×
Ad

ಬಿಜೆಪಿಗರಿಂದ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ: ಐವನ್ ಡಿಸೋಜ ಆರೋಪ

Update: 2025-06-10 18:03 IST

ಮಂಗಳೂರು: ಬಿಜೆಪಿಯ ರಾಜ್ಯ ಮುಖಂಡರು ದ.ಕ.ಜಿಲ್ಲೆಯ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೊಜ ಆರೋಪಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಪಕ್ಷ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರ ಸಹಿತ ಹಲವು ಮುಖಂಡರು ಸೋಮವಾರ ದ.ಕ.ಜಿಲ್ಲೆಗೆ ಆಗಮಿಸಿ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ದಾಟಿಯಲ್ಲಿ ಮಾತನಾಡಿದ್ದಾರೆ. ಕಾನೂನು ಪ್ರಕಾರ ಕಾರ್ಯಾಚರಿಸಲು ಪೊಲೀಸರಿಗೆ ಅವಕಾಶ ಕಲ್ಪಿಸುವ ಬದಲು ಬೆದರಿಕೆ ದಾಟಿಯಲ್ಲಿ ಮಾತನಾಡಿರವುದು ಸರಿಯಲ್ಲ. ರಾಜ್ಯದಲ್ಲಿ ಸರಕಾರ ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ. ಪೊಲೀಸ್ ಇಲಾಖೆ ಅವರ ಕೆಲಸ ಮಾಡುತ್ತಾರೆ. ತಮಗೆ ಬೇಕಾದ ಹಾಗೆ ಮಾಡಿಲ್ಲ ಅಂತ ಬಿಜೆಪಿಗರು ತಕರಾರು ತೆಗೆಯುವುದರಲ್ಲಿ ಅರ್ಥವಿಲ್ಲ ಎಂದರು.

ಪೊಲೀಸರು ಕಾನೂನು ಮೀರಿ ಕೆಲಸ ಮಾಡಿದ್ದರೆ ಅದಕ್ಕೆ ಸರಕಾರ, ಕಾನೂನು, ನ್ಯಾಯಾಲಯವಿದೆ. ಪೊಲೀಸರು ಸುಮ್ಮನಾದರೆ ಏನೂ ಮಾಡಿಲ್ಲ ಎಂದು ಆರೋಪಿಸುವ ಬಿಜೆಪಿಗರು, ಪೊಲೀಸರು ತಮ್ಮ ಕೆಲಸ ಮಾಡಿದರೆ ಆಕ್ಷೇಪಿಸುತ್ತಾರೆ. ಬಿಜೆಪಿಗರ ಉದ್ದೇಶವಾದರೂ ಏನು? ಜಿಲ್ಲೆ ಸದಾ ಅಶಾಂತಿಯಿಂದ ಕೂಡಿರಬೇಕೇ? ಅಭಿವೃದ್ಧಿಯು ಬಿಜೆಪಿಗೆ ಬೇಡವೇ? ಪೊಲೀಸ್ ಇಲಾಖೆಯಿಂದ ತಪ್ಪು ಆಗಿರುವುದಾದರೂ ಏನು? ಯಾರ ಮೇಲೆ ಸುಳ್ಳು ಕೇಸು ಹಾಕಲಾಗಿದೆ ಎಂಬುದನ್ನಾದರೂ ತಿಳಿಸಲಿ ಎಂದು ಸವಾಲು ಹಾಕಿದ ಐವನ್ ಡಿಸೋಜ, ಪೊಲೀಸ್ ಇಲಾಖೆಯ ಕರ್ತವ್ಯಕ್ಕೆ ಚ್ಯುತಿತರುವ ಬಿಜೆಪಿ ಮುಖಂಡರ ಮೇಲೆ ರಾಜ್ಯ ಸರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

*ಪ್ರವೀಣ್ ನೆಟ್ಟಾರು ಬಳಿಕ ಯಾವೆಲ್ಲಾ ಕೊಲೆಗಳಾಗಿವೆಯೋ ಅದನ್ನೆಲ್ಲಾ ಎನ್‌ಐಎಗೆ ವಹಿಸಲು ಸಂಸದರು ಆಸಕ್ತಿ ವಹಿಸಲಿ. ಅದು ಬಿಟ್ಟು ಕೇವಲ ಸುಹಾಸ್ ಶೆಟ್ಟಿಯ ಕೊಲೆ ಪ್ರಕರಣವನ್ನು ಮಾತ್ರ ಯಾಕೆ ಎನ್‌ಐಎಗೆ ವಹಿಸಿರುವುದು? ಹೀಗೆ ತಾರತಮ್ಯ ಮಾಡುವುದು ಎಷ್ಟು ಸರಿ ಎಂದು ಐವನ್ ಡಿಸೋಜ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಾಗೇಂದ್ರ ಕುಮಾರ್, ಅಮೃತ್ ಕದ್ರಿ, ಸುಹಾನ್ ಆಳ್ವಾ, ದಿನೇಶ್ ಮುಳೂರು, ಭಾಸ್ಕರ್ ರಾವ್, ಪ್ರೇಮ್ ಬಲ್ಲಾಳ್‌ಬಾಗ್, ಜೇಮ್ಸ್ ಶಿವಬಾಗ್, ಸತೀಶ್ ಪೆಂಗಲ್, ಮನುರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News