ಕುಂಡೇಸಿಯ ಬಾಲ್ಯದ ಗಂಡಾಂತರದ ದಿನಗಳು
ಚಿತ್ರ: ವಲವಾರ
ನಿರ್ದೇಶನ: ಸುತನ್ ಗೌಡ
ನಿರ್ಮಾಣ: ಗಿರಿಧರ್ ಜಯಕುಮಾರ್, ಅನಿರುದ್ಧ್ ಗೌತಮ್
ತಾರಾಗಣ: ಮಾ. ವೇದಿಕ್ ಕೌಶಲ್, ಮಾ. ಶಯನ್, ಹರ್ಷಿತಾ ಗೌಡ ಮೊದಲಾದವರು.
‘ವಲವಾರ’ ಎನ್ನುವ ಹೆಸರೇ ಚಿತ್ರದ ಬಗ್ಗೆ ಮೊದಲ ಕುತೂಹಲವಾಗಿ ಕಾಡುತ್ತದೆ. ತಾರತಮ್ಯ ಎನ್ನುವ ಅರ್ಥ ನೀಡುವ ಈ ಪದವನ್ನು ರಾಜ್ಯದ ಪಶ್ಚಿಮಘಟ್ಟ ಭಾಗದ ಕನ್ನಡಿಗರು ಬಳಸುವುದಾಗಿ ಚಿತ್ರ ಸೂಚಿಸುತ್ತದೆ. ತಂದೆಯೋರ್ವ ತನ್ನ ಇಬ್ಬರು ಮಕ್ಕಳ ಮಧ್ಯೆ ನಡೆಸುವ ತಾರತಮ್ಯ ಮುಂದೆ ಏನೆಲ್ಲ ಘಟನೆಗಳಿಗೆ ಕಾರಣವಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ.
ಅದೊಂದು ಹಳ್ಳಿಗಾಡು. ಅಲ್ಲಿ ಬಡ ದಂಪತಿ ತಮ್ಮ ಇಬ್ಬರು ಪುಟ್ಟ ಗಂಡು ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ತಾಯಿ ಇಬ್ಬರಿಗೂ ಮುದ್ದಿನಿಂದ ಅಡ್ಡ ಹೆಸರಿಟ್ಟಿರುತ್ತಾಳೆ. ಕಿರಿಯವನು ಕೋಸುಡಿಯಾದರೆ ಹಿರಿಯವನು ಕುಂಡೇಸಿ.
ಇಬ್ಬರ ವಯಸ್ಸಿನ ಮಧ್ಯೆ ಹೆಚ್ಚಿನ ಅಂತರವಿಲ್ಲ. ಆದರೆ ಕಿರಿ ಮಗನನ್ನು ಪ್ರೀತಿಸುವ ತಂದೆ ಹಿರಿ ಮಗನಿಗೆ ಹೊಡೆಯುವುದೇ ಹೆಚ್ಚು. ಇದರಿಂದ ತಂದೆ ಮೇಲೆ ಕಿಚ್ಚು ಮೂಡಿಸಿಕೊಳ್ಳುವ ಹುಡುಗ ಮುಂದೇನು ಮಾಡುತ್ತಾನೆ ಎನ್ನುವುದೇ ಚಿತ್ರದ ಕಥಾ ವಿಷಯ.
ಕಿರಿಯ ಪುತ್ರ ಕೋಸುಡಿ ತಂದೆ ತಾಯಿ ಇಬ್ಬರ ಮುದ್ದಿನಿಂದ ಬೆಳೆದವನು. ಹೀಗಾಗಿಯೇ ತಂದೆಯ ಹೆಸರು ಹೇಳಿ ಅಣ್ಣ ಕುಂಡೇಸಿಯನ್ನು ಬೆದರಿಸಬಲ್ಲ. ತಂದೆಗೆ ಅಣ್ಣನ ಮೇಲಿರುವ ದ್ವೇಷವನ್ನೇ ಕೋಸುಡಿ ತನ್ನ ಶಕ್ತಿಯಾಗಿ ಬಳಸುತ್ತಿರುತ್ತಾನೆ. ಇದನ್ನು ಅರ್ಥಮಾಡಿಕೊಂಡ ತಾಯಿ ಸದಾ ಕುಂಡೇಸಿ ಪರವಾಗಿ ಇರುತ್ತಾಳೆ. ಆದರೆ ತಂದೆಯಂತೆ ತನ್ನ ತಾಯಿ ಇಬ್ಬರು ಮಕ್ಕಳ ಮಧ್ಯೆ ವಲವಾರ ಮಾಡುವುದಿಲ್ಲ ಎಂದು ಬಲವಾಗಿ ನಂಬಿರುವವನು ಕುಂಡೇಸಿ. ಈತ ಬಹಳಷ್ಟು ಬಾರಿ ತಪ್ಪೇ ಮಾಡಿರುವುದಿಲ್ಲ. ಆದರೆ ತಮ್ಮನ ಸುಳ್ಳು ಆರೋಪಗಳಿಂದಾಗಿ ತಂದೆಯಿಂದ ಏಟು ತಿನ್ನುತ್ತಿರುತ್ತಾನೆ. ಇಂಥ ಬಡಪಾಯಿ ಒಮ್ಮೆ ನಿಜಕ್ಕೂ ದೊಡ್ಡ ತಪ್ಪನ್ನೇ ಮಾಡುತ್ತಾನೆ. ಮೇಯಿಸಲೆಂದು ಕರೆದೊಯ್ದ ಗಬ್ಬದ ದನ ಗೌರ ಕುಂಡೇಸಿಯದೊಂದು ತಪ್ಪಿನಿಂದಾಗಿ ನಾಪತ್ತೆಯಾಗುತ್ತದೆ. ಆ ಹುಡುಗ ಅದರ ಹುಡುಕಾಟ ಹೇಗೆ ಮಾಡುತ್ತಾನೆ? ದನ ಕಂಡರೂ ಕೈಗೆ ಸಿಗದಂತೆ ಕಾಡುವ ಸಂದರ್ಭ ಬರುವುದು ಯಾಕೆ? ಇಷ್ಟೊಂದು ದೊಡ್ಡ ತಪ್ಪಿನ ನಡುವೆ ತಂದೆಯ ವಲವಾರ ಬದಲಾಗುವ ಸಾಧ್ಯತೆ ಇದೆಯಾ? ಇವೆಲ್ಲವನ್ನು ನಿರ್ದೇಶಕ ಸುತನ್ ಗೌಡ ಆಕರ್ಷಕವಾಗಿ ತೆರೆಗಿಳಿಸಿದ್ದಾರೆ.
ಕುಂಡೇಸಿಯಾಗಿ ಬಾಲ ನಟ ವೇದಿಕ್ ಕೌಶಲ್ ನಟನೆ ಆಕರ್ಷಕ. ತಾನು ಎತ್ತಿಟ್ಟ ಹಣವನ್ನು ತಾನಾಗಿಯೇ ತಾಯಿಯ ಕೈಗೆ ನೀಡುವ ದೃಶ್ಯ ಒಂದಿದೆ. ಅದೊಂದರಲ್ಲೇ ನಿರ್ದೇಶಕರು ಈ ಹುಡುಗನನ್ನು ಪ್ರೇಕ್ಷಕರ ಮನದೊಳಗೆ ಸೇರಿಸಿಬಿಡುತ್ತಾರೆ. ಕಿರಿಯ ಹುಡುಗ ಕೋಸುಡಿಯಾಗಿ ನಟಿಸಿರುವ ಶಯನ್‌ನಿಂದಲೂ ನೈಜ ನಟನೆ ಹೊರ ತೆಗೆಸಿರುವುದನ್ನು ಮೆಚ್ಚಲೇಬೇಕು. ಇಬ್ಬರು ಮಕ್ಕಳ ತಾಯಿಯಾಗಿ, ಗಂಡನನ್ನು ಅನುಸರಿಸುವ ಪತ್ನಿಯಾಗಿ ಹರ್ಷಿತಾ ಗೌಡ ಅಭಿನಯಿಸಿದ್ದಾರೆ.ಕುಂಡೇಸಿಯನ್ನು ಕಂಡರಾಗದು ಎನ್ನುವಂತಾಡುವ ತಂದೆಯಾಗಿ ಮಾಲತೇಶ್ ನಟಿಸಿದ್ದಾರೆ.
ಚಿತ್ರದಲ್ಲಿ ಬೆರಳೆಣಿಕೆಯ ಪಾತ್ರಗಳಷ್ಟೇ ಇದ್ದರೂ ಅವುಗಳಲ್ಲೇ ಹಳ್ಳಿಯ ಬೆರಗನ್ನು ಕಟ್ಟಿಕೊಡಲಾಗಿದೆ. ಗಬ್ಬದ ದನ ಗೌರ ಕೂಡ ಒಂದು ಪ್ರಧಾನ ಪಾತ್ರವಾಗಿದೆ. ಕೋಳಿಯಿಂದ ಹಿಡಿದು ನವಜಾತ ಕರುವಿನ ತನಕ ಎಲ್ಲವೂ ಪಾತ್ರವನ್ನು ಅರಿತು ನಟಿಸಿದಂತಿದೆ. ಪೋಲಿ ಹುಡುಗ ಮುದ್ದುಕುಮಾರನ ಪಾತ್ರದಲ್ಲಿ ಅಭಯ್ ಜೀವಿಸಿದ್ದಾರೆ. ಇಂಥದೊಂದು ಪಾತ್ರದಿಂದಲೂ ಕುಂಡೇಸಿಗೆ ಜೀವನ್ಮುಖಿ ಸಂದೇಶಗಳನ್ನು ಕೊಡಿಸಲಾಗಿದೆ. ಪಾತ್ರಧಾರಿಗಳ ವಸ್ತ್ರದಿಂದ ಹಿಡಿದು ಕೋಳಿ ಒಯ್ಯುವ ಚೀಲದ ತನಕ ಪ್ರಸಾಧನ, ಕಲೆ ಸೇರಿದಂತೆ ಬಾಲರಾಜ್ ಗೌಡ ಛಾಯಾಗ್ರಹಣ ಎಲ್ಲವೂ ಅಚ್ಚುಕಟ್ಟು. ಸಿಂಕ್ ಸೌಂಡ್ ತಂತ್ರಜ್ಞಾನ ಸೌಂಡ್ ಮಾಡಿದೆ. ಆದರೆ ಮಕ್ಕಳ ಮೈಗೆ ಕಟ್ಟಿದ ಮೈಕ್ ಒಂದೆರಡು ದೃಶ್ಯಗಳಲ್ಲಿ ಗೋಚರವಾಗಿಬಿಡುತ್ತದೆ. ಮಣಿಕಾಂತ್ ಕದ್ರಿ ಸಂಗೀತ ಮಕ್ಕಳ ಧ್ವನಿಯೇ ಆದಂತಿದೆ.
ಮಕ್ಕಳ ಬಗ್ಗೆಯೇ ಸಾಗುವ ಕಥೆಯನ್ನು ಎಲ್ಲರೂ ಆಸಕ್ತಿಯಿಂದ ನೋಡುವ ಚಿತ್ರವಾಗಿಸಿದ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು.