×
Ad

ತರೀಕೆರೆ | ಚೀಟಿ ಹಣದ ವಿಚಾರವಾಗಿ ನಡೆದ ಗಲಾಟೆ; ಯುವಕನ ಕೊಲೆಯಲ್ಲಿ ಅಂತ್ಯ

Update: 2025-04-21 20:05 IST

ಸಂಜು ನಾಯ್ಕ್(26) 

ಚಿಕ್ಕಮಗಳೂರು : ಚೀಟಿ ಹಣದ ವಿಚಾರವಾಗಿ ನಡೆದ ಗಲಾಟೆ ಯುವಕನೋರ್ವನ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ವರದಿಯಾಗಿದೆ.

ಅಮೃತಾಪುರ ಗ್ರಾಮದ ನಿವಾಸಿ ಸಂಜು ನಾಯ್ಕ್(26) ಕೊಲೆಯಾದ ಯುವಕ. ಅದೇ ಗ್ರಾಮದ ರುದ್ರೇಶ್ ನಾಯ್ಕ್ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ಘಟನೆ ವೇಳೆ ಹತ್ಯೆ ತಪ್ಪಿಸಲು ಮುಂದಾಗಿದ್ದ ಅವಿನಾಶ್ ಎಂಬಾತನಿಗೆ ರುದ್ದೇಶ್ ಕಚ್ಚಿ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.

ಅಮೃತಾಪುರ ಗ್ರಾಮದಲ್ಲಿ ಕಟ್ಟಡವೊಂದರಲ್ಲಿ ಸೋಮವಾರ ಹಣದ ಚೀಟಿ ವಿಚಾರವಾಗಿ ಸಭೆ ನಡೆಸಲಾಗುತಿತ್ತು. ಸಂಜು ನಾಯ್ಕ್ ಚೀಟಿ ಹಣವನ್ನು ಸರಿಯಾಗಿ ಕಟ್ಟದೇ ಗಲಾಟೆ ಮಾಡುತ್ತಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ರುದ್ರೇಶ್ ನಾಯ್ಕ್ ಹಾಗೂ ಸಂಜು ನಾಯ್ಕ್ ನ ನಡುವೆ ಮೊಬೈಲ್‍ನಲ್ಲಿ ಗಲಾಟೆ ಆಗಿದೆ ಎನ್ನಲಾಗಿದೆ.

ನಂತರ ಸ್ಥಳಕ್ಕೆ ಬಂದ ಸಂಜು ನಾಯ್ಕ್ ಮತ್ತು ರುದ್ರೇಶ್ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ತಾರಕಕ್ಕೆ ಏರಿದೆ. ಈ ವೇಳೆ ರುದ್ರೇಶ್ ದೊಣ್ಣೆಯಿಂದ ಸಂಜು ನಾಯ್ಕನಿಗೆ ಹಲ್ಲೆ ಮಾಡಿದ್ದು, ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಸಂಜು ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.

ಹಲ್ಲೆ ತಡೆಯಲು ಮುಂದಾಗಿದ್ದ ಅವಿನಾಶ್ ಎಂಬಾತನಿಗೆ ರುದ್ರೇಶ್ ಕಚ್ಚಿ ಗಾಯಗೊಳಿಸಿದ್ದಾನೆಂದು ತಿಳಿದು ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ತರೀಕೆರೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News