಿನ ಮುಂಡ್ರೆ ಸಮೀಪದ ನವಿಲುಕಲ್ಲುಗುಡ್ಡ ಗ್ರಾಮದಲ್ಲಿ ಮನೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಮಗು ಸಾನ್ವಿಯನ್ನು ಚಿರತೆ ಹೊತ್ತೊಯ್ದು ಸಾಯಿಸಿತ್ತು. ಶುಕ್ರವಾರ ಬೈರಾಪುರ ಗ್ರಾಮದ ಹೃದಯ್ ಎಂಬ ಹನ್ನೊಂದು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ನಡೆದಿತ್ತು. ಈ ಘಟನೆ ತರೀಕೆರೆ ಅರಣ್ಯ ವಲಯದ ಶಿವಪುರ, ನಂದಿ, ಕೆಂಚಾಪುರ, ಕೆಂಚಾಪುರ ಗೇಟ್ ಭೈರಾಪುರ ಗ್ರಾಮ ವ್ಯಾಪ್ತಿಯಲ್ಲಿ ಜನರಲ್ಲಿ ಜೀವಭಯ ಸೃಷ್ಟಿಸಿತ್ತು.
ನರಭಕ್ಷಕ ಚಿರತೆಯನ್ನು ಜೀವಂತ ಅಥವಾ ಜೀವರಹಿತವಾಗಿ ಸೆರೆ ಹಿಡಿಯಲು ಅನುಮತಿ ನೀಡುವಂತೆ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯನ್ನು ಕೋರಲಾಗಿತ್ತು. ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಚಿರತೆ ಸೆರೆಗೆ ಲಿಖಿತ ಅನುಮತಿ ನೀಡಿದ್ದರು.
ಅದರಂತೆ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಶುಕ್ರವಾರ ಆರಂಭಿಸಿತ್ತು. ಶುಕ್ರವಾರ ರಾತ್ರಿ ವೇಳೆ ಬೈರಾಪುರ ರಸ್ತೆ ಅಂಚಿನಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದನ್ನು ಓಡಿಸಿದ್ದರು.
ಈ ಮಧ್ಯೆ ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಶನಿವಾರ ಮಂಗಳೂರು, ಬಂಡೀಪುರ, ಬನ್ನೇರುಘಟ್ಟ ಹಾಗೂ ಶಿವಮೊಗ್ಗ ತ್ಯಾವರೆಕೊಪ್ಪ ಮೃಗಾಲಯದಿಂದ ಪಶು ವೈದ್ಯರನ್ನು ಕರೆಸಿಕೊಂಡಿದ್ದರು. ಶಿವಮೊಗ್ಗ ಸಕ್ರೆಬೈಲಿನಿಂದ ಮೂರು ಆನೆಗಳು, ಮೈಸೂರಿನಿಂದ ಚಿರತೆ ಟಾಸ್ಕ್ ಪೋರ್ಸ್, ಚಿಕ್ಕಮಗಳೂರಿನಿಂದ ಆನೆ ಕಾರ್ಯಪಡೆ ತಂಡವನ್ನು ಕರೆಸಿಕೊಂಡು ಚಿರತೆ ಸೆರೆ ಕಾರ್ಯಾಚರಣೆ ಆರಂಭಿಸಿದ್ದರು.
ಬೈರಾಪುರ ಗ್ರಾಮದ ಬಳಿ ಶೋಧ ಕಾರ್ಯ ನಡೆಸಿದಾಗ ಚಿರತೆ ದಟ್ಟವಾದ ಲಂಟಾನ ಪೊದೆಯೊಳಗೆ ಅವಿತಿರುವುದು ಪತ್ತೆಯಾಗಿತ್ತು. ಪೊದೆಯನ್ನು ಸುತ್ತುವರಿದು ಪಶು ವೈದ್ಯರಾದ ಡಾ।ಯಶಸ್ವಿ ಹಾಗೂ ಸಹಾಯಕರಾಗಿ ಇಬ್ಬರು ಬಂದೂಕುದಾರಿ ಸಿಬ್ಬಂದಿ ಚಿರತೆಯನ್ನು ಟ್ರಾಂಕ್ಲೈಸ್ ಮಾಡಲು ಲಂಟಾನ ಪೊದೆಯೊಳಗೆ ಪ್ರವೇಶಿದಾಗ ಇದ್ದಕ್ಕಿದ್ದಂತೆ ಅದು ಸಿಬ್ಬಂದಿ ಮೇಲೆ ಎರಗಿದೆ.
ಈ ಸಂದರ್ಭದಲ್ಲಿ ಜೀವರಕ್ಷಣೆಗಾಗಿ ಸಿಬ್ಬಂದಿ ಗುಂಡು ಹಾರಿಸಿದ್ದು, ಚಿರತೆ ತಪ್ಪಿಸಿಕೊಂಡಿದೆ. ನಂತರ ಹುಡುಕಾಟ ನಡೆಸಿದಾಗ ಚಿರತೆಗೆ ಗುಂಡು ತಗುಲಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚಿರತೆಯ ಕಳೇಬರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ವಿಧಿವಿಧಾನಗಳನ್ನು ಕೈಗೊಂಡಿದ್ದಾರೆ.
ಜೀವಭಯ ಹುಟ್ಟಿಸಿದ್ದ ಚಿರತೆ ಗುಂಡಿಗೆ ಬಲಿಯಾಗಿದ್ದು, ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.