ʼಲ್ಯಾಂಡ್ ಲಾರ್ಡ್ʼ: ರೈತನ ಪಾತ್ರದಲ್ಲಿ ಮಿಂಚಲಿರುವ ದುನಿಯಾ ವಿಜಯ್
ದುನಿಯಾ ವಿಜಯ್
‘ಲ್ಯಾಂಡ್ ಲಾರ್ಡ್’ ಹೆಸರೇ ಹೇಳುವಂತೆ ಭೂಮಾಲೀಕರ ದರ್ಪದ ಕತೆ. ಜೀತದಾಳುವಿನ ನೋವಿನ ಕತೆ. ದುನಿಯಾ ವಿಜಯ್ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.
ದುನಿಯಾ ವಿಜಯ್ ರೈತನಾಗಿ ತೆರೆಮೇಲೆ ಬರುತ್ತಿದ್ದಾರೆ. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿರುವ ‘ಲ್ಯಾಂಡ್ ಲಾರ್ಡ್’ ಸಿನಿಮಾ ಭೂಮಾಲೀಕರ ತುಳಿತಕ್ಕೆ ಒಳಗಾದವರ ಸುತ್ತ ಹೆಣೆದ ಕತೆಯನ್ನು ಒಳಗೊಂಡಿದೆ. ದೌರ್ಜನ್ಯಕ್ಕೆ ಒಳಗಾಗುವ ಕುಟುಂಬ ಸೆಟೆದು ನಿಂತು ಸಂತ್ರಸ್ತರಾದವರಲ್ಲಿ ಶಕ್ತಿ ತುಂಬುವ ಕತೆ ಇದೆ. ಈ ಹಿಂದೆ ಜಡೇಶ್ ಅವರು ಬರೆದಿದ್ದ ‘ಕಾಟೇರ’ ಸಿನಿಮಾದ ಕತೆಯೂ ಇದೇ ಮಾದರಿಯಲ್ಲಿತ್ತು.
“ನನಗೆ ಹಳ್ಳಿ ಎಂದರೆ ಇಷ್ಟ, ನನಗೆ ಪ್ರಕೃತಿ, ಮೌನ ಮತ್ತು ಹಳ್ಳಿ ಎಂದರೆ ಇಷ್ಟ. ಅದೇ ವಿಷಯದಲ್ಲಿ ಲ್ಯಾಂಡ್ಲಾರ್ಡ್ ಅನ್ನು ನಾವು ಬೆಳಗ್ಗೆ ಬಿಡುಗಡೆ ಮಾಡುತ್ತಿದ್ದೇವೆ. ಎಲ್ಲ ರೈತರ ಮನೆಯ ಕಷ್ಟವನ್ನು ಹೇಳುವ ಸಿನಿಮಾ ಮಾಡಿರುವುದು ಸಂತೋಷ ತಂದಿದೆ. ಎಷ್ಟು ಕಷ್ಟ ಅನುಭವಿಸಿದರೂ ನಾನೊಬ್ಬ ಬಡ ರೈತನ ಮಗನಾಗಿ ರೈತರ ಪರವಾಗಿ ನಿಂತಿದ್ದೇನೆ ಎಂದು ಖುಷಿಯಾಗಿದೆ” ಎಂದು ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ವಿಜಯ್ ತಮ್ಮ ಅಭಿಮಾನಿಗಳಿಗೆ ‘ಎಕ್ಸ್’ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ಕಳುಹಿಸಿದ್ದಾರೆ.
‘ಲ್ಯಾಂಡ್ ಲಾರ್ಡ್” ಹೆಸರೇ ಹೇಳುವಂತೆ ಭೂಮಾಲೀಕರ ದರ್ಪದ ಕತೆ. ಜೀತದಾಳುವಿನ ನೋವಿನ ಕತೆ. ದುನಿಯಾ ವಿಜಯ್ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಿದ್ದರೂ, ಅವರೇ ನಾಯಕ. ಅಮಾನವೀಯ, ಅಹಂಕಾರಿ ಭೂಮಾಲೀಕನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ.
ಸಿನಿಮಾದಲ್ಲಿ ರಚಿತಾ ರಾಮ್, ರಾಜ್ ಬಿ ಶೆಟ್ಟಿ ಮತ್ತು ಹಿರಿಯ ನಟಿ ಉಮಾಶ್ರೀ ನಟಿಸಿದ್ದಾರೆ. ವಿಜಯ್ ಪುತ್ರಿ ರಿತನ್ಯ ಅವರೂ ಸಿನಿಮಾದಲ್ಲಿ ನಟಿಸಿದ್ದಾರೆ. ಅವರು ಪೊಲೀಸ್ ಕಾನ್ಸ್ಟೇಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಟ ಶಿಶಿರ್ ಬೈಕಾಡಿ ಪಾತ್ರವೂ ಗಮನ ಸೆಳೆಯುವಂತಿದೆ. ರಾಕೇಶ್ ಅಡಿಗ ಸಹ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕರ್ನಾಟಕದ ಕೋಲಾರ ಪ್ರದೇಶದ ಗ್ರಾಮೀಣ ಹೋರಾಟಗಳನ್ನು ಚಿತ್ರ ಪರಿಶೋಧಿಸುತ್ತದೆ. ಅಲ್ಲಿನ ದೃಶ್ಯಗಳು, ಅಬ್ಬರದ ಸಂಗೀತ ಮತ್ತು ನಿಜವಾದ ರೈತ-ಭೂಮಾಲೀಕರ ಘರ್ಷಣೆಯಲ್ಲಿ ಬೇರೂರಿರುವ ಆಕ್ಷನ್ – ಥ್ರಿಲ್ಲರ್ ಸಿನಿಮಾ ಇದಾಗಿದೆ. ಸಿನಿಮಾವನ್ನು ಜನವರಿ 23ರಂದು ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ.
ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಹೇಮಂತ್ ಗೌಡ ಮತ್ತು ಕೆವಿ ಸಂಪತ್ ಅವರು ಬಂಡವಾಳ ಹೂಡಿದ್ದಾರೆ. ಸಂಭಾಷಣೆ ಬರೆದಿರುವುದು ಮಾಸ್ತಿ ಉಪ್ಪಾರಹಳ್ಳಿ.