×
Ad

ಗ್ರಾಮೀಣ ಪ್ರತಿಭೆಗಳ ವೈದ್ಯಕೀಯ ಶಿಕ್ಷಣಕ್ಕಾಗಿ ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜು: ಸಚಿವ ಡಾ.ಶರಣ ಪ್ರಕಾಶ ಪಾಟೀಲ್

Update: 2025-02-25 17:49 IST

ಮಂಗಳೂರು: ಗ್ರಾಮೀಣ ಪ್ರತಿಭೆಗಳಿಗೂ ವೈದ್ಯಕೀಯ ಶಿಕ್ಷಣಕ್ಕಾಗಿ ಪ್ರತಿ ಜಿಲ್ಲೆಯಲ್ಲಿಯೂ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಅವರು ಮಂಗಳವಾರ ದೇರಳಕಟ್ಟೆಯ ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಯ ಇಂಟರ್ ವೆನ್ಷನಲ್ ಕ್ಯಾಥ್ ಲ್ಯಾಬ್, ಕಣಚೂರು ಫಾರ್ಮಸಿ ಕಾಲೇಜು, ಕಣಚೂರು ಆಯುರ್ವೇದ ಆಸ್ಪತ್ರೆ, ಕಣಚೂರು ಕಾನ್ಫರೆನ್ಸ್ ಡ್ರೋಮ್ ಉದ್ಘಾಟನೆ ಮತ್ತು ಡಾ.ಯು.ಕೆ.ಮೋನು ಅವರ ಜೀವನ ಚರಿತ್ರೆ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.


ಜಿಲ್ಲೆಗೊಂದು ಸರಕಾರಿ ಕಾಲೇಜು ಆರಂಭವಾದರೆ ಗ್ರಾಮೀಣ ಭಾಗದ ಇನ್ನಷ್ಟು ಪ್ರತಿಭಾವಂತರು, ಜನಸಾಮಾನ್ಯರ ಮಕ್ಕಳು ವೈದ್ಯರಾಗಲು ಸಾಧ್ಯವಿದೆ. ರಾಜ್ಯದಲ್ಲಿ ಈಗಾಗಲೇ 22 ಸರಕಾರಿ ವೈದ್ಯಕೀಯ ಕಾಲೇಜುಗಳಿವೆ. 800 ನರ್ಸಿಂಗ್ ಕಾಲೇಜು, 100 ಇತರ ಆರೋಗ್ಯ ವಿಜ್ಞಾನ ಶಿಕ್ಷಣ ನೀಡುವ ಕಾಲೇಜುಗಳಿವೆ,ಒಟ್ಟು 70ರಷ್ಟು ಸರಕಾರಿ, ಖಾಸಗಿ ಅರೆ ವೈದ್ಯಕೀಯ ವಿಜ್ಞಾನ ಶಿಕ್ಷಣ ನೀಡುವ ಕಾಲೇಜುಗಳಿವೆ.

ತಮಿಳು ನಾಡು ಹೊರತಾಗಿ ಕರ್ನಾಟಕ ರಾಜ್ಯ ದೇಶದಲ್ಲೇ ಅತ್ಯಂತ ಹೆಚ್ಚು ವೈದ್ಯಕೀಯ ಕಾಲೇಜು ಗಳನ್ನು ಹೊಂದಿರುವ ರಾಜ್ಯವಾಗಿದೆ, ಮಂಗಳೂರು ಪ್ರದೇಶ ಬೆಂಗಳೂರು ಬಿಟ್ಟರೆ ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿ ರುವ ಕೇಂದ್ರವಾಗಿದೆ. ಭಾರತದ ವೈದ್ಯ ರಿಗೆ ವಿಶ್ವದಲ್ಲೇ ಹೆಚ್ಚಿನ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇನ್ನಷ್ಟು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಚಿಂತನೆ ಇದೆ ಎಂದು ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ.


ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಮಾತನಾಡುತ್ತಾ, ಕಣಚೂರು ಮೋನು ಅವರ ಬದುಕು ಸಾಧನೆ, ಛಲ, ಗುರಿ ಸಾಧಿಸುವ ಬದ್ಧತೆ, ಪರಿಶ್ರಮ ಮುಂದಿನ ಪೀಳಿಗೆಯ ಯುವಕರಿಗೆ ಪ್ರೇರಣೆ ನೀಡಬಹುದು. ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜು ನಿರ್ಮಿಸಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದ್ದಾರೆ. ಒಂದು ಊರಿಗೆ ಒಂದು ಸಂಸ್ಥೆ ಸ್ಥಾಪನೆಯಾದಾಗ ಅಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಅದು ಉತ್ತಮ ಬೆಳವಣಿಗೆಗೆ ಕಾರಣ ವಾಗಬೇಕು. ಅಲ್ಲಿನ ಜನರ ನಡುವಿನ ಸೌಹಾರ್ದ ತೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು. ನಮ್ಮ ದೇಶದ ಸಂವಿಧಾನ ನೀಡಿ ರುವ ಅವಕಾಶವನ್ನು ಬಳಸಿಕೊಂಡು ನಾವೆಲ್ಲರೂ ಜೊತೆಯಾಗಿ ಬದುಕುವಂತಾಗಬೇಕು. ಮುಖ್ಯ ವಾಗಿ ಯುವ ಜನರು ಸಕಾರಾತ್ಮಕ ಚಿಂತನೆಯಿಂದ ಸಮಾಜವನ್ನು ಕಟ್ಟುವವರಾಗಬೇಕು, ದೇಶಕ್ಕೆ ಕೊಡುಗೆ ನೀಡುವವರಾಗಬೇಕು ಎಂದರು. ಕಣಚೂರು ಸಂಸ್ಥೆ ಮುಂದೆ ವಿಶ್ವ ವಿದ್ಯಾನಿಲಯವಾಗಲಿ ಎಂದು ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂ ಒಂದು ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವರು ಮುತುವರ್ಜಿವಹಿಸಬೇಕು ಎಂದು ಅವರು ಸಲಹೆ ನೀಡಿದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡುತ್ತಾ, ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆ ಗಳ ಮೂಲಕ 40 ಸಾವಿರ ವಿದ್ಯಾರ್ಥಿ ಗಳಿಗೆ ವಿವಿಧ ರೀತಿಯ ಶಿಕ್ಷಣ ನೀಡುವುದರ ಜೊತೆಗೆ ಅತ್ಯಾಧುನಿಕ ಸೌಲಭ್ಯ ಗಳ ಆಸ್ಪತ್ರೆ, ಆರ್ಯವೇದ ಆಸ್ಪತ್ರೆಗಳ ಮೂಲಕ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಜನಸಾಮಾನ್ಯರಿಗೆ ರೋಗ ಬಾರದಂತೆ ತಡೆಗಟ್ಟಲು ಹಾಗೂ ಅನಾರೋಗ್ಯ ಪೀಡಿತರಾ ದಾಗ ರೋಗ ಗುಣಪಡಿಸಲು ಚಿಕಿತ್ಸೆ ನೀಡುವ ಮಹತ್ವದ ಕೆಲಸ ಮಾಡುತ್ತಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಣಚೂರು ಮೋನು, ಕೊಣಾಜೆಯಲ್ಲಿ ಹುಟ್ಟಿ ಬೆಳೆದ ನನಗೆ ಶಿಕ್ಷಣ ನೀಡಿದವರ ಬಗ್ಗೆ ಅತ್ಯಂತ ಹೆಚ್ಚು ಗೌರವವಿದೆ. ನನ್ನ ಇಡೀ ಜೀವನ ದುಡಿಮೆಯಲ್ಲಿಯೇ ಸಾಕಷ್ಟು ಕಾಲ ಕಳೆದು ಹೋಯಿತು, 24 ಬಾರಿ ಹಜ್ ಯಾತ್ರೆ ಮಾಡಿದ್ದೇನೆ ಹೊರತು ಉಳಿದ ಸಮಯ ಕುಟುಂಬಕ್ಕೆ ಮೀಸಲಿಡಲು ಸಾಧ್ಯ ವಾಗಲಿಲ್ಲ. 1958 ರಲ್ಲಿ ಕುಗ್ರಾಮವಾಗಿದ್ದ ಸಂದರ್ಭದಲ್ಲಿ ಶಾಲೆ ಹೋಗಲು ಕಷ್ಟ ಇತ್ತು. ನನ್ನ ಮಗನ ಶಿಕ್ಷಣದ ಸಂದರ್ಭದಲ್ಲಿ ನಾನು ಒಂದು ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ನಿರಾಕರಿಸಿದಾಗ ನಾನು ಒಂದು ಶಿಕ್ಷಣ ಸಂಸ್ಥೆ ಕಟ್ಟಬೇಕು ಎಂಬ ಇಚ್ಛೆ ಮೂಡಿತು ಮತ್ತು ಅದೇ ನನಗೆ ಪ್ರೇರಣೆ ಯಾಯಿತು. ಈ ಸಂಸ್ಥೆ ಕಟ್ಟಲು ಸಾಕಷ್ಟು ಮಂದಿ ಸಹಕಾರ ನೀಡಿದ ವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಕಣಚೂರು ಮೋನು ಕೃತಜ್ಞತೆ ಸಲ್ಲಿಸಿದರು.


ಮಾಜಿ ಸಚಿವೆ ಮೋಟಮ್ಮ ಮಾತನಾಡುತ್ತಾ, ಖಾಸಗಿ ವೈದ್ಯಕೀಯ ಸಂಸ್ಥೆ ಗಳು ಕೇವಲ ಹಣದ ಹಿಂದೆ ಬೀಳದೆ ಮಾನವೀಯ ನೆಲೆಯಲ್ಲಿ ಸೇವೆ ನೀಡುವಂತಾಗಬೇಕು ಎಂದರು.

‌ ಸಮಾರಂಭದಲ್ಲಿ ಶಾಸಕ ಅಶೋಕ ರೈ, ವಿಧಾನ ಪರಿಷತ್ ಸದಸ್ಯ ಎಸ್. ಎಲ್.ಬೋಜೇ ಗೌಡ,ಮಾಜಿ ಸಚಿವ ರಮಾನಾಥ ರೈ, ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಯೆನೆಪೋಯಅಬ್ದುಲ್ಲಾ ಕುಂಞಿ, ಎಸ್ ಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ , ಮಾಜಿ ಶಾಸಕ ಮೊಯ್ದಿನ್‌ ಬಾವ, ಮಾಜಿ ಕಸಾಪ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೊಲ್ಲಂನ ಅಝಿಝಿಯಾ ವೈದ್ಯಕೀಯ ಶಿಕ್ಷಣ ಸಂಸ್ಥೆ ಗಳ ನಿರ್ದೇಶಕ ಡಾ.ಹಾಶಿಂ ಅಝೀಝ್‌, ಕಣಚೂರು ಶಿಕ್ಷಣ ಸಂಸ್ಥೆಗಳ ನಿರ್ದೇಶಕರಾದ ಶಹನ್ ವಾಝ್ , ಡಾ.ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿಗಳಾದ ಝೊಹರಾ ಮೋನು, ಫರೀದಾ ನಝೀಮ್, ಡಾ.ಅಬಿದಾ ಹಾಸಿಮ್, ಶಹದಾ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.


ಕಣಚೂರು ಮೋನು ಅವರಿಗೆ ಶಿಕ್ಷಕ ರಾಗಿದ್ದ ವೆಂಕಪ್ಪ ಮಾಸ್ಟರ್, ಶಂಕರ ಭಟ್,ಬೆನ್ನಿ ಡಿ ಸೋಜರನ್ನು ಹಾಜಿ ಯು.ಕೆ.ಮೋನು ಸನ್ಮಾನಿಸಿದರು. ಡಾ.ಹಾಜಿ.ಯು.ಕೆ.ಮೋನು ಅವರ ಜೀವನ ಚರಿತ್ರೆ 'ಸಾಹಸಿ ಸಾಧಕ 'ಕೃತಿಯಯ ಲೇಖಕ ಮುಳಿಯ ಶಂಕರ ಭಟ್ ಅವರನ್ನು ವೇದಿಕೆಯಲ್ಲಿ ಸನ್ಮಾನಿ ಸಲಾಯಿತು.

ಇದೇ ಸಂದರ್ಭ ಕಣಚೂರು ಅಭಿಮಾನಿಗಳ ಬಳಗ ಕಣಚೂರು ಡಾ.ಯು.ಕೆ.ಮೋನು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿದರು. ಕಣಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಚೇತನ್ ಮತ್ತು ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.



























Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News