ಮಂಗಳೂರು: ಸಂತ ಅಂತೋನಿ ಚಾರಿಟೇಬಲ್ ಟ್ರಸ್ಟಿಗೆ ‘ಮೋತಿಮಹಲ್’ ಹಸ್ತಾಂತರ
ಮಂಗಳೂರು: ದ.ಕ. ಜಿಲ್ಲೆಯ ಪ್ರಥಮ ತಾರಾ ಹೋಟೆಲ್ ಮೋತಿ ಮಹಲ್‌ನ ಭೂವಿ ವಿವಾದ ಬಗೆಹರಿ ದಿದ್ದು, ಉದ್ಯಮಿ ಎ.ಜೆ. ಶೆಟ್ಟಿ ಅವರು ಸಂತ ಅಂತೋನಿ ಚಾರಿಟೇಬಲ್ ಟ್ರಸ್ಟಿಗೆ ಮೋತಿಮಹಲ್ ಕಟ್ಟಡವನ್ನು ಬುಧವಾರ ಹಸ್ತಾಂತರಿಸಿದರು.
ಮಂಗಳೂರಿನ ಹೃದಯ ಭಾಗದ ಫಳ್ನೀರಿನಲ್ಲಿರುವ ಸುಮಾರು 1.70 ಎಕ್ರೆ ಜಮೀನಿನಲ್ಲಿರುವ ಮೋತಿಮಹಲ್‌ನ್ನು ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕ ವಂದನಿಯ ಫಾ. ಜೆ ಬಿ ಕ್ರಾಸ್ತ ಪಡೆದರು ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ. ಫಾ. ಜೆ. ಬಿ.ಸಲ್ಡಾನ ತಿಳಿಸಿದ್ದಾರೆ.
ಮೋತಿ ಮಹಲ್ ಬಗ್ಗೆ ಒಂದಿಷ್ಟು : ಕುಡ್ಪಿ ಶ್ರೀನಿವಾಸ್ ಶೆಣೈ ಆ್ಯಂಡ್ ಕಂಪೆನಿಯು ಮಂಗಳೂರಿನಲ್ಲಿ ಪಂಚತಾರಾ ಸವಲತ್ತುಗಳುಳ್ಳ ಹೋಟೆಲ್‌ನ ಅವಶ್ಯಕತೆಯನ್ನು ಮನಗಂಡು ಸೈಂಟ್ ಅಂಟೋನಿ ಚಾರಿಟೇಬಲ್ ಟ್ರಸ್ಟ್‌ನ 1.70 ಎಕ್ರೆ ಭೂಮಿಯನ್ನು 1961ರ ಸೆ.23ರಂದು ನೋಂದಾಯಿತ ಟರ್ಮ್ ಲೀಸ್ ಪ್ರಕಾರ ಪಡೆದು ಅದರಲ್ಲಿ ಭವ್ಯವಾದ ಬಹುಮಹಡಿಗಳ ಮೋತಿ ಮಹಾಲ್ ಪಂಚತಾರಾ ಹೋಟೆಲ್‌ನ್ನು ನಿರ್ಮಿಸಿದ್ದರು. ಬಳಿಕ ಈ ತಾರಾ ಹೋಟೆಲ್‌ನ್ನು ಎ.ಜೆ ಶೆಟ್ಟಿ ಆ್ಯಂಡ್ ಕಂಪೆನಿಯು ನೊಂದಾಯಿತ ದಾಖಲೆ ಪ್ರಕಾರ ಕುಡ್ಪಿ ಶ್ರೀನಿವಾಸ ಶೆಣೈ ಕಂಪೆನಿಯಿಂದ ಪಡೆದಿತ್ತು.
ಮೋತಿಮಹಲ್ ನೂರಾರು ಐಶಾರಾಮಿ ಕೊಠಡಿಗಳುಳ್ಳ ಹಾಗೂ ಸಮಾರಂಭಗಳನ್ನು ನಡೆಸುವ ಸಂಭಾಗಣ, ಸ್ವಿಮಿಂಗ್ ಪೂಲ್ ಮುಂತಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಮೋತಿ ಮಹಾಲ್ ಹೋಟಲ್‌ನ್ನು ಎ.ಜೆ. ಶೆಟ್ಟಿ ಆ್ಯಂಡ್ ಕಂಪೆನಿ ವಹಿಸಿಕೊಂಡಿತ್ತು.
ಟರ್ಮ್‌ಲೀಸ್ ಡೀಡಿನ 50 ವರ್ಷಗಳ ಅವಧಿ ಮುಗಿದ ಬಳಿಕ ಮುಂದಿನ 50 ವರ್ಷ ಲೀಸ್ ಡೀಡು ನವೀಕರಣ ಮಾಡುವ ಅವಕಾಶವಿದ್ದರೂ, ಸಂತ ಅಂತೋನಿ ಚಾರಿಟೇಬಲ್ ಟ್ರಸ್ಟ್ ರವರು ಜಮೀನು ಮತ್ತು ಹೋಟೆಲ್ ಕಟ್ಟಡವನ್ನು ಬಿಟ್ಟುಕೊಡಬೇಕೆಂದು ವ್ಯಾಜ್ಯವನ್ನು ನ್ಯಾಯಾಲಯದಲ್ಲಿ ದಾವೆ ಹೂಡಿ ದ್ದರು. ಇದೇ ವೇಳೆ ಎ.ಜೆ ಶೆಟ್ಟಿ ಆ್ಯಂಡ್ ಕಂಪೆನಿಯವರು ತಮಗೆ ಮುಂದಿನ 50 ವರ್ಷಗಳ ಕಾಲ ಲೀಸನ್ನು ನವೀಕರಣ ಮಾಡಬೇಕೆಂದು ಕೋರಿ ತಕಾರರು ಅರ್ಜಿ ಸಲ್ಲಿಸಿದ್ದರು.
ಮಂಗಳೂರಿನ ಮಾನ್ಯ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯವು ಎರಡು ದಾವೆಗಳನ್ನು ಸೇರಿಸಿ ವಿಚಾರಣೆ ನಡೆಸಿತ್ತು. ಅಂತಿಮವಾಗಿ ನ್ಯಾಯಧೀಶೆ ಸಿ.ಎಂ. ಪುಷ್ಪಲತಾ ಅವರು ಸಂತ ಅಂತೋನಿ ಟ್ರಸ್ಟ್ ಪರವಾಗಿ ತೀರ್ಪು ನೀಡಿದ್ದರು. ಇದರ ವಿರುದ್ಧ ಎ.ಜೆ. ಕಂಪೆನಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿಗಳಾದ ಕೆ.ಎಸ್. ಮುರುಗಲ್ ಮತ್ತು ವೆಂಕಟೇಶ್ ನಾಯಕ್ ನೇತೃತ್ವದ ನ್ಯಾಯಪೀಠ ವಿಚಾರಣಾ ನ್ಯಾಯಾಲಯದ ತೀರ್ಪುನ್ನು ಎತ್ತಿ ಹಿಡಿಯಿತು.
ಇದರ ವಿರುದ್ಧ ಸುಪ್ರೀಮ್ ಕೋರ್ಟಿನಲ್ಲಿ ಎ.ಜೆ. ಶೆಟ್ಟಿ ಕಂಪೆನಿಯವರು ಅಪೀಲನ್ನು ಸಲ್ಲಿಸಿದ್ದರು. ಬಳಿಕ ಅಪೀಲಿನಲ್ಲಿ ರಾಜಿ ಸಂಧಾನವಾಗಿ ಎ.ಜೆ ಶೆಟ್ಟಿ ಮತ್ತು ಕಂಪೆನಿಯವರು ಎಪ್ರಿಲ್ 30 ರಂದು ಜಮೀನು ಮತ್ತು ಹೋಟೆಲ್ ಕಟ್ಟಡವನ್ನು ಸಂತ ಅಂತೋನಿ ಟ್ರಸ್ಟ್‌ಗ ಹಸ್ತಾಂತರಿಸಿದರು.
ಸಂತ ಅಂತೋನಿ ಚಾರಿಟೇಬಲ್ ಸಂಸ್ಥೆಯ ಪರ ಹಿರಿಯ ವಕೀಲ ಎಂಪಿ ನೊರೊನ್ಹಾ ಮಂಗಳೂರಿನ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವಕೀಲರಾದ ಉದಯ ಹೊಳ್ಳ ಮತ್ತು ಸಿರಿಲ್ ಪ್ರಸಾದ ಪಾಯ್ಸ್ ಸಂಸ್ಥೆಯ ಪರವಾಗಿ ವಾದ ಮುಂದುವರಿಸಿದ್ದರು.
ಸಂತ ಅಂತೋನಿ ಚಾರಿಟೇಬಲ್ ಟ್ರಸ್ಟಿನ ಪರವಾಗಿ ಅಂದಿನ ಧರ್ಮಾಧ್ಯಕ್ಷರಾದ ಅತೀ ವಂ. ಡಾ ಅಲೋಶಿಯಸ್ ಪೌಲ್ ಡಿಸೋಜರವರ ಮಾರ್ಗದರ್ಶನದಲ್ಲಿ ಫಾ. ಡೆನಿಸ್ ಮೊರಸ್ ಪ್ರಭು ನ್ಯಾಯಾಲಯದ ಮೆಟ್ಟಿಲು ಏರಿದ್ದರು.
ಬಳಿಕ ವಂ. ಒನಿಲ್ ಡಿಸೋಜ ಮತ್ತು ವಂ. ಜೆ.ಬಿ. ಕ್ರಾಸ್ತ ತಮ್ಮ ಆಡಳಿತ ಅವಧಿಯಲ್ಲಿ ಕಾನೂನು ಹೋರಾಟವನ್ನು ಯಶಸ್ವಿಯಾಗಿ ಮುಂದುವರಿಸಿದ್ದರು ಎಂದು ವಂ. ಜೆ. ಬಿ.ಸಲ್ಡಾನ ತಿಳಿಸಿದ್ದಾರೆ.