300 ಕೋಟಿ ರೂ. ಮೀರಿ ಗಳಿಸಿದ ‘ಕುರುಪ್ಪು’; ಚಿತ್ರದ ತಂತ್ರಜ್ಞರಿಗೆ ದುಬಾರಿ ಕಾರು ಉಡುಗೊರೆ ನೀಡಿದ ಸೂರ್ಯ
Screengrab : instagram.com
‘ಕುರುಪ್ಪು’ ಸೂರ್ಯ ಮತ್ತು ವಕೀಲ ಬೇಬಿ ಕಣ್ಣನ್ ಪಾತ್ರವನ್ನು ನಿರ್ವಹಿಸಿದ ಆರ್ಜೆ ಬಾಲಾಜಿ ನಡುವಿನ ಹೋರಾಟದ ಕಥೆ ಹೊಂದಿದೆ.
‘ಕುರುಪ್ಪು’ ಚಿತ್ರದ ಭಾರಿ ಯಶಸ್ಸಿನ ನಂತರ ಚಿತ್ರದ ನಾಯಕ ನಟ ಸೂರ್ಯ ಅವರು ಈ ಚಿತ್ರದಲ್ಲಿ ಕೆಲಸ ಮಾಡಿದ ಮೂವರು ತಂತ್ರಜ್ಞರಿಗೆ ತಲಾ 30 ಲಕ್ಷ ರೂ. ಮೌಲ್ಯದ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಆರ್ಜೆ ಬಾಲಾಜಿ ನಿರ್ದೇಶನದ, ಸೂರ್ಯ ಅವರ ಕಂಬ್ಯಾಕ್ ಸಿನಿಮಾ ಎಂದೇ ಪ್ರಚಾರ ಪಡೆದಿದ್ದ ‘ಕುರುಪ್ಪು’ ಮೇ 15ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ರವಿವಾರದ ವೇಳೆಗೆ ‘ಕುರುಪ್ಪು’ ಚಿತ್ರವು ವಿಶ್ವಾದ್ಯಂತ 300 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್ ಮಾಡಿದೆ. ವಾರಾಂತ್ಯವಾಗಿದ್ದರಿಂದ ಸಿನಿಮಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸಿದ್ದರು.
ಚಿತ್ರದ ಯಶಸ್ಸನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಚಿತ್ರದ ಸಂಗೀತ ಸಂಯೋಜಕ ಸಾಯಿ ಅಭಯಂಕರ್, ಛಾಯಾಗ್ರಾಹಕ ವಿಷ್ಣು ಮತ್ತು ಸಂಪಾದಕ ಕಲೈ ವನನ್ ಅವರಿಗೆ ಸೂರ್ಯ ಹಾಗೂ ಚಿತ್ರದ ನಿರ್ಮಾಣ ತಂಡವು ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. 30 ಲಕ್ಷ ರೂ. ಮೌಲ್ಯದ ಹೊಸ ‘ಮಹೀಂದ್ರಾ ಬಿಇ6 ಬ್ಯಾಟ್ ಮ್ಯಾನ್ ಎಡಿಷನ್’ ಕಾರಿನಲ್ಲಿ ಒಂದೇ ಚಾರ್ಜ್ನಲ್ಲಿ 680 ಕಿ.ಮೀ.ವರೆಗೆ ಪ್ರಯಾಣಿಸಬಹುದು.
‘ಕುರುಪ್ಪು’ ಸೂರ್ಯ ಮತ್ತು ವಕೀಲ ಬೇಬಿ ಕಣ್ಣನ್ ಪಾತ್ರವನ್ನು ನಿರ್ವಹಿಸಿದ ಆರ್ಜೆ ಬಾಲಾಜಿ ನಡುವಿನ ಹೋರಾಟದ ಕಥೆ ಹೊಂದಿದೆ. ಭ್ರಷ್ಟ ಆರ್ಜೆ ಬಾಲಾಜಿಯ ಕೈಯಲ್ಲಿ ಜಿಲ್ಲಾ ಕ್ರಿಮಿನಲ್ ನ್ಯಾಯಾಲಯ ಇರುತ್ತದೆ. ಈ ವೇಳೆ ಕುರುಪ್ಪಸ್ವಾಮಿ ಅವತಾರದಲ್ಲಿರುವ ಸೂರ್ಯ ನ್ಯಾಯಾಲಯದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಡುತ್ತಾನೆ. ನ್ಯಾಯಾಲಯದಲ್ಲಿ ನ್ಯಾಯ ಸ್ಥಾಪಿಸುವ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ ಎಂಬುದೇ ಚಿತ್ರದ ಕಥೆ.
ಸಿನಿಮಾದಲ್ಲಿ ಸೂರ್ಯ ಜೊತೆಗೆ ತ್ರಿಷಾ, ಆರ್ಜೆ ಬಾಲಾಜಿ, ನಟರಾಜ್ ಮತ್ತು ಇತರರು ನಟಿಸಿದ್ದಾರೆ. ಸಾಯಿ ಅಭಯಂಕರ್ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಜನಪ್ರಿಯವಾಗಿವೆ. ಶೀಘ್ರವೇ ಸಿನಿಮಾ ಒಟಿಟಿಯಲ್ಲೂ ಬಿಡುಗಡೆಯಾಗಲಿದೆ.
ಮೇ 14ರಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಒಂದು ದಿನ ತಡವಾಗಿ ಬಿಡುಗಡೆಯಾಗಿದ್ದರೂ, ಸೂರ್ಯ ಅವರ ಕ್ರೇಜ್ ನಿಂದಾಗಿ ಉತ್ತಮ ಓಪನಿಂಗ್ ಪಡೆದಿತ್ತು.