×
Ad

ವ್ಯಕ್ತಿಗತ ಹಕ್ಕುಗಳ ಉಲ್ಲಂಘನೆಯ ಆರೋಪ: ‘ಕಾಲಾ ಹಿರನ್’ ನಿರ್ಮಾಪಕರಿಗೆ ನೋಟೀಸ್ ಕಳುಹಿಸಿದ ಸಲ್ಮಾನ್ ಖಾನ್

Update: 2026-06-02 17:23 IST

ಸಲ್ಮಾನ್ ಖಾನ್ | Photo Credit : PTI

1998ರ ಕೃಷ್ಣಮೃಗ ಪ್ರಕರಣದಿಂದ ಪ್ರೇರಿತವಾದ ‘ಕಾಲಾ ಹಿರನ್’ ಸಿನಿಮಾದ ನಿರ್ಮಾಪಕರಿಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕಾನೂನು ನೋಟೀಸ್ ಕಳುಹಿಸಿದ್ದು, “ವ್ಯಕ್ತಿಗತ ಹಕ್ಕುಗಳ ಸಂಪೂರ್ಣ ಉಲ್ಲಂಘನೆ” ಎಂದು ಆರೋಪಿಸಿದ್ದಾರೆ.

‘ಕಾಲಾ ಹಿರನ್’ನ ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಅವರಿಗೆ ನೀಡಲಾಗಿರುವ ಕಾನೂನು ನೋಟೀಸ್ನಲ್ಲಿ ಸಲ್ಮಾನ್ ಖಾನ್ ಸಿನಿಮಾ ಬಿಡುಗಡೆ ಮತ್ತು ಒಟ್ಟು ಪ್ರಾಜೆಕ್ಟ್ನ ಪ್ರಚಾರವನ್ನು ಸ್ಥಗಿತಗೊಳಿಸುವಂತೆ ವಿನಂತಿಸಿದ್ದಾರೆ. ಉದಯ್ಪುರದ ಟೈಲರ್ ಕನ್ಹಯ್ಯ ಕುಮಾರ್ ಹತ್ಯೆಯನ್ನು ಆಧರಿಸಿದ ‘ಉಧಯಪುರ್ ಫೈಲ್ಸ್’ ಸಿನಿಮಾದ ಚಿತ್ರತಂಡ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಸಿನಿಮಾವನ್ನು ಭರತ್ ಎಸ್ ಶ್ರೀನೇಥ್ ನಿರ್ದೇಶಿಸಿದರೆ, ಅಮಿತ್ ಜಾನಿ ನಿರ್ಮಾಪಕರಾಗಿದ್ದಾರೆ.

ಕೃಷ್ಣಮೃಗ ಪ್ರಕರಣವು ರಾಜಸ್ಥಾನ ಹೈಕೋರ್ಟ್ನಲ್ಲಿ ಪ್ರಸ್ತುತ ಪರಿಗಣನೆಗೆ ಬಾಕಿ ಇದೆ ಎಂದು ಸಲ್ಮಾನ್ ಖಾನ್ ಅವರ ವಕೀಲರು ಹೇಳಿದ್ದಾರೆ. ಅಲ್ಲದೆ, ಸಿನಿಮಾವನ್ನು ‘ಮಾನಹಾನಿಗೆ ಪ್ರಯತ್ನ’ ಮತ್ತು ‘ವ್ಯಕ್ತಿಗತ ಹಕ್ಕುಗಳ ಸಂಫೂರ್ಣ ಉಲ್ಲಂಘನೆ’ ಎಂದು ಕರೆದಿದ್ದಾರೆ. ನೋಟೀಸ್ನಲ್ಲಿ ಸಲ್ಮಾನ್ ಖಾನ್ ಪರ ವಕೀಲರು ಪ್ರಸ್ತಾವಿತ ಚಿತ್ರವನ್ನು ನಿರ್ಮಿಸುವುದು ‘ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪವಾಗುತ್ತದೆ ಮತ್ತು ನಮ್ಮ ಕಕ್ಷಿದಾರರ ನ್ಯಾಯಯುತ ವಿಚಾರಣೆಯ ಮೂಲಭೂತ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತದೆ” ಎಂದು ಹೇಳಿದ್ದಾರೆ.

ಪ್ರಸ್ತಾವಿತ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರ ಹೆಸರು, ವ್ಯಕ್ತಿತ್ವ ಅಥವಾ ಅವರಿಗೆ ಸಂಬಂಧಿಸಿದೆ ಎಂದು ಹೇಳಲಾದ ಘಟನೆಯನ್ನು ಬಳಸಲು ಅಧಿಕಾರ ನೀಡಿಲ್ಲ ಅಥವಾ ಒಪ್ಪಿಗೆ ನೀಡಿಲ್ಲ ಎಂದು ನೋಟೀಸ್ನಲ್ಲಿ ಹೇಳಲಾಗಿದೆ.

ನೋಟೀಸ್ ಪ್ರಕಾರ ಸಲ್ಮಾನ್ ಖಾನ್ ಅವರು ‘ಕಾಲಾ ಹಿರನ್’ ನಿರ್ಮಾಪಕರಿಗೆ ಈ ಕೆಳಗಿನವುಗಳನ್ನು ವಿನಂತಿಸಿಕೊಂಡಿದ್ದಾರೆ:

1. ಪ್ರಸ್ತಾವಿತ ಸಿನಿಮಾ ಸೇರಿದಂತೆ, ಆದರೆ ಸೀಮಿತವಾಗಿರದೆ ಸಲ್ಮಾನ್ ಖಾನ್ ಅವರನ್ನು ಗುರುತಿಸಬಹುದಾದ, ಪ್ರೇರಿತವಾದ/ ಸಂಬಂಧಿಸಿದ/ ಆಧಾರಿತ ಯಾವುದೇ ಚಲನಚಿತ್ರ, ಯೋಜನೆ ಅಥವಾ ವಿಷಯವನ್ನು ಅಭಿವೃದ್ಧಿಪಡಿಸುವುದು, ನಿರ್ಮಿಸುವುದು. ಪ್ರಚಾರ ಮಾಡುವುದು ಅಥವಾ ಬೇರೆ ರೀತಿಯಲ್ಲಿ ಮುಂದುವರಿಯುವುದನ್ನು ತಕ್ಷಣವೇ ನಿಲ್ಲಿಸಬೇಕು.

2. ನಮ್ಮ ಕಕ್ಷಿದಾರರಿಗೆ ಬೇಷರತ್ ಲಿಖಿತ ಕ್ಷಮೆಯಾಚಿಸಬೇಕು.

‘ಕಾಲಾ ಹಿರನ್’ ನಿರ್ಮಾಪಕರು ಕಾನೂನು ಸೂಚನೆಯನ್ನು ಸ್ವೀಕರಿಸಿದ 24 ಗಂಟೆಗಳ ಒಳಗೆ ಅನುಸರಿಸಲು ವಿಫಲವಾದರೆ ಸಲ್ಮಾನ್ ಖಾನ್ ನಿಮ್ಮ ಮತ್ತು ಸಂಬಂಧಿಸಿದ ಎಲ್ಲರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ಸೂಕ್ತ ಕಾನೂನು ಕ್ರಮಗಳನ್ನು ಪ್ರಾರಂಭಿಸಬೇಕಾಗುತ್ತದೆ.

ಈ ಕಾನೂನು ನೋಟೀಸ್ ಅನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಅಮಿತ್ ಜಾನಿ ಅವರು ಸಲ್ಮಾನ್ ಖಾನ್ ತಮಗೆ ಬೆದರಿಕೆ ಒಡ್ಡಿದ್ದಾರೆ ಎಂದು ಹೇಳಿದ್ದಾರೆ. “ಕಾಲಾ ಹಿರನ್ ಸಿನಿಮಾಗೆ ಸಂಬಂಧಿಸಿವರಿಗೆ ಸಲ್ಮಾನ್ ಖಾನ್ ಕಾನೂನು ನೋಟೀಸ್ ಕಳುಹಿಸುವ ಮೂಲಕ ಬೆದರಿಕೆ ಒಡ್ಡುತ್ತಿದ್ದಾರೆ. ಈ ಕಾನೂನು ಸೂಚನೆಯ ಉದ್ದೇಶ ಕೇವಲ ಬೆದರಿಕೆಯಾಗಿದೆ. ನಾವು ಅವರ ಗ್ಲಾಮರ್ಗೆ ಶರಣಾಗುತ್ತೇವೆ ಎಂದು ಅವರು ನಂಬಿದ್ದಾರೆ” ಎಂದು ನಿರ್ಮಾಪಕರು ಮಂಗಳವಾರ ಹಿಂದಿಯಲ್ಲಿ ಬರೆದಿದ್ದಾರೆ. ಅಲ್ಲದೆ ಹಿರಿಯ ಕವಿ ರಾಹಿತ್ ಇಂದೋರಿಯವರ “ಹೇ ಉಸ್ಕಿ ಆದತ್ ಡರಾ ರಹಾ ಹೈ’ ಎನ್ನುವ ವಾಕ್ಯಗಳನ್ನೂ ಬರೆದುಕೊಂಡಿದ್ದಾರೆ. (ಅವರು ಹೆದರಿಸುತ್ತಾರೆ, ನಾನು ಹೆದರುವುದಿಲ್ಲ ಎನ್ನುವಂತಹ ಕವಿತೆ).

ಜಾನಿ ಫೈರ್ಫಾಕ್ಸ್ ಫಿಲ್ಮ್ಸ್ ಇತ್ತೀಚೆಗೆ ‘ಕಾಲಾ ಹಿರನ್’ನ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್ರಂತೆ ಕಾಣಿಸುವ ವ್ಯಕ್ತಿ ಬಂದೂಕು ಹಿಡಿದು ನಿಂತಿರುವುದು ತೋರಿಸಲಾಗಲಿದೆ. ಸಲ್ಮಾನ್ ಸಾಮಾನ್ಯವಾಗಿ ಧರಿಸುವ ಬ್ರಾಸ್ಲೆಟ್ ಅನ್ನೂ ಬಂದೂಕು ಹಿಡಿದ ವ್ಯಕ್ತಿ ಧರಿಸಿರುವುದನ್ನು ತೋರಿಸಲಾಗಿದೆ.

ಚಿತ್ರದ ಟೀಸರ್ ಜೂನ್ 20ರಂದು ಹೊರತರುವುದಾಗಿ ನಿರ್ಮಾಪಕರು ಹೇಳಿದ್ದಾರೆ. ಅಲ್ಲದೆ, ‘ಕಾಲಾ ಹಿರನ್’ ಮೂಲಕ ನೈಜ ಜಗತ್ತಿನ ಕಾನೂನು ಹೋರಾಟವನ್ನು ತೋರಿಸುವುದಾಗಿ ಹೇಳಿದ್ದಾರೆ.

1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ಸಮಯದಲ್ಲಿ ರಾಜಸ್ಥಾನದ ಜೋಧಪುರ ಜಿಲ್ಲೆಯ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಭೇಟೆಯಾಡಿರುವ ಆರೋಪ ಹೊರಿಸಲಾಗಿತ್ತು.

ವರದಿಗಳ ಪ್ರಕಾರ ಪ್ರಕರಣದಲ್ಲಿ ಸಲ್ಮಾನ್ ಖಾನ್ ಮುಖ್ಯ ಆರೋಪಿ ಎಂದು ಜೋಧಪುರ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇತರ ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ನೀಲಂ ಮತ್ತು ಸ್ಥಳೀಯರಾದ ದುಷ್ಯಂತ್ ಸಿಂಗ್ರನ್ನು ಖುಲಾಸೆಗೊಳಿಸಲಾಗಿದೆ.

ಇಪ್ಪತ್ತು ವರ್ಷದ ನಂತರ ರಾಜಸ್ಥಾನದ ವಿಚಾರಣಾ ನ್ಯಾಯಾಲಯ ಕೂಡ ಸಲ್ಮಾನ್ ಅವರಿಗೆ ದೋಷಿ ಎಂದು ಐದು ವರ್ಷಗಳ ಶಿಕ್ಷೆ ವಿಧಿಸಿದೆ. ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಅವರನ್ನು ಜೋಧಪುರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 2022ರಲ್ಲಿ ರಾಜಸ್ಥಾನ ಹೈಕೋರ್ಟ್ ಸಲ್ಮಾನ್ ಖಾನ್ ಅವರ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದ ವರ್ಗಾವಣೆ ಅರ್ಜಿ ಅಂಗೀಕರಿಸಿದೆ. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News