ಕೊಲುವವನೇ ಭೂಮಿಗೆ ಒಡೆಯ..!
ಚಿತ್ರ: ಲ್ಯಾಂಡ್ ಲಾರ್ಡ್
ನಿರ್ದೇಶನ: ಜಡೇಶ್ ಕೆ. ಹಂಪಿ
ನಿರ್ಮಾಣ: ಕೆ.ಎಸ್. ಸೂರಜ್ ಗೌಡ ಮತ್ತು ಕೆ.ವಿ. ಸತ್ಯ ಪ್ರಕಾಶ್
ತಾರಾಗಣ: ವಿಜಯ್ ಕುಮಾರ್, ರಚಿತಾ ರಾಮ್ ಮೊದಲಾದವರು.
ಇದು ಸುಮಾರು ಎಪ್ಪತ್ತರ ದಶಕದಲ್ಲಿ ಆಂಧ್ರ ಕರ್ನಾಟಕ ಗಡಿಭಾಗದಲ್ಲಿ ನಡೆಯುವ ಕಥೆ. ಕಣ್ಣಲ್ಲಿ ರಕ್ತವೇ ಇಲ್ಲದಂಥ ನಿಷ್ಕರುಣೆಯ ದುರಾತ್ಮ ಜಮೀನ್ದಾರರ ಕೈಕೆಳಗೆ ಜೀತದಾಳಾಗಿ ನರಳುವವರ ಕಥೆ. ಅದರಲ್ಲೊಬ್ಬ ಸಿಡಿದು ನಿಲ್ಲುವ ಜೀತಗಾರನೇ ನಾಯಕ. ಉಳಿದಂತೆ ಎಲ್ಲವು ಕಲ್ಪಿಸಿಕೊಳ್ಳಬಹುದಾದ ಕಥೆ. ಆದರೆ ನಿರ್ದೇಶಕ ತನ್ನ ತಂಡದೊಂದಿಗೆ ಅಂದಿನ ಸನ್ನಿವೇಶವನ್ನು ಕಟ್ಟಿ ಕೊಟ್ಟಿರುವ ರೀತಿ ಮತ್ತು ಕಮರ್ಷಿಯಲ್ ಕಲಾವಿದರಲ್ಲಿನ ಕಲಾಭಿನಯದ ಕ್ರಾಂತಿ ವಿಭಿನ್ನ.
ಆ ಊರಿನ ಹೆಸರು ಹುಲಿ ದುರ್ಗ. ಅಲ್ಲಿ ನರಭಕ್ಷಕ ಹುಲಿಯಂತೆ ಮೆರೆದಾಡುವವನೇ ಸಣ್ಣದಣಿ ಎನ್ನುವ ಜಮೀನ್ದಾರ. ತಮ್ಮಲ್ಲಿ ಜೀತ ಮಾಡುವವರ ಕೈಗೆ ಯಾವ ಕಾರಣಕ್ಕೂ ಭೂಮಿ ಸಿಗಬಾರದು ಎನ್ನುವುದೇ ಅವರ ಧ್ಯೇಯ. ಅದರಾಚೆಗೆ ಊರಿನ ತಗ್ಗಿನ ಕೇರಿಯ ಮೈನೆರೆದ ಯುವತಿಯರನ್ನು ಊರ ಬಸವಿ ಮಾಡುವುದು, ಅವಳಲ್ಲೊಬ್ಬಾಕೆಯನ್ನು ಇಟ್ಟುಕೊಳ್ಳುವುದು ಎಲ್ಲವೂ ಆತನ ಖಯಾಲಿಗಳು. ಇಂಥ ಊರಿನಲ್ಲಿ ಬೆಳೆದ ಮಗಳನ್ನು ಪೊಲೀಸ್ ಕೆಲಸಕ್ಕೆ ಸೇರಿಸಲು ಬಂದ ಬಡವ ರಾಚಯ್ಯ. ಆತನಿಗೆ ಎರಡು ಎಕರೆ ಭೂಮಿ ಕೊಳ್ಳುವ ಆಸೆ. ಆದರೆ ಆಸೆಯ ಹಿನ್ನೆಲೆ ಏನು? ಕೂಲಿಗಳನ್ನು ಜೀತದಾಳಾಗಿ ನಡೆಸುವ ಜಮೀನ್ದಾರರ ಮುಂದೆ ರಾಚಯ್ಯ ಆಸೆ ಈಡೇರುವುದಾದರೂ ಹೇಗೆ? ಈ ಸಂಘರ್ಷದ ಕಥೆಯೇ ಲ್ಯಾಂಡ್ ಲಾರ್ಡ್.
ವಿಜಯ್ ಕುಮಾರ ಅವರ ವೃತ್ತಿ ಬದುಕಿನಲ್ಲಿ ಗುರುತಿಟ್ಟುಕೊಳ್ಳುವಂಥ ಪಾತ್ರ ರಾಚಯ್ಯನದು. ಸಾಮಾನ್ಯ ಕಮರ್ಷಿಯಲ್ ಚಿತ್ರಗಳ ನಾಯಕನ ಹಾಗಿಲ್ಲದೆ ತೀರ ಸಾಧಾರಣ ಪೋಷಕ ಪಾತ್ರದಂತೆ ಎಂಟ್ರಿ ನೀಡುತ್ತಾರೆ. ಇಡೀ ಊರಿನ ಪರಿಸ್ಥಿತಿಯನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಸಿದ ಬಳಿಕವೇ ರಾಚಯ್ಯನ ಪ್ರವೇಶವಾಗುತ್ತದೆ. ಆದರೆ ಆನಂತರ ಪೂರ್ತಿ ಕಥೆ ರಾಚಯ್ಯನ ಸುತ್ತಲೇ ನಡೆಯುತ್ತದೆ. ರಾಚಯ್ಯನಾಗಿ ವಿಜಯ್ ನೈಜ ನಟನೆ ನೀಡಿದ್ದಾರೆ.
ರಾಚಯ್ಯನ ಜೋಡಿ ನಿಂಗವ್ವನಾಗಿ ರಚಿತಾ ರಾಮ್ ಈಗಾಗಲೇ ಹಾಡುಗಳಿಂದಲೇ ಮನ ಸೆಳೆದಿದ್ದಾರೆ. ಆದರೆ ರಚಿತಾ ಹಾಡಿಗಷ್ಟೇ ಸೀಮಿತವಾಗಿರದೆ ವೀರಾವೇಶದಿಂದ ನಟಿಸಿರುವ ದೃಶ್ಯಗಳು ಚಿತ್ರದಲ್ಲಿವೆ.
ವಿಜಯ್ ಅವರಷ್ಟೇ ಪ್ರಾಧಾನ್ಯತೆ ಇರುವ ಮತ್ತೊಂದು ಪಾತ್ರ ಸಣ್ಣದಣಿಯಾಗಿ ನಟಿಸಿದ ರಾಜ್ ಬಿ. ಶೆಟ್ಟಿಯವರದ್ದು. ನಾಯಕನಟನಾಗಿ, ಹಾಸ್ಯನಟನಾಗಿ ಗಮನ ಸೆಳೆದ ರಾಜ್ ತಾನೆಷ್ಟು ಕ್ರೂರಿಯಾದ ಪಾತ್ರಕ್ಕೂ ಜೀವ ನೀಡಬಲ್ಲೆ ಎನ್ನುವುದನ್ನು ಕನ್ನಡಿಗರ ಮುಂದೆ ಸಾಬೀತು ಮಾಡಿದ್ದಾರೆ. ಸಣ್ಣದಣಿಯ ತಮ್ಮನಾಗಿ ನಟಿಸಿದ ರಾಕೇಶ್ ಅಡಿಗ ಕೂಡ ತಮ್ಮ ಸಿಡುಕು ಮುಖ ತೋರಿಯೇ ನಡುಕ ಹುಟ್ಟಿಸುತ್ತಾರೆ.
ರಾಚಯ್ಯ ಪುತ್ರಿ ಭಾಗ್ಯ ಪಾತ್ರದಲ್ಲಿ ವಿಜಯ್ ಅವರ ನೈಜ ಪುತ್ರಿಯಾದ ರಿತನ್ಯಾ ನಟಿಸಿರುವುದು ವಿಶೇಷ. ಮೊದಲ ಚಿತ್ರದಲ್ಲೇ ರಿತನ್ಯಾಗೆ ನಟನಾ ಪ್ರಧಾನ ಪಾತ್ರ ನೀಡಲಾಗಿದೆ. ಅದನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿರುವ ರಿತನ್ಯಾ ಭರವಸೆಯ ನಟಿಯಾಗಿ ಸ್ಥಾನ ಪಡೆಯುತ್ತಾರೆ. ‘ಡೇರ್ ಡೆವಿಲ್ ಮುಸ್ತಫಾ’ ಖ್ಯಾತಿಯ ಶಿಶಿರ್ ಬೈಕಾಡಿ ತನ್ನೊಳಗಿನ ಕಲಾವಿದನನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಭಾವನಾ ರಾವ್ ಒಂದು ವಿಶೇಷ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.
ದೊಡ್ಡ ದಣಿಯಾಗಿ ಕಾಣಿಸಿಕೊಳ್ಳುವ ಅವಿನಾಶ್ ಕ್ಷಣ ಮಾತ್ರ ಪರದೆ ಮೇಲೆ ಬಂದರೂ ನೆನಪಿರಿಸುವಂಥ ಕ್ರೌರ್ಯದ ನಟನೆ ತೋರಿಸಿದ್ದಾರೆ. ರಾಮದುರ್ಗದ ಜಮೀನ್ದಾರನಾಗಿ ಶರತ್ ಲೋಹಿತಾಶ್ವ ಅಬ್ಬರಿಸಿದ್ದಾರೆ. ಶೇಷ ಪಾತ್ರದಲ್ಲಿ ನಟಿಸಿರುವ ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಮಿತ್ರ, ಬಿ. ಸುರೇಶ್, ಬಿ.ಎಂ. ಗಿರಿರಾಜ್ ಮೊದಲಾದವರ ಅಭಿನಯವನ್ನು ಮರೆಯುವ ಹಾಗಿಲ್ಲ.
ರಾಚಯ್ಯನ ಫ್ಲ್ಯಾಶ್ ಬ್ಯಾಕ್ ಕಥೆಯೊಂದಿಗೆ ಚಿತ್ರ ಹೆಚ್ಚು ಕಮರ್ಷಿಯಲ್ ಆಗುತ್ತದೆ. ನಾಯಕನ ಏಳು ವರ್ಷಗಳ ಜೀವಾವಧಿ ಕಥೆ ಮತ್ತೆ ಜಡೇಶ್ ಅವರದೇ ಕಥೆಯಾದ ಕಾಟೇರವನ್ನು ನೆನಪಿಸುತ್ತದೆ. ಕೊಡಲಿ ರಾಚಯ್ಯನಾಗಿ ತಾಂಡವವಾಡುವ ನಾಯಕ ನೆನಪಾದಾಗಲೆಲ್ಲ ಸಂವಿಧಾನದ ಪಾಠ ಮಾಡುವುದು ವಿಪರ್ಯಾಸ. ಇದೊಂದು ರೀತಿ ರಾತ್ರಿ ಪೂರ್ತಿ ರಾಮಾಯಣ ಕೇಳಿ.. ಎನ್ನುವ ಗಾದೆಯನ್ನು ನೆನಪಿಸುತ್ತದೆ. ಆದರೂ ಕನ್ನಡದಲ್ಲಿ ಹೆಚ್ಚು ಪ್ರಚಲಿತವಲ್ಲದ ರೀತಿಯಲ್ಲಿ ಪಾತ್ರಗಳನ್ನು ಕಟ್ಟಿಕೊಟ್ಟಿರುವ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಲೇಬೇಕು.
ಚಿತ್ರದಲ್ಲಿ ಕಲಾನಿರ್ದೇಶನ ಮೆಚ್ಚುವಂತಿದೆ. ಸಾಹಸ ಮತ್ತು ಛಾಯಾಗ್ರಹಣಕ್ಕೂ ಭೇಷ್ ಎನ್ನಲೇಬೇಕು.
ಹಾಡುಗಳು ಮನಸೆಳೆಯುತ್ತದೆ. ಭೂಮಾಲಕ ದಣಿಗಳ ವಿರುದ್ಧದ ಹೋರಾಟ, ಲೇಡಿ ಪೊಲೀಸ್ ಮೊದಲಾದ ಪಾತ್ರಗಳು ಕಾಂತಾರ ಚಿತ್ರವನ್ನು ನೆನಪಿಸುತ್ತದೆ. ಅದಕ್ಕೆ ತಕ್ಕಂತೆ ಅಜನೀಶ್ ಲೋಕನಾಥ್ ಕೂಡ ಅದೇ ಮಾದರಿಯ ಹಿನ್ನೆಲೆ ಸಂಗೀತ ನೀಡಿದಂತಿದೆ! ಅಲ್ಲಿ ನಾಯಕ ದೈವವಾಗಿ ಸಿಡಿದೆದ್ದರೆ ಇಲ್ಲಿ ದೆವ್ವ ಬಂದಂತೆ ಬಡಿದಾಡಿದ್ದಾರೆ. ವಿಜಯ್ ಅವರಲ್ಲಿನ ಒಂದಷ್ಟು ಬದಲಾವಣೆಯ ರೀತಿಯನ್ನು ನೋಡಬಯಸುವವರು ಖಂಡಿತವಾಗಿ ಈ ಚಿತ್ರ ನೋಡಬಹುದು.