ಕರಾವಳಿ ಕಂಬಳದಲ್ಲಿ ಕಳೆದು ಹೋದ ‘ಧನ’!
ಚಿತ್ರ: ಕರಾವಳಿ
ನಿರ್ದೇಶನ: ಗುರುದತ್ತ ಗಾಣಿಗ
ನಿರ್ಮಾಣ: ಗುರುದತ್ತ ಗಾಣಿಗ ಮತ್ತು ವಿನೋದ್ ಕುಮಾರ್ ಎಸ್.
ತಾರಾಗಣ: ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಮತ್ತು ಮಿತ್ರ ಮೊದಲಾದವರು.
ಇದು ಕರುನಾಡ ಕರಾವಳಿ ಭಾಗದಲ್ಲಿ ನಡೆಯುವ ಕಂಬಳದ ಆಚರಣೆಯ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಚಿತ್ರ. ಒಬ್ಬ ಜಮೀನ್ದಾರನ ಸ್ವಾರ್ಥ ಮತ್ತು ಕ್ರೌರ್ಯದಿಂದ ಮೂರು ದಶಕಗಳ ಕಾಲ ಸ್ಥಗಿತಗೊಂಡ ಕೋಟಿ-ಚೆನ್ನಯ ಕಂಬಳಕ್ಕೆ ಮರು ಜೀವ ನೀಡುವ ಪ್ರಯತ್ನ ಇಲ್ಲಿದೆ. ಆ ಕಂಬಳ ಸ್ಪರ್ಧೆ ಸ್ಥಗಿತಗೊಂಡಿದ್ದು ಯಾಕೆ? ಅದರ ಹಿನ್ನೆಲೆ ಏನು? ಮತ್ತು ಮೂವತ್ತು ವರ್ಷದ ಬಳಿಕ ಜೀವಂತಿಕೆ ಪಡೆದಿದ್ದು ಹೇಗೆ ಎನ್ನುವುದೇ ಚಿತ್ರದ ಕಥಾ ಸಾರ.
ಊರ ಮಂದಿಯಿಂದ ‘ದನಾ’ ಎಂದು ಕರೆಸಿಕೊಳ್ಳುವ ಧನಂಜಯ ಪಶು ಪ್ರಿಯ. ಹಾಗಾಗಿಯೇ ಮುದ್ದಿನ ದನ ಕಳುವಾದಾಗ ಅದನ್ನು ಹುಡುಕಿ ಊರು ಬಿಟ್ಟು ಹೊರಡುತ್ತಾನೆ. ಹುಡುಕಾಡುತ್ತಾ ಹೋಗಿ ಕಂಬಳ ನಿಂತು ಹೋಗಿರುವ ‘ದೊಡ್ಡವರ’ ಊರು ಸೇರುತ್ತಾನೆ. ದೊಡ್ಡವರಿಗೂ ಧನಂಜಯನ ತಂದೆ ಮಹಾವೀರನಿಗೂ ಇದ್ದ ಫ್ಲ್ಯಾಶ್ ಬ್ಯಾಕ್ ಕಥೆ ಮಧ್ಯಂತರದ ಬಳಿಕ ಆರಂಭವಾಗುತ್ತದೆ.
ಧನಂಜಯನಾಗಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ. ಡಬ್ಬಿಂಗ್‌ನಲ್ಲಿ ಅವರ ಧ್ವನಿ ಬಳಕೆಯಾಗಿಲ್ಲ ಎನ್ನುವುದು ಈಗಾಗಲೇ ವಿವಾದವಾಗಿದೆ. ಈ ಸತ್ಯ ಗೊತ್ತಿದ್ದೇ ವೀಕ್ಷಿಸುವ ಕನ್ನಡದ ಪ್ರೇಕ್ಷಕರ ಪಾಲಿಗೆ ಅದೊಂದು ಕೊರತೆಯಾಗಿ ಕಾಣಿಸುವುದು ನಿಜ. ಮಾತ್ರವಲ್ಲ ಧನಂಜಯ ಧ್ವನಿ ಎತ್ತಿ ಮಾತನಾಡುವ ಸಂದರ್ಭಗಳೂ ಚಿತ್ರದಲ್ಲಿಲ್ಲ. ಯಕ್ಷಗಾನದ ಮಹಿಷಾಸುರನ ವೇಷ ಕಟ್ಟಿದರೂ ಅದರಲ್ಲೊಂದು ಹೆಜ್ಜೆಯನ್ನೂ ಹಾಕಿಸಿಲ್ಲ. ಬಣ್ಣದ ವೇಷ ಹೊಡೆದಾಟದಲ್ಲಿ ಕಳೆದು ಹೋಗಿದೆ. ಆದರೆ ಒಟ್ಟು ಪಾತ್ರಕ್ಕಾಗಿ ಪ್ರಜ್ವಲ್ ಮೈ ಕೆಸರಾಗಿಸಿ ಶ್ರಮ ಪಟ್ಟಿರುವುದಂತೂ ಎದ್ದು ಕಾಣುತ್ತದೆ.
ಮಧ್ಯಂತರದ ಬಳಿಕ ಬರುವ ಮಹಾವೀರನ ಪಾತ್ರವನ್ನು ರಾಜ್ ಬಿ. ಶೆಟ್ಟಿ ನಿಭಾಯಿಸಿದ್ದಾರೆ. ಅವರು ತಮ್ಮ ಎಂದಿನ ನೈಜ ಶೈಲಿಯ ನಟನೆ ನೀಡಿದ್ದಾರೆ. ಆದರೆ ಕಂಬಳದ ಓಟಗಾರನಾಗಿ ಕಾಂತಾರದ ರಿಷಬ್ ಶೆಟ್ಟಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ! ಆ ಛಾಪು ಪ್ರೇಕ್ಷಕರ ಮನದಲ್ಲಿ ಗಟ್ಟಿಯಾಗಿದೆ. ಮಾತ್ರವಲ್ಲ ಅದರಾಚೆಗಿನ ಅಭಿವ್ಯಕ್ತಿ ಇಲ್ಲಿ ಇಲ್ಲ. ‘ಕಾಂತಾರ’ದಲ್ಲಿ ಭೂತ ಕಟ್ಟುವ ತಂದೆ ಮಾಯವಾಗಿರುತ್ತಾನೆ. ಕೋಲ ಕಟ್ಟುವ ಬಗ್ಗೆ ಆಸಕ್ತಿ ಇರದ ಆತನ ಪುತ್ರನ ಮೈಮೇಲೆ ಭೂತ ಬರುವುದೇ ಚಿತ್ರದ ಹೈಲೈಟ್. ಅದೇ ರೀತಿ ‘ಕರಾವಳಿ’ಯಲ್ಲಿ ತಂದೆ ಕಂಬಳ ಗೆದ್ದು ಕೊಲೆಯಾಗಿರುತ್ತಾನೆ. ಕಂಬಳದಲ್ಲಿ ಎಂದೂ ಪಾಲ್ಗೊಂಡಿರದ ಆತನ ಪುತ್ರ ಸ್ಪರ್ಧೆಗೆ ಇಳಿಯುತ್ತಾನೆ. ಎಳೆಯಲ್ಲಿ ಸ್ವಲ್ಪ ಹೋಲಿಕೆ ಇದೆ. ಆದರೆ ಇಲ್ಲಿಯ ಕಥೆ ಧನಂಜಯನನ್ನು ಕೇಂದ್ರವಾಗಿಸುವುದೇ ಇಲ್ಲ. ಹೀಗಾಗಿ ಕರಾವಳಿಯ ಕಂಬಳದಲ್ಲಿ ಕಥಾನಾಯಕ ಕಳೆದು ಹೋಗಿದ್ದಾನೆ.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆದರೆ ಎರಡು ಸ್ತ್ರೀ ಪಾತ್ರಗಳಿಗೂ ಪ್ರಾಧಾನ್ಯ ಸಿಗದಿರುವುದು ಕೊರತೆಯಾಗಿ ಕಾಣುತ್ತದೆ. ಎಲ್ಲರ ನಡುವೆ ಪ್ರಾಮುಖ್ಯತೆ ಪಡೆದಿದ್ದು ಮಾತ್ರ ಮಿತ್ರ ಅವರ ಅಭಿನಯದ ಮಹಾಬಲನ ಪಾತ್ರ. ಆರಂಭದಿಂದ ಅಂತ್ಯದ ತನಕ ಮಾಬಲನಾಗಿ ಎದ್ದು ಕಾಣುತ್ತಾರೆ. ಅದೇ ರೀತಿ ರಮೇಶ್ ಇಂದಿರಾ ಅವರ ಅಭಿನಯ ಈ ಚಿತ್ರದ ಜೀವಾಳ. ಆದಿಶೇಷ ಎನ್ನುವ ‘ದೊಡ್ಡವ’ರಾಗಿ, ಕಂಬಳ ನಡೆಸುವ ಜಮೀನ್ದಾರನಾಗಿ ಇವರ ಅಭಿನಯ ಅನನ್ಯ.
ಕಂಬಳ ಮತ್ತು ಕರಾವಳಿಯ ಸೌಂದರ್ಯ ಹಾಗೂ ಹಾಡುಗಳ ಸೊಬಗು ಅಭಿಮನ್ಯು ಸದಾನಂದನ್ ಛಾಯಾಗ್ರಹಣದಲ್ಲಿ ಸೆರೆಯಾಗಿವೆ. ಸಚಿನ್ ಬಸ್ರೂರ್ ನೀಡಿರುವ ಸಂಗೀತ ಹಾಡು ಗಳನ್ನು ಆಲಿಸುವಂತೆ ಮಾಡಿವೆ. ಕೊರಗರ ಕೊಳಲು ವಾದನವನ್ನು ನೆನಪಿಸುವಂಥ ಹಿನ್ನೆಲೆ ಸಂಗೀತ ಕರಾವಳಿಗೆ ಪೂರಕವೆನಿಸಿದೆ.
ಕಂಬಳದಲ್ಲಿ ಕರಾವಳಿಗರ ಕೋಣಗಳ ಮೇಲಿನ ಪ್ರೀತಿ ಯನ್ನು ತೋರಿಸಿರುವಂತೆ ಜಮೀನ್ದಾರರ ದಬ್ಬಾಳಿಕೆಯನ್ನೂ ತೋರಿಸಲಾಗಿದೆ. ಕರಾವಳಿಯ ಕರಾಳತೆಯ ಕಡೆಗೂ ನಿರ್ದೇಶಕರು ಕಣ್ಣು ಹಾಯಿಸುವಲ್ಲಿ ಗೆದ್ದಿದ್ದಾರೆ. ಆದರೆ ಇಷ್ಟೆಲ್ಲ ನಡೆಯುವಾಗಲೂ ಕರಾವಳಿಯ ಕಾನೂನು ಪಾಲಕ ಪೊಲೀಸರ ಬಗ್ಗೆ ಮಾತಿನಲ್ಲಿಯೂ ಪ್ರಸ್ತಾಪವಿಲ್ಲ ಎನ್ನುವುದು ವಿಪರ್ಯಾಸವೇ ಸರಿ.
ಸಿನೆಮಾದ ಒಟ್ಟು ಕಾಲಾವಧಿ ಎರಡು ಗಂಟೆ 6 ನಿಮಿಷ. ಸ್ಲೋಮೋಶನ್‌ನಲ್ಲಿರುವ ದೃಶ್ಯಗಳಿಗೆ ಸಹಜ ವೇಗ ನೀಡಿದ್ದಲ್ಲಿ ಇನ್ನೂ ಅರ್ಧ ತಾಸು ಕಡಿಮೆಯಾಗುತ್ತಿತ್ತೇನೋ ಎಂದು ಅನಿಸಿದ್ದು ಮಾತ್ರ ಸತ್ಯ.