ರಣಬಾಲಿ ಸಿನಿಮಾದ ಮೊದಲ ಲುಕ್; ತೆರೆ ಮೇಲೆ ಮತ್ತೆ ಒಂದಾದ ವಿಜಯ್ - ರಶ್ಮಿಕಾ ಮಂದಣ್ಣ
ರಣಬಾಲಿ ಸಿನಿಮಾ
‘ರಣಬಾಲಿ’ಯ ಮೊದಲ ಝಲಕ್ ಹಾಗೂ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 11ರಂದು ಸಿನಿಮಾ ಬಿಡುಗಡೆಯಾಗುವ ಸಿಹಿಸುದ್ದಿಯನ್ನೂ ನೀಡಿದೆ.
ತೆಲುಗು ಸಿನಿಮಾರಂಗದ ಜನಪ್ರಿಯ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಮುಂದಿನ ಸಿನಿಮಾವನ್ನು ಘೋಷಿಸಿದ್ದಾರೆ. ಜನವರಿ 26ರಂದು ಗಣರಾಜ್ಯೋತ್ಸವದಂದು ಹೊಸ ಸಿನಿಮಾ ‘ರಣಬಾಲಿ’ಯ ಟೀಸರ್ ಬಿಡುಗಡೆ ಮಾಡಲಾಗಿದೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಈ ಜೋಡಿ ಇದೀಗ ಮತ್ತೆ ಆಕ್ಷನ್ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದೆ. ‘ಟ್ಯಾಕ್ಸಿವಾಲಾ’ ಖ್ಯಾತಿಯ ರಾಹುಲ್ ಸಂಕೃತ್ಯಾನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಅವರು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಟಿ-ಸೀರೀಸ್ ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದೆ.
“ತನ್ನ ಜನರಿಗಾಗಿ ವ್ಯಕ್ತಿ ದಂತಕತೆಯಾದ; ದುಷ್ಟರಿಗೆ ದುಸ್ವಪ್ನನಾದ ಈ ದಂತಕತೆ” ಎನ್ನುವ ವಾಕ್ಯಗಳೊಂದಿಗೆ ‘ರಣಬಾಲಿ’ಯ ಮೊದಲ ಝಲಕ್ ಹಾಗೂ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಜೊತೆಗೆ, ಸೆಪ್ಟೆಂಬರ್ 11ರಂದು ಸಿನಿಮಾ ಬಿಡುಗಡೆಯಾಗುವುದೆಂಬ ಸಿಹಿಸುದ್ದಿಯನ್ನೂ ನೀಡಿದೆ.
ಈ ಸಿನಿಮಾದಲ್ಲಿ 1854ರಿಂದ 1878ರ ಅವಧಿಯ ಬ್ರಿಟಿಷ್ ಭಾರತದ ಹಿನ್ನೆಲೆಯ ನೈಜ ಇತಿಹಾಸದ ಘಟನೆಗಳನ್ನು ಆಧರಿಸಿದ ಕಥೆಯನ್ನು ಹೇಳಲಾಗುತ್ತಿದೆ. ಇತಿಹಾಸದಲ್ಲಿ ಅಡಗಿಹೋದ, ಕರಗಿಹೋದ ಕಹಿ ಘಟನೆಯನ್ನು ಚಿತ್ರವು ಪ್ರಸ್ತುತಪಡಿಸುತ್ತದೆ ಎಂದು ಚಿತ್ರತಂಡ ವಿವರಿಸಿದೆ.
ಇದರಿಂದ ಸಿನಿಮಾದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ. ‘ದಿ ಮಮ್ಮಿ’ (1999) ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದ ದಕ್ಷಿಣ ಆಫ್ರಿಕಾದ ನಟ ಅರ್ನಾಲ್ಡ್ ವೊಸ್ಲೂ ಅವರನ್ನು ಈ ಆಕ್ಷನ್–ಡ್ರಾಮಾ ಶೈಲಿಯ ಸಿನಿಮಾದ ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಅವರು ಬ್ರಿಟಿಷ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ.
ರಶ್ಮಿಕಾ ಮಂದಣ್ಣ ಇತ್ತೀಚೆಗೆ ‘ದಿ ಗರ್ಲ್ಫ್ರೆಂಡ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಅವರು ಬಾಲಿವುಡ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರೊಂದಿಗೆ ‘ಕಾಕ್ಟೈಲ್’ ಸಿನಿಮಾದ ಚಿತ್ರೀಕರಣದಲ್ಲೂ ರಶ್ಮಿಕಾ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾ 2026ರ ಆಗಸ್ಟ್–ಅಕ್ಟೋಬರ್ ನಡುವೆ ಬಿಡುಗಡೆಯಾಗುವ ಸಾಧ್ಯತೆಯಿದೆ.