×
Ad

ವಿಕಲಚೇತನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಅಗತ್ಯ : ಮಾನಸ ಹೆಗ್ಡೆ

Update: 2025-12-03 16:39 IST

ಮಂಗಳೂರು, ಡಿ.3: ದೇಶದ ಸಂವಿಧಾನ ಎಲ್ಲರಿಗೂ ಸಮಾನತೆ, ಸಮಾನವಾಗಿ ಬದುಕುವ ಹಕ್ಕು ನೀಡಿದೆ. ವಿಕಲಚೇತನರಿಗೂ ತಮ್ಮ ಹಕ್ಕುಗಳ ಬಗ್ಗೆ ಅರಿವು ಇರಬೇಕು. ವಿಕಲಚೇತನರಿಗೆ ಯಾವುದೇ ರೀತಿಯ ಮಾನಸಿಕ, ದೈಹಿಕ ದೌರ್ಜನ್ಯ, ಶೋಷಣೆ, ತೊಂದರೆ ಆದಲ್ಲಿ ಕಾನೂನು ಸೇವಾ ಪ್ರಾಧಿಕಾರ ನೆರವು ನೀಡಲಿದೆ ಎಂದು ದ.ಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್‌ ಅಡ್ವೋಕೇಟ್‌ ಮಾನಸ ಹೆಗ್ಡೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ದ.ಕ. ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಗಾಂಧಿನಗರ ಮತ್ತು ಶಿಶು ಕೇಂದ್ರೀಕೃತ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ವಿಶ್ವ ವಿಕಲಚೇತನರ ದಿನಾಚರಣೆ -2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೊಟೇಲ್ ಉದ್ಯಮಿ ಗಣೇಶ್ ಶೆಟ್ಟಿ, ವಿಕಲಚೇತನರು ಮುಖ್ಯವಾಹಿನಿಗೆ ಬರಬೇಕು ಎಂಬ ದೃಷ್ಟಿಯಿಂದ ಕಳೆದ 15 ವರ್ಷದಿಂದ ವಿಕಲಚೇತನರ ಕಾರ್ಯಕ್ರಮಗಳಿಗೆ ನೆರವಾಗುತ್ತಿದ್ದೇನೆ. ವಿಕಲಚೇತನರಿಗೆ ಸರಕಾರದಿಂದ ಸವಲತ್ತುಗಳು ದೊರೆಯಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಾಧಿಕಾರಿ ರಶ್ಮಿ, ಲಯನ್ಸ್ ಕ್ಲಬ್ ಗಾಂಧಿನಗರ ಅಧ್ಯಕ್ಷ ಮನೋಹರ ಉಳ್ಳಾಲ್, ಮಾಜಿ ಮೇಯರ್ ಮಹಾಬಲ ಮಾರ್ಲ, ಮಾಜಿ ಕಾರ್ಪೋರೇಟರ್ ಜಗದೀಶ ಶೆಟ್ಟಿ, ದ.ಕ. ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ದ.ಕ. ಜಿಲ್ಲಾಧ್ಯಕ್ಷೆ ರೇಷ್ಮಾ ಮರಿಯ ಮಾರ್ಟಿಸ್, ಪ್ರಮುಖರಾದ ಬಾಲಕೃಷ್ಣ ಕೊಟ್ಟಾರಿ, ಅಶೋಕ್ ದೇವಾಡಿಗ ಉಪಸ್ಥಿತರಿದ್ದರು.

ವಿವಿಧ ಸಾಧನೆಗೈದ 17 ಮಂದಿ ಭಿನ್ನಸಾಮರ್ಥ್ಯದ ಮಕ್ಕಳನ್ನು ಸನ್ಮಾನಿಸಲಾಯಿತು. ಭಿನ್ನಸಾಮರ್ಥ್ಯದ ಮಕ್ಕಳ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಶಿಕ್ಷಕರ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮನೀಶ್ ನಾಯಕ್ ಸ್ವಾಗತಿಸಿದರು. ಶಕ್ತಿನಗರದ ಸಾನಿಧ್ಯ ಭಿನ್ನಸಾಮರ್ಥ್ಯದ ಮಕ್ಕಳ ಶಾಲೆ ಆಡಳಿತಾಧಿಕಾರಿ ವಸಂತಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News