×
Ad

ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ದ.ಕ.ಜಿಲ್ಲಾ ಮಟ್ಟದ ಸಂವಾದ ಸಭೆ

Update: 2025-04-21 22:33 IST

ಮಂಗಳೂರು : ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ದ.ಕ.ಜಿಲ್ಲಾ ಮಟ್ಟದ ಸಂವಾದ ಸಭೆಯು ಆರ್ಥಿಕ ತಜ್ಞ ಪ್ರೊ.ಎಂ. ಗೋವಿಂದರಾವ್‌ರ ಅಧ್ಯಕ್ಷತೆಯಲ್ಲಿ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಉತ್ತರ ಕರ್ನಾಟಕದ 59 ಹಾಗೂ ದಕ್ಷಿಣ ಕರ್ನಾಟಕದ 55 ತಾಲೂಕುಗಳನ್ನು ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿದೆ. ಅಭಿವೃದ್ಧಿಗೆ ಅನುದಾನದ ಹಣ ಬಳಕೆಯಾದರೂ ಕೂಡ ಕೆಲವು ತಾಲೂಕುಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿಲ್ಲ ಎಂದು ಪ್ರೊ. ಎಂ. ಗೋವಿಂದರಾವ್ ಹೇಳಿದರು.

ಪ್ರಾದೇಶಿಕ ಅಸಮತೋಲನ ಸಮಿತಿ ರಚಿಸಲಾಗಿದೆ. ಅಸಮತೋಲನ ನಿವಾರಿಸಲು ಕೆಲವು ಮುಖ್ಯ ಅಂಶಗಳನ್ನು ಸಮಿತಿಯು ಸರಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದರು.

ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಮೂಡುಬಿದಿರೆ ತಾಲೂಕಿನಲ್ಲಿ ಸರಕಾರಿ ಶಿಕ್ಷಣ ಸಂಸ್ಥೆ ಇಲ್ಲದಿರುವುದರಿಂದ ಬಡ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ತಾಲೂಕು ವಲಯಗಳಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲು ಮತ್ತು ಮುಲ್ಕಿ, ಕಡಬ, ಉಳ್ಳಾಲ ತಾಲೂಕುಗಳಿಗೆ ಶಿಕ್ಷಣ ಇಲಾಖೆ ವಲಯ ಕಚೇರಿಯನ್ನು ಸ್ಥಾಪಿಸಲು ಅವರು ಸಲಹೆ ನೀಡಿದರು.

ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಗೆ ಅವಕಾಶಗಳಿದೆ. ಸಿಆರ್‌ಝಡ್ ಪ್ರಕ್ರಿಯೆಗಳಿಂದ ತ್ವರಿತ ಅನುಮೋದನೆ ಸಾಧ್ಯವಾಗುತ್ತಿಲ್ಲ. ಆದರೂ ಪ್ರವಾಸೋದ್ಯಮ ಮೂಲಸೌಕರ‌್ಯಗಳಿಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ವೆನ್‌ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದರಿಂದ ಇನ್ನಷ್ಟು ಉತ್ತಮ ಆರೋಗ್ಯ ವ್ಯವಸ್ಥೆಗಳು ಜನರಿಗೆ ದೊರಕಲಿದೆ ಎಂದರು.

ದ.ಕ.ಜಿಪಂ ಸಿಇಒ ಡಾ.ಆನಂದ್ ಮಾತನಾಡಿ ಪಶ್ಚಿಮ ಘಟ್ಟದ ಸರಹದ್ದಿನಲ್ಲಿರುವ ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಅಭಿವೃದ್ಧಿಯಲ್ಲಿ ಹಿಂದುಳಿ ಯುವಿಕೆ ಕಂಡು ಬರುತ್ತಿದೆ. ಹಾಗಾಗಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿಯಲ್ಲಿ ಈ ೩ ತಾಲೂಕುಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಕಾರ್ಯದರ್ಶಿ ಹಾಗೂ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆ ಕಾರ್ಯದರ್ಶಿ ಡಾ. ವಿಶಾಲ್ ಆರ್. ಮಾತನಾಡಿ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಅತ್ಯಧಿಕ ಇರುವುದರಿಂದ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತರ ಹಾಸ್ಟೆಲ್‌ಗಳನ್ನು ಹೆಚ್ಚಿಸಲು ಬೇಡಿಕೆ ಇದೆ ಎಂದರು.

ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ ಆರೋಗ್ಯ ವಲಯಕ್ಕೆ ಸಂಬಂಧಿಸಿದಂತೆ ಆಯಾಯ ತಾಲೂಕುಗಳಲ್ಲಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು. ಇದರಿಂದ ಜನರಿಗೆ ಸಕಾಲಕ್ಕೆ ಉತ್ತಮ ಆರೋಗ್ಯ ವ್ಯವಸ್ಥೆ ದೊರಕಿ, ಖರ್ಚು ಕಡಿಮೆಯಾಗಲಿದೆ ಎಂದರು.

ಸಣ್ಣ ಕೈಗಾರಿಕೆಗಳು ಆರ್ಥಿಕ ಅಭಿವೃದ್ಧಿಯ ಒಂದು ಭಾಗವಾಗಿದೆ. ಹಾಗಾಗಿ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಜಮೀನು ನೀಡುವುದರಿಂದ ಈ ಕೈಗಾರಿಕೆಗಳು ಅಭಿವೃದ್ಧಿಯಾಗುವುದರ ಜೊತೆಗೆ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ಸಹಾಯವಾಗುತ್ತದೆ ಎಂದು ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News