×
Ad

ಮುಲ್ಕಿ: ಸಫ್ವಾನ್ ಕೊಲ್ನಾಡ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Update: 2025-05-20 23:10 IST

ಮುಲ್ಕಿ: ಮರ್ಹೂಂ ಸಫ್ವಾನ್ ಕೊಲ್ನಾಡ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಕೊಲ್ನಾಡ್ ಫ್ರೆಂಡ್ಸ್ ಕೊಲ್ನಾಡ್ ಹಾಗು ಬ್ಲಡ್ ಹೆಲ್ಪ್‌ ಲೈನ್ ಕರ್ನಾಟಕ ಆಶ್ರಯದಲ್ಲಿ ವೆನ್ಲಾಕ್ ರಕ್ತ ನಿಧಿ‌ ಸಹಯೋಗದೊಂದಿಗೆ ಕೊಲ್ನಾಡ್ ಮಹಿಳಾ ಸಮುದಾಯ ಭವನದಲ್ಲಿ ರವಿವಾರ ನಡೆಯಿತು.

ಸಫ್ವಾನ್ ಕೊಲ್ನಾಡ್ ಅವರು ತನ್ನ 25ನೇ ವಯಸ್ಸಿನಲ್ಲಿ ದುಬೈಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು.

ಶರೀಫ್‌ ದಾರಿಮಿ ಅಲ್ ಹೈತಾಮಿ (ಖತೀಬರು ಶಾಫಿ ಜುಮಾ ಮಸೀದಿ ಕೊಲ್ನಾಡ್) ಇವರ ದುಆ ಮತ್ತು ಆಶೀರ್ವಚನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಬಿ ಎಸ್ (ವೃತ್ತ ನಿರೀಕ್ಷಕರು ಮುಲ್ಕಿ ಪೊಲೀಸ್ ಠಾಣೆ) ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಆಯಿಷಾ ಸುಹಾನ (ಕಣ್ಣಿನ ತಜ್ಞರು, ಶ್ರೀನಿವಾಸ ಹಾಸ್ಪಿಟಲ್, ಮುಕ್ಕ) ರಕ್ತದಾನದ ಮಹತ್ವದ ಬಗ್ಗೆ ಮಾತನಾಡುತ್ತ ಒಂದು ಬಾಟಲಿ ರಕ್ತ ಮೂರು ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದೆ. ರಕ್ತದಾನ ಮಾಡುವುದರಿಂದ ಮಾನಸಿಕ ನೆಮ್ಮದಿಯ ಜತೆ ಆರೋಗ್ಯವು ಸುಧಾರಿಸುತ್ತದೆ. ರಕ್ತದಾನ ಮಾಡುವ ಜನರು ಹೃದಯಾಘಾತ ಮತ್ತು ಕ್ಯಾನ್ಸ‌ರ್ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ. ರಕ್ತದಾನ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕಬ್ಬಿಣದ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ಯಾರೆಲ್ಲಾ ರಕ್ತದಾನ ಮಾಡಬಹುದು ಹಾಗು ರಕ್ತದಾನ ಮಾಡಿದ ನಂತರ ವಿಶ್ರಾಂತಿಯ ಅಗತ್ಯತೆ ಮತ್ತು ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಡಾ. ಆಯಿಶಾ ಸುಹಾನ ಅವರು ಮರ್ಹೂಂ ಸಫ್ವಾನ್ ರವರ ಸ್ಮರಣಾರ್ಥ ಕಣ್ಣಿನ ಶಸ್ತ್ರಚಿಕಿತ್ಸೆ ಅಗತ್ಯವಿರುವ 5 ಮಂದಿ ಬಡ ರೋಗಿಗಳಿಗೆ ತಾನು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತೇನೆ ಎಂಬ ಆಶ್ವಾಸನೆ ನೀಡಿದರು. ಇವರು ಇಂತಹ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ನೌಶಾದ್ ಹಾಜಿ ಸುರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ) ಹಾಗು ಇನ್ನಿತರ NGO ಗಳ ಜೊತೆ ಸೇರಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ.


ಕೊಲ್ನಾಡ್ ಫ್ರೆಂಡ್ಸ್ ಕೊಲ್ನಾಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇದು ಎರಡನೇ ಅವೃತಿಯ ರಕ್ತದಾನ ಶಿಬಿರ ನಡೆದಿದ್ದು, 62 ಬಾಟಲಿ ರಕ್ತವನ್ನು ಸಂಗ್ರಹಿಸಲಾಯಿತು. ಇದರಲ್ಲಿ 52 ಪುರುಷರು ಹಾಗು 10 ಮಹಿಳಾ ರಕ್ತದಾನಿಗಳು ರಕ್ತವನ್ನು ನೀಡಿರುತ್ತಾರೆ. ಮಾತ್ರವಲ್ಲದೆ ಈ ಸಂಸ್ಥೆಯು ಹಾಸ್ಪಿಟಲ್ ವೆಚ್ಚ ಭರಿಸಲು ಸಾಧ್ಯವಾಗದ ರೋಗಿಗಳಿಗೆ ಆಸ್ಪತ್ರೆಯ ವೆಚ್ಚ ಭರಿಸುವುದು, ಡಯಾಲಿಸಿಸ್‌ ಅಗತ್ಯವಿರುವ ಬಡ ರೋಗಿಗಳಿಗೆ ಹಣಕಾಸಿನ ವ್ಯವಸ್ಥೆ ಮಾಡುವುದು ಹಾಗು ವಿದ್ಯಾಭ್ಯಾಸಕ್ಕೂ ನೆರವು ನೀಡಿ ಬಡವರ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸಂಸ್ಥೆಯು ಈ ಕಾರ್ಯಕ್ರಮದಲ್ಲಿ ಮಂಜುನಾಥ ಬಿ ಎಸ್ ಹಾಗು ಡಾ. ಆಯಿಷಾ ಸುಹಾನ ಇವರಿಗೆ ಸನ್ಮಾನವನ್ನು ಮಾಡಲಾಯಿತು. ಯಾಸಿರ್ ಅರಾಫತ್ ಕಾರ್ಯಕ್ರಮ ನಿರೂಪಿಸಿದರು. ಅಬ್ಬಾಸ್ ಅಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News