‘ಮೀಫ್’ನಿಂದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಶೇ.100 ಸಾಧಿಸುವ ಗುರಿ: ಮೂಸಬ್ಬ ಪಿ. ಬ್ಯಾರಿ
ಮಂಗಳೂರು: ಎಸೆಸೆಲ್ಸಿ ವಿದ್ಯಾರ್ಥಿಗಳ ಶೇ.67ರಷ್ಟಿದ್ದ ಫಲಿತಾಂಶವನ್ನು ಶಿಕ್ಷಣ ತಜ್ಞರಿಂದ ನಡೆಸಲಾದ ಪ್ರೇರಣಾ ಶಿಬಿರಗಳ ಮೂಲಕ ಶೇ.95ಕ್ಕೆ ಏರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಫಲಿತಾಂಶವನ್ನು ಶೇ.100ರಷ್ಟು ಸಾಧಿಸುವ ಗುರಿ ಹಮ್ಮಿಕೊಳ್ಳಲಾಗಿದೆ ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್‌ನ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಹೇಳಿದರು.
ನಗರದ ‘ಜಂಇಯ್ಯತುಲ್ ಫಲಾಹ್’ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ದಶಕದ ಹಿಂದೆ 34 ಖಾಸಗಿ ಅನುದಾನ ರಹಿತ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಗ್ಗೂಡುವಿಕೆಯಿಂದ ಆರಂಭಗೊಂಡ ಈ ಸಂಸ್ಥೆಯಲ್ಲಿ ಇದೀಗ 183 ಶಿಕ್ಷಣ ಸಂಸ್ಥೆಗಳಿವೆ. ಮಸೀದಿ-ಮದ್ರಸಗಳ ಸಂಸ್ಥೆಗಳ ಅಧೀನದಲ್ಲಿ ನಡೆಯುವ ಈ ಶಾಲೆಗಳಲ್ಲಿ ಎಲ್ಲಾ ಜಾತಿ, ಧರ್ಮಗಳ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 6 ಸಾವಿರಕ್ಕೂ ಅಧಿಕ ಶಿಕ್ಷಕರಿದ್ದಾರೆ. ಮೀಫ್ ನಡೆಸಿದ ಸತತ ಹಲವು ವರ್ಷಗಳ ಪರಿಶ್ರಮದಿಂದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿದೆ. ‘ಮೀಫ್’ನ ಈ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಮೀಫ್ ಗೌರವಾಧ್ಯಕ್ಷ ಉಮರ್ ಟೀಕೆ ಮಾತನಾಡಿ ಮಸೀದಿ-ಮದ್ರಸಗಳ ಅಧೀನದಲ್ಲಿ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿನ ಇಂಗ್ಲಿಷ್, ವಿಜ್ಞಾನ, ಗಣಿತ ಶಿಕ್ಷಕರಿಗೆ ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಮೂಲಕ ವೇತನ ಪಾವತಿಸಲು ಮಾತುಕತೆ ನಡೆಸಲಾಗಿದೆ. ಪ್ರಸಕ್ತ ವರ್ಷ 10 ಶಾಲೆಗಳ ಶಿಕ್ಷಕರಿಗೆ ವೇತನ ನೀಡಲು ಫೌಂಡೇಶನ್ ಒಪ್ಪಿಕೊಂಡಿವೆ. ಮುಂದಿನ ವರ್ಷ 100 ಶಾಲೆಗಳ ಶಿಕ್ಷಕರಿಗೆ ವೇತನ ಪಾವತಿಸಲು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಭರವಸೆ ನೀಡಿದೆ ಎಂದರು.
‘ಮೀಫ್’ ಅಧೀನದ ಶಿಕ್ಷಣ ಸಂಸ್ಥೆಗಳಲ್ಲದೆ ಸರಕಾರಿ ಕನ್ನಡ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಪೈಲಟ್ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಉಮರ್ ಟೀಕೆ ಹೇಳಿದರು.
ಶಾಲೆಗಳ ಮಾನ್ಯತೆ ನವೀಕರಣದ ಅವಧಿಯನ್ನು 10 ವರ್ಷಕ್ಕೆ ವಿಸ್ತರಿಸಬೇಕು. 2020-21ಕ್ಕೆ ಮುಂಚಿತವಾಗಿ ನಿರ್ಮಾಣ ಗೊಂಡ ಶಾಲಾ ಕಟ್ಟಡಗಳಿಗೆ ಅಗ್ನಿಶಾಮಕ ನಿರಾಕ್ಷೇಪಣಾ ಮತ್ತು ಲೋಕೋಪಯೋಗಿ ಇಲಾಖೆಯ ಸುರಕ್ಷತಾ ಪ್ರಮಾಣ ಪತ್ರ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸಿರುವ ರಾಜ್ಯ ಹೈಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸಬೇಕು. ಪ್ರೌಢಶಾಲೆಗಳಿಗೆ ಮಾನ್ಯತೆ ನೀಡಲು ಕನಿಷ್ಠ 25 ವಿದ್ಯಾರ್ಥಿಗಳು ಇರಬೇಕು ಎಂಬ ನಿಯಮವನ್ನು 10 ವಿದ್ಯಾರ್ಥಿಗಳಿಗೆ ಇಳಿಸಬೇಕು. ಬ್ಯಾರಿ ಭಾಷೆಯನ್ನು ಭಾಷಾ ಅಲ್ಪಸಂಖ್ಯಾತ ಎಂದು ಘೋಷಿಸಿ ಉನ್ನತ ಶಿಕ್ಷಣ ಪ್ರವೇಶಾತಿಯಲ್ಲಿ ಪ್ರತ್ಯೇಕ ಕೋಟಾ ನಿಗದಿಪಡಿಸಬೇಕು ಇತ್ಯಾದಿ ಹಲವು ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದ್ದು, ಈ ಮನವಿಗೆ ಸರಕಾರ ಶೀಘ್ರ ಸ್ಪಂದಿಸುವ ವಿಶ್ವಾಸವಿದೆ ಎಂದು ಮೀಫ್ ಉಪಾಧ್ಯಕ್ಷ ಮುಸ್ತಫಾ ಸುಳ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೀಫ್ ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು, ಉಪಾಧ್ಯಕ್ಷ ಮುಮ್ತಾಝ್ ಅಲಿ, ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್, ಇಲ್ಯಾಸ್, ಶಬಿ ಅಹ್ಮದ್ ಖಾಝಿ, ಅನ್ವರ್, ನ್ಯಾಯವಾದಿ ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.