ʼಬಾಸ್ʼ ಚಲನಚಿತ್ರ ಬಿಡುಗಡೆಗೆ ಹೈಕೋರ್ಟ್ ಅಸ್ತು: ದರ್ಶನ್ ದಂಪತಿಯ ಮೇಲ್ಮನವಿ ವಜಾ

Update: 2026-07-17 20:39 IST

ನಟ ದರ್ಶನ್‌ 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆಧಾರಿತ ಕಥೆ ಹೊಂದಿದೆ ಎನ್ನಲಾದ 'ಬಾಸ್‌' ಚಲನಚಿತ್ರದ ಬಿಡುಗಡೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಕ್ರಮ ಪ್ರಶ್ನಿಸಿ ನಟ ದರ್ಶನ್‌ ಮತ್ತವರ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ, ಬಿಡುಗಡೆಗೂ ಮೊದಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಹಾಗೂ ತೀವ್ರ ಕುತೂಹಲ ಕೆರಳಿದ್ದ ಬಾಸ್ ಚಲನಚಿತ್ರ ಬಿಡುಗಡೆಗೆ ಹಾದಿ ಸುಗಮವಾದಂತಾಗಿದೆ.

ಬಾಸ್ ಚಲನಚಿತ್ರ ಬಿಡುಗಡೆಗೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಿ ಜೂನ್ 2ರಂದು ಬೆಂಗಳೂರಿನ 17ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ದರ್ಶನ್‌ ದಂಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಮೇಲ್ಮನವಿದಾರರು ಹಾಗೂ ಪ್ರತಿವಾದಿಗಳ ವಾದ ಆಲಿಸಿದ ನ್ಯಾಯಪೀಠ, ಚಿತ್ರ ಬಿಡುಗಡೆಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಕಾನೂನುಬಾಹಿರವಾಗಿದೆಯೇ, ಅದರಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯವಿದೆಯೇ, ಒಂದು ವೇಳೆ ಇದ್ದಲ್ಲಿ ಯಾವ ರೀತಿಯ ಆದೇಶ ನೀಡಬೇಕು ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಉಭಯ ಪಕ್ಷಗಾರರ ವಾದ ಹಾಗೂ ಅವರು ಉಲ್ಲೇಖಿಸಿದ ತೀರ್ಪುಗಳ ಕುರಿತು ಚರ್ಚಿಸಿದ ನಂತರ, ಚಲನಚಿತ್ರ ಬಿಡುಗಡೆಯ ಮೇಲಿದ್ದ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ವಿಚಾರಣಾ ನ್ಯಾಯಾಲಯ ನೀಡಿರುವ ಕಾರಣಗಳು ನ್ಯಾಯಸಮ್ಮತ ಮತ್ತು ಸೂಕ್ತವಾಗಿದ್ದು, ಅದರಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಮೇಲ್ಮನವಿ ವಜಾಗೊಳಿಸಿತು. ವಿಸ್ತೃತ ತೀರ್ಪು ಲಭ್ಯವಾಗಬೇಕಿದೆ.

ಆದೇಶ ಪ್ರಕಟಿಸಿದ ನಂತರ ದರ್ಶನ್ ಪರ ವಕೀಲರು, ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌‌ನಲ್ಲಿ ಪ್ರಶ್ನಿಸಲಾಗುವುದು. ಆದ್ದರಿಂದ, ಚಲನಚಿತ್ರವನ್ನು ಒಂದು ವಾರದವರೆಗೆ ಬಿಡುಗಡೆ ಮಾಡದಂತೆ ಚಿತ್ರ ನಿರ್ಮಾಣ ಸಂಸ್ಥೆಯನ್ನು ನಿರ್ಬಂಧಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ನಿರ್ಮಾಣ ಸಂಸ್ಥೆಗೆ ಎಚ್ಚರಿಕೆ:

ಇದೇ ವೇಳೆ, ಚಲನಚಿತ್ರದ ಹಕ್ಕುತ್ಯಾಗದ ಪ್ರಕಟಣೆ (Disclaimer) ಪ್ರದರ್ಶಿಸುವ ಕುರಿತು ಪ್ರತಿವಾದಿ ನಿರ್ಮಾಣ ಸಂಸ್ಥೆ ಸಿರಿ ಪ್ರೊಡಕ್ಷನ್ಸ್‌ಗೆ ಕಠಿಣ ಎಚ್ಚರಿಕೆ ನೀಡಿದ ನ್ಯಾಯಪೀಠ, ನಿಮಗೆ ಮತ್ತೊಮ್ಮೆ ಎಚ್ಚರಿಕೆ ನೀಡಲಾಗುತ್ತಿದೆ. ಆದೇಶದಲ್ಲೂ ಅದನ್ನು ಉಲ್ಲೇಖಿಸಲಾಗಿದೆ. 30 ಸೆಕೆಂಡುಗಳ ಡಿಸ್ಕ್ಲೈಮರ್ ಪ್ರದರ್ಶಿಸುವುದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದೀರಿ. ಜತೆಗೆ, ಮೇಲ್ಮನವಿದಾರರು, ಅವರ ಕುಟುಂಬ ಅಥವಾ ಅವರ ವೈಯಕ್ತಿಕ ಜೀವನ ಅಥವಾ ನಟನಾಗಿ ಅವರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಯಾವುದೇ ನೈಜ ಘಟನೆಗಳು ಚಿತ್ರದಲ್ಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದೀರಿ ಎಂದು ನ್ಯಾಯಾಲಯ ಒತ್ತಿ ಹೇಳಿತು.

ಪ್ರಕರಣವೇನು?

ಸಿರಿ ಪ್ರೊಡಕ್ಷನ್ಸ್ ನಿರ್ಮಾಣದ 'ಬಾಸ್' ಚಲನಚಿತ್ರವನ್ನು 2026ರ ಎಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಚಿತ್ರ‌ತಂಡ ಸಿದ್ಧತೆ ನಡೆಸಿತ್ತು‌. ಈ ಮಧ್ಯೆ ವಿಚಾರಣಾ ನ್ಯಾಯಾಲಯಕ್ಕೆ ದಾವೆ ಸಲ್ಲಿಸಿದ್ದ ದರ್ಶನ್ ಮತ್ತವರ ಪತ್ನಿ ವಿಜಯಲಕ್ಷ್ಮೀ, ಚಿತ್ರದ ಟೀಸರ್‌ನಲ್ಲಿರುವ ಆಡಿಯೋ ಮತ್ತು ದೃಶ್ಯಗಳನ್ನು ಸಾಮಾನ್ಯ ಪ್ರೇಕ್ಷಕರು ನೋಡಿದಾಗ, ಅದು ತಮ್ಮ ಜೀವನ ಮತ್ತು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ್ದೆಂದು ಭಾವಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಚಿತ್ರ ಬಿಡುಗಡೆಯಾದರೆ ತಮ್ಮ ಗೌರವಕ್ಕೆ ಧಕ್ಕೆಯಾಗುವ ಜತೆಗೆ ತಮ್ಮ ಗೌಪ್ಯತೆಯ ಹಕ್ಕು ಹಾಗೂ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕುಗಳ ಉಲ್ಲಂಘನೆಯಾಗಲಿದೆ. ಆದ್ದರಿಂದ,‌ ಚಿತ್ರ ಬಿಡುಗಡೆಗೆ ನಿರ್ಬಂಧ ವಿಧಿಸಬೇಕೆಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ 17ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಂ. ಅನಿತಾ ಅವರು, ನ್ಯಾಯಾಲಯದ ಮುಂದಿನ ಆದೇಶದವರೆಗೆ ಬಾಸ್ ಚಲನಚಿತ್ರವನ್ನು ಚಿತ್ರಮಂದಿರ ಅಥವಾ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆ ಮಾಡದಂತೆ ಚಿತ್ರತಂಡವನ್ನು ನಿರ್ಬಂಧಿಸಿ ಮಾರ್ಚ್ 27ರಂದು ಮಧ್ಯಂತರ ತಡೆಯಾಜ್ಞೆ‌ ನೀಡಿದ್ದರು. ಬಳಿಕ ಜೂನ್ 2ರಂದು ಮಧ್ಯಂತರ ಅರ್ಜಿ ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯ, ಚಲನಚಿತ್ರ ಬಿಡುಗಡೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿತ್ತು. ಇದನ್ನು ಪ್ರಶ್ನಿಸಿ ದರ್ಶನ್ ದಂಪತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News