×
Ad

ರಾಜ್ಯ ಬಜೆಟ್‌ಗೆ ದ.ಕ. ಜಿಲ್ಲೆಯ ಗಣ್ಯರ ಪ್ರತಿಕ್ರಿಯೆಗಳು

Update: 2025-03-07 19:48 IST

ಸಿಎಂ ಸಿದ್ದರಾಮಯ್ಯ

ಅಲ್ಪಸಂಖ್ಯಾತರ ಓಲೈಕೆಯ ಬಜೆಟ್: ರಾಜ್ಯ ಬಜೆಟ್‌ನಲ್ಲಿ ಸರಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ, ಯುವಕ, ಯುವತಿಯ ನವೋದ್ಯಗಕಕ್ಕೆ ಪ್ರೋತ್ಸಾಹ, ಮುಸ್ಲಿಂ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ಇನ್ನೂ ಹಲವಾರು ಯೋಜನೆಗಳನ್ನು ಘೋಷಣೆ ಮಾಡುವುದರ ಮೂಲಕ ಇದು ಏಕ ಸಮುದಾಯದ ಉದ್ಧಾರದ ಬಜೆಟ್ ಎನ್ನುವುದು ಸಾಬೀತಾಗಿದೆ.

ಅಧಿಕಾರದ ಪ್ರಮಾಣ ವಚನ ಸ್ವೀಕರಿಸುವಾಗ ಸಮಾನತೆಯ ಮಾತುಗಳನ್ನಾಡುವ ಸಿದ್ದರಾಮಯ್ಯಗೆ ಬಜೆಟ್ ಮಂಡಿಸುವುವಾಗ ಅಲ್ಪಸಂಖ್ಯಾತರು ಬಿಟ್ಟು ಬೇರೆ ಸಮುದಾಯ ನೆನಪಿಗೆ ಬರುವುದಿಲ್ಲ. ಈ ಬಜೆಟ್‌ನಲ್ಲಿ ದಲಿತ, ಹಿಂದುಳಿದ ಸಮಾಜಗಳಿಗೆ ಅನ್ಯಾಯವಾಗಿದೆ. ಕೃಷಿಕರಿಗೆ, ಮಹಿಳೆಯರಿಗೆ ವಿಶೇಷ ಯೋಜನೆಗಳ ಘೋಷಣೆಯಾಗಿಲ್ಲ. ಇದು ಸಿದ್ದರಾಮಯ್ಯರ ಅಂತಿಮ ಬಜೆಟ್ ಆಗುವುದರಲ್ಲಿ ಸಂಶಯವಿಲ್ಲ.

-ಸತೀಶ್ ಕುಂಪಲ, ಅಧ್ಯಕ್ಷರು, ದ.ಕ.ಜಿಲ್ಲಾ ಬಿಜೆಪಿ

ಭಾಷಣಕ್ಕೆ ಸೀಮಿತವಾದ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದಿನಂತೆ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಎಲ್ಲ ಜನರ ಹಿತ ಕಾಯಬೇಕಾದ ಮುಖ್ಯಮಂತ್ರಿ ಕೇವಲ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಘೋಷಿಸಿದ್ದಾರೆ. ಸರಕಾರದ ಸಾಲದ ಪ್ರಮಾಣ ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು ಆತಂಕಕಾರಿಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಕರಾವಳಿ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಅಡಕೆ ಬೆಳೆಗಾರರ ಸಮಸ್ಯೆಗೆ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ. ಮೀನುಗಾರಿಕಾ ವಲಯವನ್ನು ಕಡೆಗಣಿಸಲಾಗಿದೆ. ಕೆಲವು ಯೋಜನೆಗಳ ಬಗ್ಗೆ ಉಲ್ಲೇಖವಿದ್ದರೂ ಅದು ಬಜೆಟ್ ಭಾಷಣಕ್ಕೆ ಸೀಮಿತವಾಗಲಿದೆ.

-ನಳಿನ್ ಕುಮಾರ್ ಕಟೀಲ್, ಮಾಜಿ ಸಂಸದರು, ದ.ಕ.

ನಿರಾಶೆದಾಯಕ ಬಜೆಟ್: ಈ ಬಜೆಟ್ ನಿರಾಶದಾಯಕವಾಗಿದೆ. ಅಂಗನವಾಡಿ, ಬಿಸಿಯೂಟ ನೌಕರರಿಗೆ 1 ಸಾವಿರ ರೂ. ಏರಿಸಲಾಗಿದೆ. ಉಳಿದಂತೆ ಕಾರ್ಮಿಕರನ್ನು ನಿರ್ಲಕ್ಷಿಸಲಾಗಿದೆ. ಬಜೆಟ್‌ನಲ್ಲಿ ಗ್ಯಾರಂಟಿ ಗಳ ಯೋಜನೆಗೆ ಹಣವನ್ನು ಮೀಸಲಿರಿಸಲಾಗಿದೆ. ಉಳಿದಂತೆ ಹೊಸ ಯಾವ ಕೊಡುಗೆಯೂ ಇಲ್ಲ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲು ಮುಂದಾಗಿರುವುದು ಶ್ಲಾಘನೀಯ.

-ಬಿ. ಶೇಖರ್, ಕಾರ್ಯದರ್ಶಿ, ಸಿಪಿಐ ದ.ಕ.ಜಿಲ್ಲಾ ಸಮಿತಿ

ಇದು ತುಷ್ಟೀಕರಣದ ಬಜೆಟ್

ಇದು ಬ್ಯಾಲೆನ್ಸ್ ಕಳಕೊಂಡ ಬಜೆಟ್. ಒಂದು ವರ್ಗದವರ ಓಲೈಕೆಗಾಗಿಯೇ ಭರಪೂರ ಕೊಡುಗೆಗಳನ್ನು ನೀಡಿರುವ ತುಷ್ಟೀಕರಣ ರಾಜಕಾರಣದಪ ರಾಕಾಷ್ಠೆಯಾಗಿದೆ. ಗ್ಯಾರಂಟಿಗಳಿಗೆ ನೀಡಿದ ಭರವಸೆಯಂತೆ ನಿರುದ್ಯೋಗಿ ಭತ್ತೆ, ಗೃಹಲಕ್ಷ್ಮಿ ಹಣವನ್ನೇ ಬಿಡುಗಡೆ ಮಾಡಲು ಪರದಾಡುತ್ತಿರುವ ಸರಕಾರ ಇದೀಗ 4 ಲಕ್ಷ ಕೋಟಿ ರೂ.ಗಳ ಅತಿದೊಡ್ಡ ಬಜೆಟ್ ಮಂಡಿಸಿ, 1,16,000 ಕೋಟಿ ಸಾಲದ ಹೊರೆಯನ್ನು ಜನ ಸಾಮಾನ್ಯರ ಮೇಲೆ ಹಾಕಿದ್ದಾರೆ. ವಕ್ಫ್ ಆಸ್ತಿಗಳ ರಕ್ಷಣೆ, ಹಜ್ ಭವನದಲ್ಲಿ ಕರ್ನಾಟಕ ರಾಜ್ಯಮುಕ್ತ ವಿವಿ ಕೇಂದ್ರ ಸ್ಥಾಪನೆ, 100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋ.ರೂ. ಅನುದಾನ, ಅಲ್ಪಸಂಖ್ಯಾತ ಕಾಲನಿಗಳ ಅಭಿವೃದ್ಧಿಗೆ 1,000 ಕೋಟಿ ರೂ. ಅನುದಾನ, ಮುಸ್ಲಿಮರ ಮದುವೆಗೆ ಸಹಾಯಧನ, ವಕ್ಫ್, ಖಬರಸ್ಥಾನಗಳ ಮೂಲ ಸೌಕರ್ಯಕ್ಕೆ 150 ಕೋ.ರೂ. ಹೀಗೆ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಸಂಪೂರ್ಣ ಕಡೆಗಣಿಸಿದೆ. ಬ್ರಿಜೇಶ್ ಚೌಟ

-ಸಂಸದರು, ದ.ಕ. ಲೋಕಸಭಾ ಕ್ಷೇತ್ರ

"ಕರ್ನಾಟಕದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ಸಾಮಾಜಿಕ ನ್ಯಾಯದ ಬಜೆಟ್ ಇದಾಗಿದೆ. ಶಿಕ್ಷಣ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಸಂಶೋಧನೆ, ಪ್ರವಾಸೋದ್ಯಮ, ಆರೋಗ್ಯ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿದ ಮತ್ತು ದ.ಕ.ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯ ಮುನ್ನೋಟದೊಂದಿಗೆ ಮಂಡಿಸಿದ ಐತಿಹಾಸಿಕ ಬಜೆಟ್ ಇದಾಗಿದೆ".

-ಮಂಜುನಾಥ್ ಭಂಡಾರಿ (ಎಂಎಲ್‌ಸಿ), ಕಾರ್ಯಧ್ಯಕ್ಷರು, ಕೆಪಿಸಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News