ಚಿಕ್ಕಮಗಳೂರು | ಕಾಡಾನೆ ದಾಳಿಯಲ್ಲಿ ಇಬ್ಬರು ಮೃತಪಟ್ಟ ಬೆನ್ನಲ್ಲೇ ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ; ಮೊದಲ ದಿನ ಒಂದು ಪುಂಡಾನೆ ಸೆರೆ
ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನಲ್ಲಿ ಕಳೆದ 4 ದಿನಗಳ ಅಂತರದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾದ ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರು, ರೈತರ ಆಕ್ರೋಶಕ್ಕೆ ಮಣಿದ ಸರಕಾರ ಕಾಡಾನೆಗಳ ಸೆರೆಗೆ ಆದೇಶಿಸಿದ್ದು, 9 ಆನೆಗಳ ಸಹಾಯದಿಂದ ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿ ಮಂಗಳವಾರ ಕಾರ್ಯಾಚರಣೆಗೆ ಇಳಿದಿದ್ದು, ಮೊದಲ ದಿನ ಒಂದು ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಎನ್.ಆರ್.ಪುರ ತಾಲೂಕಿನ ಖಾಂಡ್ಯ ಹೋಬಳಿ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಅನಿತಾ ಎಂಬ ಕಾರ್ಮಿಕ ಮಹಿಳೆಯ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು, ಈ ಘಟನೆಯಿಂದ ಆಕ್ರೋಶಗೊಂಡ ರೈತರು, ಸಂಘ ಸಂಸ್ಥೆಗಳ ಮುಖಂಡರು ಬಾಳೆಹೊನ್ನೂರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಕಾಡಾನೆ ನಿಯಂತ್ರಣಕ್ಕೆ ಆಗ್ರಹಿಸಿದ್ದರು. ಈ ಘಟನೆ ಬೆನ್ನಲ್ಲೇ ಕಳೆದ ರವಿವಾರ ರಾತ್ರಿ ಬಾಳೆಹೊನ್ನೂರು ಸಮೀಪದ ಅಂಡವಾನೆ ಗ್ರಾಮದಲ್ಲಿ ಸುಬ್ರಾಯಗೌಡ ಎಂಬ ರೈತನ ಮೇಲೆ ದಾಳಿ ಮಾಡಿದ ಪುಂಡಾನೆ ತುಳಿದು ಕೊಂದು ಹಾಕಿತ್ತು.
4 ದಿನಗಳ ಅಂತದಲ್ಲಿ ಇಬ್ಬರು ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರು, ರೈತರು ಬಾಳೆಹೊನ್ನೂರು, ಖಾಂಡ್ಯ ಹೋಬಳಿ ಬಂದ್‍ಗೆ ಸೋಮವಾರ ಕರೆ ನೀಡಿ ಬಾಳೆಹೊನ್ನೂರು ಪಟ್ಟಣದಲ್ಲಿರುವ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಮಣಿದ ರಾಜ್ಯ ಸರಕಾರದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪುಂಡಾನೆಗಳ ಸೆರೆಗೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸಕ್ರೇಬೈಲು ಆನೆ ಶಿಬಿರದಿಂದ 9 ಆನೆಗಳು ಬಾಳೆಹೊನ್ನೂರು ಪಟ್ಟಣಕ್ಕೆ ಬಂದಿದ್ದು, ಮಂಗಳವಾರ ಪುಂಡಾನೆಗಳ ಸರೆಗೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದರು. ಮಂಗಳವಾರ ಸಂಜೆ ವೇಳೆ ಬಾಳೆಹೊನ್ನೂರು ಸಮೀಪದ ಧಟ್ಟ ಅರಣ್ಯದಲ್ಲಿ ಪುಂಡಾನೆಯೊಂದು ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು, ಈ ವೇಳೆ ಅರಿವಳಿಕೆ ತಜ್ಞ ವೈದ್ಯರು ಕಾಡಾನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಿದ್ದಾರೆ. ನಂತರ ಆನೆಯನ್ನು ಕುಮ್ಕಿ ಆನೆಗಳ ಸಹಾಯದಿಂದ ಸೆರೆ ಹಿಡಿಯಲಾಯಿತು.