ʼಸೀತಾರಾಮ್ ಬಿನೋಯ್ʼ ಸಿನಿಮಾದ ಸೀಕ್ವೆಲ್ ಟೀಸರ್ ಬಿಡುಗಡೆ
ಸೀತಾರಾಮ್ ಬಿನೋಯ್ | Photo Credit : imdb.com
ದೇವಿಪ್ರಸಾದ್ ಶೆಟ್ಟಿ ನಿರ್ದೇಶನದ ‘ಸೀತಾರಾಮ್ ಬಿನೋಯ್ ಸೆಕೆಂಡ್ ಕೇಸ್’ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರು ಪೊಲೀಸ್ ಅಧಿಕಾರಿಯಾಗಿ ಮತ್ತೊಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.
ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿನೋಯ್’ ಸಿನಿಮಾದ ಸೀಕ್ವೆಲ್ ಬರುತ್ತಿದ್ದು, ಮಂಗಳವಾರ ಸಂಜೆ ಟೀಸರ್ ಬಿಡುಗಡೆಯಾಗಿದೆ. ಸಿನಿಮಾ 2026 ಫೆಬ್ರವರಿ 20ರಂದು ತೆರೆ ಮೇಲೆ ಬರಲಿದೆ.
2021ರಲ್ಲಿ ತೆರೆಕಂಡ ‘ಸೀತಾರಾಮ್ ಬಿನೋಯ್’ನಲ್ಲಿ ವಿಜಯ್ ರಾಘವೇಂದ್ರ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಆ ಸಿನಿಮಾದ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಸೀಕ್ವೆಲ್ ಸಿನಿಮಾಗೂ ಕತೆ ಬರೆದಿದ್ದು, ನಿರ್ದೇಶನ ಮಾಡಿದ್ದಾರೆ. ವಿಜಯ್ ರಾಘವೇಂದ್ರ ಅವರು ಪೊಲೀಸ್ ಅಧಿಕಾರಿಯಾಗಿ ಮತ್ತೊಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.
ದೇವಿಪ್ರಸಾದ್ ಅವರು ಸಾತ್ವಿಕ ಹೆಬ್ಬಾರ್ ಜೊತೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ. ಅರವಿಂದ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ. ಸಿನಿಮಾಗೆ ಹೇಮಂತ್ ಆಚಾರ್ ಛಾಯಾಗ್ರಹಣವಿದೆ. ನವನೀತ್ ಶ್ಯಾಮ್ ಸಂಗೀತ ನಿರ್ದೇಶಿಸಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನ, ಭವಾನಿ ಶಂಕರ್ ಕಲಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.
“ಕೆಲವು ಕತೆಗಳು ಇನ್ನಷ್ಟು ದೃಢವಾಗಿ ಹೊರಗೆ ಬರುತ್ತವೆ” ಎನ್ನುವ ಸಂದೇಶದ ಜೊತಗೆ ನಿರ್ದೇಶಕ ಪವರ್ ಒಡೆಯರ್ ಟೀಸರ್ ಬಿಡುಗಡೆ ಮಾಡಿದ್ದಾರೆ. ‘ಗೂಗ್ಲಿ’, ‘ರಣವಿಕ್ರಮ’, ‘ಗೋವಿಂದಾಯ ನಮಃ’ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಪವನ್ ಒಡೆಯರ್ ಪವನ್ ನಿರ್ಮಾಣದಲ್ಲೂ ಹೆಸರು ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿರುವ ಶಿವರಾಜ್ಕುಮಾರ್, ನಟ ದನಂಜಯ್ ಮೊದಲಾದವರು ಚಿತ್ರ ತಂಡಕ್ಕೆ ಶುಭ ಹಾರೈಸಿದೆ. “ವಿಜಯ ರಾಘವೇಂದ್ರ ಅಭಿನಯದ ಚಿತ್ರಗಳಲ್ಲಿ 'ಸೀತಾರಾಮ್ ಬಿನೋಯ್' ನನ್ನ ನೆಚ್ಚಿನ ಚಿತ್ರ. ಹೊಸ ತಂಡ ಸೇರಿಕೊಂಡು ಒಂದೊಳ್ಳೇ ಸಿನಿಮಾ ಮಾಡಿದ್ರು. ಈಗ ಆ ತಂಡ ಮತ್ತೆ ಜೊತೆಗೂಡಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಚಿತ್ರ ತೆರೆ ಮೇಲೆ ತರಲು ರೆಡಿ ಆಗಿದ್ದಾರೆ. ಪವನ್ ವಡೆಯರ್ ಹಾಗೂ ಇಡೀ ತಂಡಕ್ಕೆ ಶುಭವಾಗಲಿ” ಎಂದು ನಟ ಶಿವರಾಜ್ಕುಮಾರ್ ಸಂದೇಶ ಬರೆದಿದ್ದಾರೆ.