ಕಲೆಯ ಮೂಲಕ ಮಾನವೀಯತೆಯ ಸಂಬಂಧ ಬೆಸೆಯಲಿ: ಡಾ.ಪ್ರವೀಣ್ ಮಾರ್ಟಿಸ್
ಮಂಗಳೂರು : ನಮ್ಮ ಇತಿಹಾಸವನ್ನು ಸಂತತಿಯಿಂದ ಸಂತಿಗೆ ಸಾಗಿಸುವ ಕೆಲಸವಾಗಬೇಕು. ಇಲ್ಲವಾದಲ್ಲಿ ಇತಿಹಾಸವನ್ನು ಮರೆತುಬಿಡುವ ಸಂದರ್ಭ ಎದುರಾಗುತ್ತದೆ. ಈ ನಿಟ್ಟಿನಲ್ಲಿ ಕಲೆಯ ಮೂಲಕ ಮಾನವೀಯತೆಯ ಸಂಬಂಧವನ್ನು ಬೆಸೆಯುವ ಕಾರ್ಯ ಮುಂದುವರಿಯಲಿ ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ ಹೇಳಿದರು.
ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ದ್ವಿತೀಯ ವರ್ಷದ ʼನಿರ್ದಿಗಂತ ಉತ್ಸವ 2025ʼನ್ನು ಶುಕ್ರವಾರ ಕಾಲೇಜಿನ ಆವರಣದ ಬಯಲು ರಂಗವೇದಿಕೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಸಂತ ಅಲೋಶಿಸ್‌ನಲ್ಲಿ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬರಲಾಗುತ್ತಿದೆ. ಇದೀಗ ಪ್ರಕಾಶ್ ರಾಜ್‌ರವರ ನಿರ್ದಿಗಂತ ತಂಡ ಸೇರಿರುವುದು ಸಂತಸದ ವಿಚಾರ. ಈ ಉತ್ಸವ ಇನ್ನುಷ್ಟು ಬೆಳೆಯುವ ಜತೆಗೆ ಕರಾವಳಿಯ ಭಿನ್ನತೆಯಲ್ಲಿನ ಏಕತೆಯ ಸೌಹಾರ್ದತೆಯನ್ನು ಮುಂದುವರಿಸಲು ಕಾರಣವಾಗಲಿ ಎಂದು ಅವರು ಆಶಿಸಿದರು.
ಶಂಕರಪುರದ ಮಲ್ಲಿಗೆಯ ಊರಿನವ ನಾನಾಗಿದ್ದು, ಮಲ್ಲಿಗೆ ಕಟ್ಟುವುದನ್ನು ನೋಡಿದಾಗ ನಾನೂ ಗಿಡದಿಂದ ಮಲ್ಲಿಗೆ ತೆಗೆದು ಅದನ್ನು ಹೆಣೆಯುತ್ತಿದ್ದ ಬಾಲ್ಯದ ನೆನಪುಗಳು ಮರುಕಳಿಸಿತು. ಶಂಕರಪುರದಲ್ಲಿಯೇ ಕಲಿತ ನಾನು ಮುಂದೆ ಸಂತ ಅಲೋಶಿಯಸ್ ಕಾಲೇಜಿನ ಈ ಸ್ಥಾನಕ್ಕೆ ಬರುವ ಕಲ್ಪನೆಯೂ ಇರಲಿಲ್ಲ ಎಂದು ಅವರು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರಾಜ್, ಕರಾವಳಿಯ ಸೌಹಾರ್ದತೆ ಕೇವಲ ಮಾತಿನಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ರಿಯೆಯಲ್ಲೂ ಅಡಕವಾಗಿದೆ. ಆ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ನಿರ್ದಿಗಂತ ಉತ್ಸವ ‘ಸೌಹಾರ್ದದ ಬಳಿ: ನಮ್ಮ ಕರಾವಳಿ’ ಎಂಬ ಧ್ಯೇಯದೊಂದಿಗೆ ನಡೆಸಲಾಗುತ್ತಿದೆ. ಕರಾವಳಿಯ ಮಲ್ಲಿಗೆಯನ್ನು ಬಹುತೇಕವಾಗಿ ಒಂದು ಮತದವರು ಬೆಳೆದರೆ, ಮತ್ತೊಂದು ಮತದವರು ಅದನ್ನು ಮಾರಾಟ ಮಾಡುತ್ತಾರೆ. ಇನ್ನೊಂದು ಮತದವರು ಅದನ್ನು ಪೂಜೆಗೆ ಬಳಸುತ್ತಾರೆ ಎನ್ನುವ ವಿದ್ಯಾರ್ಥಿನಿ ಮೇಘ ಅವರ ಸೌಹಾರ್ದತೆಯ ಪರಿಕಲ್ಪನೆಯೊಂದಿಗೆ ಈ ಬಾರಿಯ ಉತ್ಸವ ಮಂಗಳೂರಿನಲ್ಲಿ ನಡೆಯುತ್ತಿದೆ. ಕರಾವಳಿಯಲ್ಲಿ ಭಾಷೆಯನ್ನು ಸೇರಿದಂತೆ ಸೌಹಾರ್ದತೆ ಹಾಸು ಹೊಕ್ಕಾಗಿದೆ. ಆ ನಿಟ್ಟಿನಲ್ಲಿ ತುಳು, ಕೊಂಕಣಿ, ಮಲಯಾಳಂ ಸೇರಿ 8 ನಾಟಕಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು.
ವೇದಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಉಪಸ್ಥಿತರಿದ್ದರು. ಸನ್ನುತ ಕಾರ್ಯಕ್ರಮ ನಿರೂಪಿಸಿದರು.
ಮನುಷ್ಯನ ವಿಕಾಸದಲ್ಲಿ ಸೌಹಾರ್ದತೆ ಅತೀ ಮುಖ್ಯವಾಗಿದ್ದು, ಅದನ್ನು ವಿಚ್ಛೇದಿಸುವ ಕಾರ್ಯವಾಗಬಾರದು. ಈ ಕಾರಣದಿಂದ ರಂಗಭೂಮಿ ಸೌಹಾರ್ದತೆಯನ್ನು ಉಳಿಸಬೇಕು. ಅದರಿಂದ ಕಲಿಯಬೇಕು. ಅದರ ನೆರಳಲ್ಲಿ, ಉತ್ತೇಜನದಲ್ಲಿ ಮುಂದುವರಿಯಬೇಕು ಎಂದು ನಿರ್ದಿಗಂತದ ರುವಾರಿ, ಬಹುಭಾಷಾ ನಟ ಪ್ರಕಾಶ್ ರಾಜ್ ‘ನಿರ್ದಿಗಂತ 2025’ ಉತ್ಸವದ ಸಂದೇಶ ನೀಡಿದರು.
ಬಿರು ಬಿಸಿಲಿನ ಬಿಸಿಗಾಳಿಯ ನಡುವೆಯೂ ತಂಪು ಬೀರುವ ಮರಗಳ ನೆರಳಿನ ನಡುವಿನ ರಂಗ ಮಂಚಿಕೆ (ಬಯಲು ವೇದಿಕೆ) ಮೂರು ಮಂದಿ ಗಣ್ಯರ ಆಸೀನ. ವೇದಿಕೆಯ ಬಲಪಾರ್ಶ್ವದಲ್ಲಿ ವಾದ್ಯ ಪರಿಕರಗಳನ್ನು ನುಡಿಸುವ ಕಲಾವಿದರು. ಇನ್ನೊಂದು ಪಾಶ್ವದಲ್ಲಿ ಕರಾವಳಿಯ ಸೌಹಾರ್ದತೆಯ ಪ್ರತೀಕವಾದ ಮಲ್ಲಿಗೆ ಹೂವು ಕಟ್ಟುವ ಕಾಲೇಜು ವಿದ್ಯಾರ್ಥಿನಿಯರು. ಈ ಮೂಲಕ ಬದುಕು ಮತ್ತು ಕಲೆಯನ್ನು ಮೇಳೈಸಿಕೊಂಡ ವಿಭಿನ್ನ ಪರಿಕಲ್ಪನೆಯೊಂದಿಗೆ ಎರಡನೇ ಆವೃತ್ತಿಯ ನಾಲ್ಕು ದಿನಗಳ ‘ನಿರ್ದಿಗಂತ ಉತ್ಸವ’ವ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಆವರಣದಲ್ಲಿ ಹಲವು ವಿಭಿನ್ನತೆಗಳೊಂದಿಗೆ ಆರಂಭಗೊಂಡಿದೆ.
ಉದ್ಘಾಟನಾ ಸಮಾರಂಭದಲ್ಲಿ ಕರಾವಳಿಯ ಅದೆಷ್ಟೋ ಕುಟುಂಬಗಳ ಜೀವನಾಧಾರವಾಗಿರುವ, ಸೌಹಾರ್ದತೆಯ ಸಂಕೇತವಾಗಿರುವ ಶಂಕರಪುರದ ಸೌಹಾರ್ದತೆಯ ಜೀವನ ಕತೆಯನ್ನು ಸಾರುವ ಮಲ್ಲಿಗೆ ಹೂವುಗಳನ್ನು ವೇದಿಕೆಯಲ್ಲಿದ್ದ ಅತಿಥಿಗಳು ವಿದ್ಯಾರ್ಥಿಗಳಿಗೆ ಹೆಣೆಯಲು ನೀಡುವ ಮೂಲಕ ವಿಶೇಷ ರೀತಿಯಲ್ಲಿ ಉದ್ಘಾಟನೆ ನಡೆಯಿತು. ಉದ್ಘಾಟನಾ ಸಮಾರಂಭದುದ್ದಕ್ಕೂ ವಿದ್ಯಾರ್ಥಿಗಳು ಬಾಳೆದಿಂಡಿನ ಹಗ್ಗದ ಮೂಲಕ ಹೂವುಗಳನ್ನು ಹೆಣೆಯುತ್ತಾ ‘ನಿರ್ದಿಗಂತ’ದ ಪ್ರಮುಖ ಧ್ಯೇಯವಾದ ‘ಕಲೆಯ ಮೂಲಕ ಭಾವೈಕ್ಯತೆ’ಯ ಸಂದೇಶವನ್ನು ಸಾರಿದರು. ಸಂತ ಅಲೋಶಿಯಸ್ ವಿವಿಯ ಆವರಣದಲ್ಲಿ ಚಿತ್ರಕಲೆಗಳ ಪ್ರದರ್ಶನ, ಕೈಮಗ್ಗ ಸೀರೆಗಳು ಹಾಗೂ ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ತುಳುನಾಡಿನ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಕುಲಕಸುಬು ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆಯನ್ನೂ ಸಮುದಾಯದಿಂದ ಆಯೋಜಿಸಲಾಗಿದೆ.