×
Ad

ಹುತಾತ್ಮರ ಕನಸು ನನಸು ಮಾಡಬೇಕು : ವಿದ್ಯಾರ್ಥಿಗಳಿಗೆ ಕೆ.ವಿ.ಪ್ರಭಾಕರ್ ಕರೆ

ಮಂಗಳೂರು ವಿವಿಯಲ್ಲಿ 77 ನೇ ಗಣರಾಜ್ಯೋತ್ಸವ ದಿನಾಚರಣೆ

Update: 2026-01-26 19:00 IST

ಮಂಗಳೂರು : ಗಣರಾಜ್ಯಗಳ ಅಧಿಪತಿ ಭಾರತ ಎಂದು ನಾವು ಹೆಮ್ಮೆ ಪಡುವಾಗ, ದೇಶದ ಒಕ್ಕೂಟ ವ್ಯವಸ್ಥೆಯ ಮೇಲೂ ಹೆಮ್ಮೆ ಪಡಬೇಕು. ಹುತಾತ್ಮರ ಕನಸು ನನಸು ಮಾಡುವ ಕನಸು ನಿಮ್ಮದಾದಾಗ ಮಾತ್ರ ಹುತಾತ್ಮರಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜನವರಿ 26ನ್ನು ಕೇವಲ ಸರ್ಕಾರಿ ರಜೆ ಅಥವಾ ಲಾಂಗ್ ವೀಕೆಂಡ್ ಆಗಿ ಮಾತ್ರ ನೋಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಲ್ಲಿ ಕುಳಿತಿರುವ ವಿದ್ಯಾರ್ಥಿಗಳು ದೇಶದ ನಾಳೆಯ ವಾಸ್ತುಶಿಲ್ಪಿಗಳು ಮಾತ್ರವಲ್ಲ, ತಮ್ಮ ಜೀವನ ಮತ್ತು ಭಾರತದ ಭವಿಷ್ಯವನ್ನು ರೂಪಿಸುವ ಶಕ್ತಿಯೂ ನಿಮ್ಮಲ್ಲಿದೆ. ಈ ಎರಡರ ನಡುವೆ ಆಳವಾದ ಸಂಬಂಧವಿದೆ ಎಂದು ಹೇಳಿದರು.

ತ್ರಿವರ್ಣ ಧ್ವಜದ ಹಿಂದೆ ನಮ್ಮ ಹಿರಿಯರ ತ್ಯಾಗ, ಬಲಿದಾನ ಹಾಗೂ ಹೋರಾಟದ ದೀರ್ಘ ಇತಿಹಾಸವಿದೆ. ಸ್ವತಂತ್ರ, ಸದೃಢ ಮತ್ತು ಸರ್ವಧರ್ಮ ಸಮನ್ವಯದ ಭಾರತ ನಿರ್ಮಾಣವೇ ಅವರ ಕನಸಾಗಿತ್ತು. ಆ ಕನಸನ್ನು ಯುವಕರು ಕೈಬಿಡುವುದು ಬೇಸರದ ಸಂಗತಿ ಎಂದು ಹೇಳಿದರು.

1950ರ ಜನವರಿ 26ರಂದು ಭಾರತ ಗಣರಾಜ್ಯವಾಗಿ ಸ್ಥಾಪನೆಯಾಗಿ ಕಾನೂನಿನ ಆಳ್ವಿಕೆ ಜಾರಿಗೆ ಬಂದಿತು. ನಮ್ಮ ಸಂವಿಧಾನ ಕೇವಲ ಕಾನೂನು ಪಠ್ಯವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಜೀವನದ ಕೈಪಿಡಿ ಎಂದು ವಿವರಿಸಿದರು.

ಸಂವಿಧಾನ ನಮಗೆ ಮಾತನಾಡುವ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಾಗೂ ಕನಸು ಕಾಣುವ ಹಕ್ಕು ನೀಡಿದೆ. ಪ್ರಜಾಪ್ರಭುತ್ವವೆಂದರೆ ಪ್ರೇಕ್ಷಕರಾಗಿ ನೋಡುವ ಆಟವಲ್ಲ. ಪ್ರತಿಯೊಬ್ಬ ನಾಗರಿಕನೂ ಅದನ್ನು ಗಟ್ಟಿಗೊಳಿಸುವ ಶಕ್ತಿಯಾಗಬೇಕು ಎಂದು ಹೇಳಿದರು.

2026ರ ಹೊತ್ತಿಗೆ ದೇಶದ ದೊಡ್ಡ ಸವಾಲು ಸತ್ಯದ ಸಾಕ್ಷರತೆ. ಡೀಪ್‌ಫೇಕ್‌ಗಳ ಕಾಲದಲ್ಲಿ ಯುವಕರು ಸತ್ಯದ ಸೇನಾನಿಗಳಾಗಬೇಕಿದೆ ಎಂದ ಅವರು, ರಾಷ್ಟ್ರದ ಪ್ರಗತಿಯನ್ನು GDP ಮೂಲಕ ಮಾತ್ರವಲ್ಲ, ನಾಗರಿಕರ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳ ಮೂಲಕವೂ ಅಳೆಯಬೇಕು ಎಂದು ಹೇಳಿದರು.

ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಕೇವಲ ಅರ್ಥಮಾಡಿಕೊಳ್ಳುವುದಲ್ಲ, ಜೀವನದಲ್ಲಿ ಆಚರಿಸಬೇಕು. ಭಾಷೆ, ಧರ್ಮ, ಜಾತಿಗಳ ಭೇದವಿಲ್ಲದೆ ಎಲ್ಲರನ್ನು ಗೌರವಿಸುವುದರ ಮೂಲಕ ದೇಶದ ಏಕತೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ವಿಶ್ವವಿದ್ಯಾಲಯಗಳು ಪದವಿ ನೀಡುವ ಕೇಂದ್ರಗಳಷ್ಟೇ ಅಲ್ಲದೆ, ನಾಗರಿಕ ಪ್ರಜ್ಞೆ ಬೆಳೆಸುವ ಕಾರ್ಯಾಗಾರಗಳಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News