ಚಿಕ್ಕಮಗಳೂರು: ಸ್ನೇಹಿತನ ರಕ್ಷಣೆಗೆ ಹೋಗಿದ್ದ ಯುವಕ ನೀರುಪಾಲು
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ಹಳ್ಳ ದಾಟುತ್ತಿದ್ದ ವ್ಯಕ್ತಿಯೋರ್ವನನ್ನು ರಕ್ಷಣೆ ಮಾಡಲು ಹೋದ ಯುವಕನೋರ್ವ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಗುರುವಾರ ವರದಿಯಾಗಿದೆ.
ಸಾದರಹಳ್ಳಿ ಗ್ರಾಮದ ಯತೀಶ್ (25) ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿರುವ ಯುವಕನಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ. ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿರುವ ಸ್ಮಶಾನದ ಹಳ್ಳ ತುಂಬಿ ರಸ್ತೆ ಮೇಲೆ ಹರಿಯುತ್ತಿದೆ. ಪೊಲೀಸರು ಬ್ಯಾರಿಕೇಡ್ ಇಟ್ಟು ಸಾರ್ವಜನಿಕರು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಮುಂಜಾಗ್ರತಾ ಕ್ರಮಕೈಗೊಂಡಿದ್ದರು.
ಗುರುವಾರ ಬೆಳಗ್ಗೆ ಯತೀಶ್ ಹಾಗೂ ಆತನ ಸ್ನೇಹಿತ ಬೈಕ್‌ನಲ್ಲಿ ಈ ರಸ್ತೆಯ ಮೇಲೆ ಹೋಗಿದ್ದು, ರಸ್ತೆಯ ಮೇಲೆ ರಭಸದಿಂದ ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ಬೈಕ್ ದಾಟಿಸಲು ಹೋದ ವೇಳೆ ಸವಾರ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದ್ದಾನೆ, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸ್ನೇಹಿತನ ರಕ್ಷಣೆ ಮಾಡಲು ಯತೀಶ್ ಮುಂದಾದ ವೇಳೆ ನಿಯಂತ್ರಣ ತಪ್ಪಿಹಳ್ಳಕ್ಕೆ ಬಿದ್ದಿದ್ದು, ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ನೇಹಿತ ಬಚಾವಾಗಿದ್ದಾನೆ ಎಂದು ತಿಳಿದು ಬಂದಿದೆ. ಯತೀಶ್ ಸುಳಿವು ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕದಳದ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.