ಬಜ್ಪೆ | ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ: ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ವಿರುದ್ಧ ಪ್ರಕರಣ ದಾಖಲು
► ಅಪಘಾತ ಪ್ರಕರಣದಲ್ಲಿ ಸಮಿತ್ ಫೋನ್ ವಶಕ್ಕೆ ಪಡೆದು, FSLಗೆ ಕಳುಹಿಸಿದ್ದ ಪೊಲೀಸರು ► ಮೊಬೈಲ್ ನಲ್ಲಿದೆ ಇನ್ನಷ್ಟು ಅಶ್ಲೀಲ ವೀಡಿಯೊಗಳು!
ಸಮಿತ್ ರಾಜ್ ಧರೆಗುಡ್ಡೆ
ಬಜ್ಪೆ: ಯುವತಿಯೋರ್ವಳ ನಗ್ನ ಫೊಟೊಗಳನ್ನು ಪಡೆದುಕೊಂಡು ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಕೊಲೆ ಬೆದರಿಕೆ ಹಾಕಿರುವ ಕುರಿತು ಹಿಂದೂ ಜಾಗರಣ ವೇದಿಕೆ ಮುಖಂಡ ಹಾಗೂ ಮುಲ್ಕಿ- ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಆಪ್ತ ಸಮಿತ್ ರಾಜ್ ಅಲಿಯಾಸ್ ಸಮಿತ್ ರಾಜ್ ಧರೆಗುಡ್ಡೆಯ ವಿರುದ್ಧ ಸೆ.27ರ ಶನಿವಾರ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯೋರ್ವಳನ್ನು ಬೆದರಿಸಿ ಅತ್ಯಾಚಾರಕ್ಕೆ ಯತ್ನಿಸಿರುವುದಲ್ಲದೆ, ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
2023ರಲ್ಲಿ ಸಂತ್ರಸ್ತೆಯ ಸಹೋದರನಿಗೆ ಬಜ್ಪೆಯಲ್ಲಿ ಅಪಘಾತವಾಗಿ ಮಂಗಳೂರಿನ ವಿನಯ್ ಆಸ್ಪತ್ರೆಯಲ್ಲಿದ್ದ ಸಂದರ್ಭ ಸಂತ್ರಸ್ತೆಯ ಮನೆಯ ಆರ್ಥಿಕ ಪರಿಸ್ಥಿತಿಯನ್ನು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊರ್ವ ಗಮನಿಸಿ ಮೂಡುಬಿದಿರೆ ಶಾಸಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಧರೆಗುಡ್ಡೆಯ ಸಮೀತ್ ರಾಜ್ ನ ಮೊಬೈಲ್ ನಂಬರ್ ಅನ್ನು ಕೊಟ್ಟು ಮಾತನಾಡಲು ಹೇಳಿದ್ದರು. ಅದರಂತೆ ಸಂತ್ರಸ್ತೆ ಆತನಿಗೆ ಫೋನ್ ಮಾಡಿ ಕಷ್ಟವನ್ನು ಹೇಳಿಕೊಂಡಿದ್ದಳು. ಬಳಿಕ ಮೂಡಬಿದ್ರೆ ಶಾಸಕರು ಆಸ್ಪತ್ರೆಗೆ ಬಂದು ಸಹಾಯ ಮಾಡಿದ್ದರು.
ಇದಾದ ಬಳಿಕ ಆರೋಪಿ ಸಮಿತ್ ರಾಜ್ ಪದೇ ಪದೇ ಸಂತ್ರಸ್ತೆಯ ಮೊಬೈಲ್ ಫೋನ್ ಗೆ ಕರೆ ಮಾಡಿ ಒಳ್ಳೆಯ ರೀತಿಯಲ್ಲಿ ಮಾತನಾಡಿ ನಂತರ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಮದುವೆಯಾಗುವುದಾಗಿ ಹೇಳಿದ್ದ. ಇದರಿಂದ ಹೆದರಿದ ಯುವತಿ ಮನೆಯಲ್ಲಿ ಮಾತನಾಡುವಂತೆ ತಿಳಿಸಿದ್ದಳು. ಈ ಸಂಬಂಧ ಆರೋಪಿ ಸಮಿತ್ ರಾಜ್ ನೊಂದಿಗೆ ಮಾತನಾಡಿದ್ದ ಆಕೆಯ ತಾಯಿ ಸಣ್ಣ ವಯಸ್ಸಿಗೆ ಮದುವೆ ಮಾಡಿಸುವುದಿಲ್ಲ ಎಂದು ಹೇಳಿದ್ದರು.
ಇದಾದ ಬಳಿಕವೂ ಆರೋಪಿಯು ಯುವತಿಗೆ ನಿರಂತರ ಫೊನ್ ಕರೆಗಳನ್ನು ಮಾಡುತ್ತಿದ್ದು, ಕರೆ ಸ್ವೀಕರಿಸದಿದ್ದಾಗ ಕಾಲೇಜಿನ ಬಳಿ ಮತ್ತು ಮನೆ ಬಳಿ ಬರುವುದುದಾಗಿ ಬೆದರಿಸುತ್ತಿದ್ದ. ಹೀಗಾಗಿ ಆತನ ಒತ್ತಡಕ್ಕೆ ಮಣಿದು ಆತನೊಂದಿಗೆ ಇಷ್ಟ ಇಲ್ಲದಿದ್ದರೂ ಮಾತನಾಡುತ್ತಿದ್ದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
2023ರ ಮಾರ್ಚ್ 23ರಂದು ಕಾಲೇಜು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಆರೋಪಿಯು ಕಾರಿನಲ್ಲಿ ಬಂದು ಆಕೆಯನ್ನು ಕರೆದೊಯ್ದು, ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬಲಾತ್ಕಾರವಾಗಿ ಬಟ್ಟೆ ಬಿಚ್ಚಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಜೋರಾಗಿ ಬೊಬ್ಬೆ ಹೊಡೆದಾಗ ಬಾಯಿಗೆ ಕೈ ಅಡ್ಡ ಇಟ್ಟು, ಈ ವಿಚಾರ ಯಾರಲ್ಲಾದರೂ ಹೇಳಿದರೆ ಮನೆಗೆ ಬಂದು ನನ್ನನ್ನು ಮತ್ತು ನನ್ನ ಮನೆಯವರನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಆ ಬಳಿಕ ಯುವತಿಯನ್ನು ಹಲವು ಬಾರಿ ಆತನೊಂದಿಗೆ , ಹೋಗಲು ಒಪ್ಪದೇ ಇದ್ದಾಗ ಆಶ್ಲೀಲ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಮಾನ ಹರಾಜು ಹಾಕುವುದಾಗಿ ಬೆದರಿಸುತ್ತಿದ್ದ. ಅಲ್ಲದೆ, ನಗ್ನ ಫೊಟೊಗಳನ್ನೂ ಕಳುಹಿಸುವಂತೆ ಒತ್ತಾಯಿಸುತ್ತಿದ್ದ ಕಾರಣ ಯುವತಿ ನಗ್ನ ಫೊಟೊಗಳನ್ನೂ ಕಳುಹಿಸಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಮಾಹಿತಿ ನೀಡಿದ್ದಾಳೆ.
ಆರೋಪಿ ಸಮಿತ್ ರಾಜ್ ನ ಕಿರುಕುಳ ಹೆಚ್ಚಾದಾಗ ಮೂಡುಬಿದಿರೆ ಶಾಸಕರಿಗೆ ಹೇಳುವುದಾಗಿ ಹೇಳಿದಾಗ, "ನಾನು ಪ್ರಭಾವಿ ವ್ಯಕ್ತಿಯಾಗಿದ್ದು, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮಟ್ಟದ ನಾಯಕನಾಗಿದ್ದೇನೆ ಮತ್ತು ಮೂಡಬಿದ್ರೆ ಶಾಸಕರ ಆಪ್ತನಿದ್ದೇನೆ. ಮೂಡುಬಿದಿರೆ ಶಾಸಕರು ನಾನು ಹೇಳಿದ ಹಾಗೆ ಕೇಳುತ್ತಾರೆ. ನಾನು ಹೇಳಿದರೆ ಅವರು ನನ್ನೊಂದಿಗೆ ಪೊಲೀಸ್ ಸ್ಟೇಷನ್ ಗೂ ಬರುತ್ತಾರೆ. ನನ್ನ ಹಿಂದೆ ಸಂಘಟನೆ ಇದೆ. ಯಾವ ಪೊಲೀಸರೂ ಏನೂ ಮಾಡಲು ಆಗುವುದಿಲ್ಲ" ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, "ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಈ ಸಂಬಂಧ ಬಜ್ಪೆ ಪೊಲೀಸರು IPC 1860 (U/s-354(A),504,506)ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಮಿತ್ ಮೊಬೈಲ್ ನಲ್ಲಿದೆ ಇನ್ನಷ್ಟು ಅಶ್ಲೀಲ ವೀಡಿಯೊಗಳು!
2024ರಲ್ಲಿ ಮೂಡಬಿದ್ರೆ ತಾಲೂಕಿನ ಮಿಜಾರು ಬಳಿಯ ನಡೆದಿದ್ದ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಮತ್ತು ಆಕೆಯ ಮಗನಿಗೆ, ಬಸ್ ಮಾಲಕನನ್ನು ಬೆದರಿಸಿ 5 ಲಕ್ಷ ರೂ. ತೆಗೆಸಿಕೊಟ್ಟಿದ್ದ ಪ್ರಕರಣ ಸಂಬಂಧ ಮೂಡುಬಿದಿರೆ ಪೊಲೀಸರು ಸಮಿತ್ ರಾಜ್ ಧರೆಗುಡ್ಡೆಯ ವಿರುದ್ಧ 2025ರ ಜೂ. 26 ರಂದು ಪ್ರಕರಣ ದಾಖಲಿಸಿದ್ದರು.
ಇತ್ತೀಚಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಬಂದಿದ್ದ ಸುಧೀರ್ ಕುಮಾರ್ ರೆಡ್ಡಿ ಅವರು ಈ ಪ್ರಕರಣವನ್ನು ವಿಚಾರಣೆ ನಡೆಸುವಂತೆ ಮೂಡುಬಿದಿರೆ ಪೊಲೀಸರಿಗೆ ಸೂಚನೆ ನೀಡಿದ್ದರು. ಅದರಂತೆ ಪ್ರಕರಣದ ಆರೋಪಿ ಸಮೀತ್ ರಾಜ್ ಧರೆಗುಡ್ಡೆಯನ್ನು ಮೂಡುಬಿದ್ರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಬಂಧಿಸಿದ್ದರು
ಈ ವೇಳೆ ಆತನ ಮೊಬೈಲ್ ಎಫ್ ಎಸ್ ಎಲ್ ಪರೀಕ್ಷೆಗೆ ಒಳಪಡಿಸಿದ ವೇಳೆ ಅದರಲ್ಲಿ 40-50 ಅಶ್ಲೀಲ ವೀಡಿಯೊಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಅಲ್ಲದೆ, ಸಮಿತ್ ರಾಜ್ ಸ್ವತಃ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋಗಳೂ ಪತ್ತೆಯಾಗಿದ್ದವು ಎಂದು ಹೇಳಲಾಗಿದೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸರು ಈತನ ವಿರುದ್ಧ 2025 ಜು.4 ರಂದು ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ಪ್ರಕರಣದಲ್ಲಿ ಸಮಿತ್ ರಾಜ್ ಜಾಮೀನು ಪಡೆದು ಹೊರಬಂದಿದ್ದ ಎಂದು ತಿಳಿದು ಬಂದಿದೆ.