×
Ad

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ | ಬ್ಯಾರಿ ಮುಸ್ಲಿಮರು ಜಾತಿ ಮುಸ್ಲಿಂ, ಉಪಜಾತಿ ಬ್ಯಾರಿ ಎಂದು ನಮೂದಿಸಿ : ದ‌.ಕ.ಜಿಲ್ಲಾ ಖಾಝಿ‌

Update: 2025-09-25 15:51 IST

ಮಂಗಳೂರು, ಸೆ.25: ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಮತ್ತು ಕೇಂದ್ರ ಜುಮಾ ಮಸೀದಿ ಝೀನತ್ ಭಕ್ಷ್‌ನ ಅಧ್ಯಕ್ಷ ಹಾಜಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞಿ ನೇತೃತ್ವದಲ್ಲಿ ಜಿಲ್ಲಾ ಮಸೀದಿಗಳ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮುಸ್ಲಿಂ ಮುಂದಾಳುಗಳ ಸಮ್ಮುಖ ನಡೆದ ಸಭೆಯಲ್ಲಿ ತೀರ್ಮಾನಿಸಿದಂತೆ ಬ್ಯಾರಿ ಮುಸ್ಲಿಮರು ಜಾತಿ ಮುಸ್ಲಿಂ ಮತ್ತು ಉಪಜಾತಿ ಬ್ಯಾರಿ ಎಂದು ನಮೂದಿಸಲು ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

ಸೆ.17ರಂದು ಸ್ಪೀಕರ್ ಯು.ಟಿ. ಖಾದರ್ ಸಹಿತ ನಡೆದ ಪ್ರಮುಖರ ಸಭೆಯಲ್ಲಿ ಜಾತಿ ಗಣತಿಯ ವಿಷಯದಲ್ಲಿ ಸ್ಪಷ್ಟ ನಿಲುವು ಕೈಗೊಳ್ಳಲಾಗಿದೆ. ಇದು ಧರ್ಮಾಧಾರಿತ ಜಾತಿ ಗಣತಿ ಅಲ್ಲ. ವೃತ್ತಿ ಆಧಾರಿತ ಜಾತಿ ಗಣತಿ ಎಂದು ನಿರ್ಧರಿಸಲಾಗಿದೆ. ಹಾಗಾಗಿ ಮುಸ್ಲಿಮರು ಧರ್ಮ ಇಸ್ಲಾಂ, ಜಾತಿ ಮುಸ್ಲಿಂ, ಉಪಜಾತಿ ಬ್ಯಾರಿ ಎಂದು ನಮೂದಿಸಬೇಕು ಎಂದು ಸೂಚಿಸಿದ್ದಾರೆ.

ಉಡುಪಿ ಸಂಯುಕ್ತ ಖಾಝಿ ಮಾಣಿ ಉಸ್ತಾದ್ ಸೂಚನೆ

ಮಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯ ವೇಳೆ ಮುಸ್ಲಿಮರು ವೃತ್ತಿ ಆಧಾರಿತ ವರ್ಗ/ಪಂಗಡ ನಮೂದಿಸಲು ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕದ ಅಧ್ಯಕ್ಷ, ಉಡುಪಿ ಸಂಯುಕ್ತ ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಸೂಚನೆ ನೀಡಿದ್ದಾರೆ.

ಸಮೀಕ್ಷೆಗೆ ಸಂಬಂಧಿಸಿದಂತೆ ಸಮುದಾಯದಲ್ಲಿ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟನೆ ನೀಡಿರುವ ಖಾಝಿ ಮಾಣಿ ಉಸ್ತಾದ್, ಮುಸ್ಲಿಮರಲ್ಲಿ ಜಾತಿ, ಉಪಜಾತಿಗಳಿಲ್ಲ. ಆದರೂ ವೃತ್ತಿ ಆಧಾರಿತ ವರ್ಗಗಳನ್ನು ಗುರುತಿಸು ವುದು ಮೀಸಲಾತಿ ಸವಲತ್ತು ಪಡೆಯಲು ಅಗತ್ಯವಾಗಿದೆ. ಸರಕಾರವು ವೃತ್ತಿ ಆಧಾರಿತವಾಗಿ ಸಮುದಾಯ ಗಳಲ್ಲಿರುವ ಅನೇಕ ವರ್ಗ/ಪಂಗಡಗಳನ್ನು ಗುರುತಿಸಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವ ರನ್ನು ಅಭಿವೃದ್ಧಿಯತ್ತ ತರಲು ಮೀಸಲಾತಿ ನೀಡುತ್ತದೆ. ಪ್ರಸಕ್ತ ನಡೆಯುತ್ತಿರುವ ಜಾತಿ ಗಣತಿಯೂ ಈ ಉದ್ದೇಶ ವನ್ನು ಹೊಂದಿದೆ. ಹಾಗಾಗಿ ಗಣತಿಯ ವೇಳೆ ಮುಸ್ಲಿಂ ಸಮುದಾಯವು ವೃತ್ತಿ ಆಧಾರಿತ ವರ್ಗ/ಪಂಗಡದ ಹೆಸರನ್ನು (ಉದಾ: ಬ್ಯಾರಿ, ಕೊಡವ, ಕಸಬ್, ಕಸಾಯಿ) ಉಪಜಾತಿ ಕಾಲಂನಲ್ಲಿ ನಮೂದಿಸಬಹುದು. ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಇದು ಸುಲಭವಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಂತಹ ಯಾವುದೇ ವರ್ಗ/ಪಂಗಡಗಳಿಗೆ ಸೇರದವರು ಆ ಕಾಲಮನ್ನು ಖಾಲಿ ಬಿಡಬಹುದು. ಈ ಕುರಿತು ಸಮಗ್ರ ಮಾಹಿತಿಯನ್ನು ಪಡೆಯಲಾಗಿದ್ದು, ಯಾವುದೇ ರೀತಿಯ ಗೊಂದಲಪಡಬೇಕಾಗಿಲ್ಲ ಎಂದು ಖಾಝಿ ಎಂ.ಅಬ್ದುಲ್ ಹಮೀದ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News