×
Ad

ʼಜನ ನಾಯಗನ್ʼ ವಿಳಂಬ | 100 ಕೋಟಿ ರೂ. ನಷ್ಟ ಎದುರಿಸುತ್ತಿರುವ ತಮಿಳು ಚಿತ್ರರಂಗ!

ಏನಿದು ತಮಿಳು ಚಿತ್ರರಂಗದ ಬಿಕ್ಕಟ್ಟು?

Update: 2026-02-03 15:26 IST
Photo source: X/@actorvijay

ಸೆನ್ಸಾರ್ ಮಂಡಳಿ ‘ಜನ ನಾಯಗನ್’ ಸಿನಿಮಾಗೆ ಪ್ರಮಾಣಪತ್ರ ನೀಡದೆ ಸತಾಯಿಸುತ್ತಿದ್ದು, ಚಿತ್ರತಂಡ ನ್ಯಾಯಾಲಯ ಹೋರಾಟದಲ್ಲಿ ತೊಡಗಿದೆ. ವಿಜಯ್ ನಟನೆಯ ಸಿನಿಮಾ ಬಿಡುಗಡೆಯಾಗುತ್ತಿದ್ದರೆ ಚಿತ್ರಮಂದಿರಗಳು ಸಮಾಧಾನದ ಉಸಿರಾಡುತ್ತಿದ್ದವು. ಆದರೆ ಇದೀಗ ತಮಿಳುನಾಡಿನ ಚಿತ್ರಮಂದಿರಗಳು ಮತ್ತು ಬಾಕ್ಸ್ ಆಫೀಸ್ ಸ್ಥಿತಿ ಕರಾಳವಾಗಿದೆ.

ದಳಪತಿ ವಿಜಯ್ ಅವರ ‘ಜನ ನಾಯಗನ್’ ಜನವರಿ 9ರಂದು ಅದ್ದೂರಿಯಾಗಿ ಬಿಡುಗಡೆಯಾಗಬೇಕಿತ್ತು. ವಿಜಯ್ ಅವರು ಪೂರ್ಣಾವಧಿ ರಾಜಕೀಯಕ್ಕೆ ಪ್ರವೇಶಿಸುವ ಮೊದಲ ವಿದಾಯ ಚಿತ್ರ ಇದಾಗಿತ್ತು. ಹೀಗಾಗಿ ಚಿತ್ರಮಂದಿರಗಳ ಮಾಲೀಕರಿಗೆ ‘ಜನ ನಾಯಗನ್’ ಚಿತ್ರದ ಬಿಡುಗಡೆ ದೊಡ್ಡ ಜಾಕ್ಪಾಟ್ ಆಗಿತ್ತು. ನವೆಂಬರ್ ಮತ್ತು ಡಿಸೆಂಬರ್ ನಡುವೆ ದೊಡ್ಡ ಸಿನಿಮಾಗಳು ಇಲ್ಲದ ಕಾರಣ ಪ್ರದರ್ಶಕರು ಮತ್ತು ಚಿತ್ರವಿತರಕರು ಜನವರಿ 9ರಂದು ‘ಜನನಾಯಗನ್’ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸಿನಿಮಾಗೆ ಸೆನ್ಸಾರ್ ಪ್ರಮಾಣಪತ್ರ ನೀಡದೆ ಚಿತ್ರತಂಡ ಕಾನೂನು ಮೆಟ್ಟಿಲು ಹತ್ತಬೇಕಾಗಿ ಬಂದಿತ್ತು.

ಸೆನ್ಸಾರ್ ಮಂಡಳಿ ಸಿನಿಮಾಗೆ ಪ್ರಮಾಣಪತ್ರ ನೀಡದೆ ಸತಾಯಿಸುತ್ತಿದ್ದು, ಚಿತ್ರತಂಡ ನ್ಯಾಯಾಲಯ ಹೋರಾಟದಲ್ಲಿ ತೊಡಗಿದೆ. ವಿಜಯ್ ನಟನೆಯ ಸಿನಿಮಾ ಬಿಡುಗಡೆಯಾಗುತ್ತಿದ್ದರೆ ಚಿತ್ರಮಂದಿರಗಳು ಸಮಾಧಾನದ ಉಸಿರಾಡುತ್ತಿದ್ದವು. ಆದರೆ ಇದೀಗ ತಮಿಳು ನಾಡು ಚಿತ್ರಮಂದಿರಗಳು ಮತ್ತು ಬಾಕ್ಸ್ ಆಫೀಸ್ ಸ್ಥಿತಿ ಕರಾಳವಾಗಿದೆ.

ಪೊಂಗಲ್ ಸಮಯದಲ್ಲಿ ನೂರು ಕೋಟಿ ನಷ್ಟ:

ವ್ಯಾಪಾರ ವಿಶೇಷಜ್ಞರು ಮಾಧ್ಯಮಗಳಿಗೆ ಹೇಳಿರುವ ಪ್ರಕಾರ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರು ಮಕರ ಸಂಕ್ರಾಂತಿಯ ಸಮಯದಲ್ಲಿ ‘ಜನನಾಯಗನ್’ ಬಿಡುಗಡೆಯಾಗದೆ ರೂ 100 ಕೋಟಿ ನಷ್ಟವನ್ನು ಅನುಭವಿಸಿವೆ. ವ್ಯಾಪಾರ ವಿಶ್ಲೇಷಕ ರಮೇಶ್ ಬಾಲ ಪ್ರಕಾರ, ಮಕರ ಸಂಕ್ರಾಂತಿಗೆ ವಿಜಯ್ ನಟನೆಯ ಜನನಾಯಗನ್ ಮತ್ತು ಶಿವಕಾರ್ತಿಕೇಯ ನಟನೆಯ ‘ಪರಾಸಕ್ತಿ’ ಸಿನಿಮಾಗಳು ಬಿಡುಗಡೆಯಾಗಿದ್ದರೆ ಚಿತ್ರಮಂದಿರಗಳು ಹಬ್ಬ ಆಚರಿಸುತ್ತಿದ್ದವು. ವಿಜಯ್ ಸಿನಿಮಾ ಒಂದೇ 150-200 ರೂ. ಆದಾಯ ಗಳಿಸುತ್ತಿತ್ತು. ಆದರೆ, ಅತ್ತ ಪರಾಸಕ್ತಿ ಸಿನಿಮಾ ಒಂದೇ ಬಿಡುಗಡೆಯಾಗಿ 55 ಕೋಟಿ ರೂಗಳನ್ನಷ್ಟೇ ಗಳಿಸಲು ಸಾಧ್ಯವಾಗಿದೆ.

ಮಕರ ಸಂಕ್ರಾಂತಿಯ ಸಮಯದಲ್ಲಿ ಬಿಡುಗಡೆಯಾಗಿದ್ದ ಕಾರ್ತಿಯ ‘ವಾ ವಾಥೀಯಾರ್’ ಲಾಭವೇ ಗಳಿಸಲಿಲ್ಲ. ಜೀವಾ ನಟನೆಯ ‘ತಲೈವಾರ್ ತಂಬಿ ತಲೈಮಯಿಲ್’ ತಮಿಳುನಾಡಿನಲ್ಲಿ 30 ಕೋಟಿ ರೂ.ಗಳನ್ನಷ್ಟೇ ಬಾಚಲು ಸಾಧ್ಯವಾಗಿದೆ. ಹೀಗಾಗಿ ಚಿತ್ರಮಂದಿರಗಳಿಗೆ ‘ಜನ ನಾಯಗನ್’ ಬಿಡುಗಡೆಯಾಗದೆ ದೊಡ್ಡ ನಷ್ಟವಾಗಿದೆ.

ಚಿಂತಾಜನಕ ಸ್ಥಿತಿಯಲ್ಲಿ ತಮಿಳು ಸಿನಿಮಾರಂಗ

ಚೆನ್ನೈನ ಜಿಕೆ ಸಿನಿಮಾಸ್ ಮಾಲೀಕರಾಗಿರುವ ರೂಬನ್ ಮಥಿವಣ್ಣನ್ ತಮಿಳು ಸಿನಿಮಾದಲ್ಲಿ ಆತಂಕಕಾರಿ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ‘ಜನ ನಾಯಗನ್’ ಸಿನಿಮಾ ಬಿಡುಗಡೆ ವಿಳಂಬ ಮತ್ತು ಬಿಡುಗಡೆ ಮೇಲಿರುವ ಅನಿಶ್ಚಿತತೆಯಿಂದಾಗಿ ಮುಂದಿನ ಕೆಲವು ತಿಂಗಳ ಬಿಡುಗಡೆ ವೇಳಾಪಟ್ಟಿಗೆ ತೊಂದರೆಯಾಗಿದೆ.

ರೂಬನ್ ಹೇಳುವ ಪ್ರಕಾರ, ಈಗಿನ ಕರಾಳ ಸಮಯವು ತಮಿಳು ಚಿತ್ರರಂಗದಲ್ಲಿ ಬಾಲಿವುಡ್ ರೀತಿಯ ಸ್ಥಿತಿ ತಂದಿಡಬಹುದು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಮುಚ್ಚುವಂತಹ ಸ್ಥಿತಿ ಬರಬಹುದು. ಮಲ್ಟಿಪ್ಲೆಕ್ಸ್ ಸರಪಣಿಗಳೇ ಮಾರುಕಟ್ಟೆ ಮೇಲೆ ತಮ್ಮ ಪ್ರಭಾವ ಬೀರಬಹುದು. “ನಮಗೆ ಸೂಕ್ತ ಬಿಡುಗಡೆ ವೇಳಾಪಟ್ಟಿಯ ಅಗತ್ಯವಿದೆ. ಚಿತ್ರ ನಿರ್ಮಾಪಕರು ತಮ್ಮ ವೇಳಾಪಟ್ಟಿಗೆ ಅನುಗುಣವಾಗಿಯೇ ಸಿನಿಮಾ ಬಿಡುಗಡೆ ಮಾಡಬೇಕು. ಕಾಲಿವುಡ್ನಲ್ಲಿ ಬಾಲಿವುಡ್ನಂತಹ ಸ್ಥಿತಿ ಬಾರದೆ ಇರುವುದನ್ನು ಖಚಿತಪಡಿಸಬೇಕು” ಎಂದು ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಮಾಧ್ಯಮದ ಜೊತೆಗೆ ಮಾತನಾಡಿದ ರೂಬನ್ ಹೇಳುವ ಪ್ರಕಾರ, “ಚಿತ್ರಮಂದಿರದ ಮಾಲೀಕರಾಗಿ ನಮಗೆ ‘ಜನನಾಯಗನ್’ ಮೇಲೆ ಬಹಳ ಭರವಸೆ ಇತ್ತು. ಆದರೆ ಈಗ 2026ರ ಮೊದಲ ಭಾಗ ಬಿಕ್ಕಟ್ಟು ಎದುರಿಸಿದೆ. ಅಕ್ಟೋಬರ್ ನಲ್ಲಿ ಬಂದ ‘ಬೈಸನ್’ ಮತ್ತು ‘ಡ್ಯೂಡ್’ ಸಿನಿಮಾದ ಬಳಿಕ ದೊಡ್ಡ ಬಜೆಟ್ ನ ಸಿನಿಮಾಗಳೇ ಇಲ್ಲ. “ಆನ್ ಪಾವಮ ಪೊಲ್ಲತಡು’ ಮತ್ತು ‘ಸಿರೈ’ ಉತ್ತಮ ಗಳಿಕೆ ತೋರಿಸಿದ್ದರೂ, ‘ಜನನಾಯಗನ್’ ಬಿಡುಗಡೆ ಚಿತ್ರರಂಗಕ್ಕೆ ಪುನಶ್ಚೇತನ ಕೊಡುತ್ತಿತ್ತು. ಅದರಿಂದಾಗಿ 2-3 ತಿಂಗಳು ಉಳಿವು ಸಿಗುತ್ತಿತ್ತು. ಪೊಂಗಲ್ ಸಮಯದಲ್ಲಿ ಹತ್ತು ದಿನಗಳ ದೀರ್ಘ ರಜಾ ಇರುವ ಕಾರಣ ‘ಜನ ನಾಯಗನ್’ ಬಿಡುಗಡೆಗೆ ಉತ್ತಮ ಸಮಯವಾಗಿತ್ತು.”

ಅವರ ಪ್ರಕಾರ, 2025 ನವೆಂಬರ್ ನಿಂದ ತಮಿಳು ಸಿನಿಮಾದಲ್ಲಿ ಬಹಳ ನಷ್ಟದ ಸಮಯ ನಡೆಯುತ್ತಿದೆ. ಸಾಮಾನ್ಯವಾಗಿ ಕೆಲವೊಂದು ಉತ್ತಮ ಸಿನಿಮಾಗಳು ಬಿಡುಗಡೆಯಾಗಿ ನಷ್ಟವನ್ನು ಭರಿಸುತ್ತಿದ್ದವು. ಆದರೆ ಇದೀಗ 4-5 ತಿಂಗಳ ಕಾಲ ಯಾವುದೇ ದೊಡ್ಡ ಸಿನಿಮಾ ಬರದ ಕಾರಣ ಅಸ್ತಿತ್ವ ಉಳಿಸಿಕೊಳ್ಳುವ ಪ್ರಶ್ನೆ ಬಂದಿದೆ.

ಏನಿದು ತಮಿಳು ಚಿತ್ರರಂಗದ ಬಿಕ್ಕಟ್ಟು?

‘ಜನ ನಾಯಗನ್’ ಚಿತ್ರ ಬಿಡುಗಡೆ ವಿಳಂಬದ ನಂತರ ಕಾನೂನು ವಿವಾದ ಬಗೆಹರಿದು ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ ರಮೇಶ್ ಬಾಲಾ ಪ್ರಕಾರ, “ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಯಾದರೂ ದೀರ್ಘ ಸಮಯ ಓಡುವ ಸಾಧ್ಯತೆಯಿಲ್ಲ. ಚುನಾವಣಾ ಆಯೋಗವು ತಮಿಳುನಾಡು ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದರೆ ಸಿನಿಮಾ ಮುಂದುವರಿಯುವುದು ಸಾಧ್ಯವಿಲ್ಲ! ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಯಾವುದೇ ಸಂಭಾವ್ಯ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. 15 ಕೋಟಿ ರೂ. ಗಳಿಸಬಹುದಾದ ಸಣ್ಣ ಬಜೆಟ್ ಸಿನಿಮಾಗಳು ಮಾತ್ರ ಮುಂದಿನ ಕೆಲವು ತಿಂಗಳುಗಳಿಗೆ ನಿಗದಿಯಾಗಿವೆ. ‘ಜನ ನಾಯಗನ್’ ಬಿಡುಗಡೆಯಾದರೆ ಜನರು ಕುಟುಂಬವಾಗಿ ಚಿತ್ರಮಂದಿರಕ್ಕೆ ಬರಬಹುದು ಎನ್ನುವ ನಿರೀಕ್ಷೆ ಇದೆ. ಆದರೆ ಪ್ರಸ್ತುತ ವಿಜಯ್ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವುದೇ ಸ್ಪಷ್ಟವಾಗಿಲ್ಲ.”

ಚುನಾವಣಾ ನೀತಿ ಸಂಹಿತೆಯ ಆತಂಕ

ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದರೆ ಚುನಾವಣಾ ಆಯೋಗವು ರಾಜಕೀಯ ವಿಷಯಗಳು ಇರುವ ಸಿನಿಮಾಗಳ ಬಿಡುಗಡೆಗೆ ತಡೆಯೊಡ್ಡಬಹುದು. ಅಂತಹ ಸಿನಿಮಾಗಳು ಮತದಾರರ ಮೇಲೆ ಪ್ರಭಾವ ಬೀರಬಹುದು ಎಂದು ಹೇಳುವ ಸಾಧ್ಯತೆಯಿದೆ. ಹೀಗಾಗಿ ‘ಜನ ನಾಯಗನ್’ ಸೀಮಿತ ಸಮಯಕ್ಕೆ ಮಾತ್ರ ಪ್ರದರ್ಶನ ಕಾಣುವ ಸಾಧ್ಯತೆಯಿದೆ. ಇಂತಹ ಬಹಳಷ್ಟು ಅನಿಶ್ಚಿತತೆ ನಡುವೆ ಮಾರ್ಚ್ನಲ್ಲಿ ಬಿಡುಗಡೆಯಾಗಬೇಕಾದ ಸಿನಿಮಾಗಳು ತಮ್ಮ ದಿನಾಂಕವನ್ನು ಹೊಂದಿಸಲು ಎದುರು ನೋಡುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News