×
Ad

ರಾಜ್ಯದಲ್ಲಿ 2,000 ಕೆಪಿಎಸ್ ಶಾಲೆಗಳ ಪ್ರಾರಂಭಿಸುವ ಚಿಂತನೆ: ಸಚಿವ ಮಧು ಬಂಗಾರಪ್ಪ

Update: 2023-09-24 18:45 IST

ಮಂಗಳೂರು, ಸೆ.24: ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಪರಿಣಾಮಕಾರಿ ಬದಲಾವಣೆಯ ತರುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದ್ದು, ಎಲ್‌ಕೆ-ಯುಕೆಜಿಯಿಂದ 12ನೇ ಕ್ಲಾಸ್ ತನಕ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶವಿರುವ 2,000 ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮುಂದಿನ ವರ್ಷ 500 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುವ ಯೋಜನೆ ಇದೆ. ಪ್ರತಿಯೊಂದು ವಿಧಾನ ಸಭಾ ಕ್ಷೇತ್ರಕ್ಕೆ 3 ಶಾಲೆಗಳು ದೊರೆಯಲಿದೆ. ಸುಮಾರು 1,500 ಮಕ್ಕಳಿಗೆ ಸೇರ್ಪಡೆಗೆ ಅವಕಾಶವಿರುವ ಇಂತಹ ಶಾಲೆಗಳನ್ನು ಮೂರು ಗ್ರಾಮಗಳಿಗೆ ಒಂದರಂತೆ ಪ್ರಾರಂಭಿಸಲಾಗುವುದು. ಬಡವರ ಮಕ್ಕಳಿಗೆ ಈ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಖಾಲಿ ಇರುವ ಶಿಕ್ಷಕರ 53 ಸಾವಿರ ಹುದ್ದೆಗಳನ್ನು ಮುಂದೆ ಭರ್ತಿ ಮಾಡಲಾಗುವುದು. ಈಗ 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಪರ್ಮನೆಂಟ್ ಶಿಕ್ಷಕರನ್ನು ಕೊಟ್ಟಾಗ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.

ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುವುದು. ಎರಡು ವರ್ಷದಿಂದ ಎನ್‌ಇಪಿ ಜಾರಿ ಆಗಿದೆ. ಮುಂದೆ ಮಕ್ಕಳಿಗೆ ತೊಂದರೆ ಆಗದಂತೆ ಎಸ್‌ಇಪಿ ಜಾರಿಗೊಳಿಸಲಾಗುವುದು . ಮಕ್ಕಳಿಗೆ ಬ್ಯಾಗ್ ಹೊರೆ ಕಮ್ಮಿ ಮಾಡಬೇಕು. ಹೊರೆಯನ್ನು ಅರ್ಧ ಇಲ್ಲದಿದ್ದರೆ ಒನ್ ಥರ್ಡ್ ಕಮ್ಮಿ ಮಾಡುವ ಉದ್ದೇಶವಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತದೆ.

*ಮೂರು ಬಾರಿ ಪರೀಕ್ಷೆ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಮೂರು ಪರೀಕ್ಷೆಗಳನ್ನು ನಡೆಸುವ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದಾಗಿ ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಈ ವರ್ಷದಿಂದ ಸಪ್ಲಿಮೆಂಟರಿ ಅಂತ ಇಲ್ಲ. ಮೂರು ಬಾರಿ ಮಂಡಳಿ ಎಕ್ಸಾಂ. ಒಮ್ಮೆ ಫೈಲಾದವರು ಅದೇ ವರ್ಷ ಪರೀಕ್ಷೆ ಬರೆದು ಪಾಸಾಗಿ ಕಾಲೇಜಿಗೆ ಹೋಗಬಹುದು. ಮಕ್ಕಳ ಬೆಳವಣಿಗೆಗೆ ಇದು ಪೂರಕವಾಗಲಿದೆ. ಈಗಾಗಲೇ ಪಿಯುಸಿಯಲ್ಲಿ ಎರಡನೇ ಬಾರಿ ಪರೀಕ್ಷೆ ಬರೆದ 1.20 ಲಕ್ಷ ವಿದ್ಯಾರ್ಥಿಗಳ ಪೈಕಿ 42 ಸಾವಿರ ಮಕ್ಕಳು ಪಾಸಾಗಿ ಕಾಲೇಜು ಸೇರಿದ್ದಾರೆ. ಅದೇ ರೀತಿ ಎಸೆಸೆಲ್ಸಿಗೂ ಮೂರು ಪರೀಕ್ಷೆಗಳನ್ನು ನಡೆಸಲಾಗುವುದು ಎಂದರು.

ಮಧುವಿಗೆ ಕಷ್ಟದ ಖಾತೆ ಕೊಡಲು ಡಿಕೆಶಿ ಹೇಳಿದ್ದರು: ಸರಕಾರ ರಚನೆಯಾದಾಗ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರೆ ಖಾತೆ ಕೊಡುವ ಬಗ್ಗೆ ಯೋಚಿಸಿದ್ದರು. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ಮಧುವಿಗೆ ಕಷ್ಟದ ಖಾತೆ ಕೊಡಿ. ಅವರು ಚೆನ್ನಾಗಿ ಕೆಲಸವನ್ನು ನಿಭಾಯಿಸುತ್ತಾರೆ ’ಎಂದು ಸಿಎಂಗೆ ಸಲಹೆ ನೀಡಿದ್ದರು. ಬೇಕಿದ್ದರೆ ನೀವು ಡಿಕೆಶಿ ಇಲ್ಲಿ ಬಂದಾಗ ಅವರಲ್ಲಿ ಕೇಳಿ. ಹೀಗಾಗಿ ನನಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವನಾಗುವ ಅವಕಾಶ ಸಿಕ್ಕಿತು. ನನಗೆ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದೇನೆ. ಸಿಎಂ-ಡಿಸಿಎಂ ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಿರುವೆನು. 130 ದಿನಗಳಲ್ಲಿ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಮಾಡಿರುವೆನು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು 130 ದಿನ ಆಗ್ತಾ ಬಂತು. ಈ ಅವಧಿಯಲ್ಲಿ ಸರಕಾರ ಒಳ್ಳೆಯ ಕೆಲಸ ಮಾಡುತ್ತಾ ಇದೆ. ವಿಶೇಷವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಸರಕಾರ ರಚನೆಯಾಗುತ್ತಲೇ ವಿಪಕ್ಷದವರು ಗ್ಯಾರಂಟಿ ಬಗ್ಗೆ ಟೀಕಿಸಿದರು. ನಮಗೆ ಇದರ ಬಗ್ಗೆ ಭಯ ಇತ್ತು. ನಾವು ಚುನಾವಣಾ ಪೂರ್ವದಲ್ಲಿ ಮತದಾರರಿಗೆ ನೀಡಿದ್ದ ಗ್ಯಾರೆಂಟಿ ಯೋಜನೆಗಳು ಬೇಗ ಜಾರಿ ಆಗುತ್ತಾ ಇಲ್ಲವೋ ಎನ್ನುವ ಬಗ್ಗೆ. ಆದರೆ ನಮ್ಮ ಕಾರ್ಯಕ್ರಮಗಳಿಂದಲೇ ವಿರೋಧಿಗಳಿಗೆ ನಾವು ಉತ್ತರ ನೀಡಿದ್ದೇವೆ. ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷ ಆಗಿದ್ದ ನನಗೆ ಬಹಳ ಹೆಮ್ಮೆ ಇದೆ. ಸರಕಾರ ನುಡಿದಂತೆ ನಡೆದಿದೆ ಎಂದರು.

ಕಾಂಗ್ರೆಸ್ ಬಡವರಿಗೆ ಹಿಂದಿನಿಂದಲೂ ಒಳ್ಳೆಯ ಕಾರ್ಯಕ್ರಮ ಕೊಡುತ್ತಾ ಬಂದಿದೆ. ಕಾಂಗ್ರೆಸ್ ನೀಡಿರುವ ಜನಪರ ಯೋಜನೆಗಳನ್ನು ಜನರು ಎಂದೆಂದಿಗೂ ನೆನಪಿಸುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು ,ನನ್ನ ಅಪ್ಪಾಜಿ ಎಸ್ ಬಂಗಾರಪ್ಪ , ಹಿಂದೆ ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದ ಸಿದ್ದರಾಮಯ್ಯ ಮಾಡಿರುವ ಜನಪರ ಕೆಲಸಗಳನ್ನು ಜನರು ಸದಾ ನೆನಪಿನಲ್ಲಿಟ್ಟುಕೊಂಡಿದ್ದಾರೆ.

ನನ್ನನ್ನು ರಾಜ್ಯದಲ್ಲಿ ಜನರು ಗುರುತಿಸುವಂತಾಗಿದ್ದರೆ ಮತ್ತು ಇವತ್ತು ಕೂಡಾ ಮಂಗಳೂರು ಸೇರಿದಂತೆ ಎಲ್ಲ ಕಡೆ ಜನರು ಮಧುವನ್ನು ಪ್ರೀತಿಯಿಂದ ಕಾಣುವಂತಾಗಿದ್ದರೆ ಅದಕ್ಕೆ ತಂದೆ ಎಸ್.ಬಂಗಾರಪ್ಪ ಅವರು ಕಾರಣರಾಗಿದ್ದಾರೆ. ಬಂಗಾರಪ್ಪರ ಮಗ ಎಂಬ ಕಾರಣಕ್ಕಾಗಿ ನನಗೆ ಗೌರವ, ಸ್ಥಾನಮಾನ ಸಿಕ್ಕಿದೆ. ಅವರು ಮುಖ್ಯ ಮಂತ್ರಿಯಾಗಿ ಕೇವಲ ಎರಡು ವರ್ಷ ಇದ್ದರು. ಬಂಗಾರಪ್ಪ 30 ವರ್ಷಗಳ ಹಿಂದೆ ಜಾರಿಗೆ ತಂದಿರುವ ಆಶ್ರಯ, ಆರಾಧನಾ, ಕೃಷಿಗೆ ಉಚಿತ ವಿದ್ಯುತ್ ಮತ್ತಿತರ ಕಾರ್ಯಕ್ರಮಗಳನ್ನು ಜನರು ಮರೆತಿಲ್ಲ. ಕಾಂಗ್ರೆಸ್ ಜನರ ಬದುಕಿಗೆ ಅನುಕೂಲವಾಗಿರುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿತ್ತು. ಅದೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಡವರ ಜೀವನಕ್ಕೆ ಸಹಕಾರಿಯಾದ ಕಾರ್ಯಕ್ರಮಗಳನ್ನು ಕೊಟ್ಟರು. ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಒತ್ತು, ಉಚಿತ ವಿದ್ಯುತ್ ಮತ್ತಿತರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮನೆಮನೆಯಲ್ಲಿ ಕಾಂಗ್ರೆಸ್‌ನ ಯೋಜನೆಗಳು ಉಪಯೋಗಕ್ಕೆ ಬರುತ್ತಿದೆ. ಸರ್ವ ಜನಾಂಗದ ಶಾಂತಿತೋಟ ಆಗಿದ್ದ ರಾಜ್ಯವನ್ನು ಬಿಜೆಪಿಯವರು ಸಂಪೂರ್ಣ ಹಾಳು ಮಾಡಿದರು. ಈಗ ಜನರಿಗೆ ನೀಡಿದ ಭರವಸೆಯಂತೆ ನಾವು ಕರ್ನಾಟಕವನ್ನು ಐದು ವರ್ಷಗಳಲ್ಲಿ ಶಾಂತಿಯ ತೋಟವಾಗಿ ರೂಪಿಸುತ್ತೇವೆ ಎಂದು ನುಡಿದರು.

*ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ನ ಗೆಲುವು ಖಚಿತ: ದಕ್ಷಿಣ ಕನ್ನಡದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿ ವರದಿ ನೀಡಲು ತಮಗೆ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ದ.ಕ.ದಲ್ಲಿ ಕಾಂಗ್ರೆಸ್‌ನ ಗೆಲುವನ್ನು ಚಾಲೆಂಜ್ ಆಗಿ ತೆಗೆದುಕೊಳ್ಳುತ್ತೇವೆ. 2004ರ ಹಿಂದಿನ ಸ್ಥಿತಿ ಬಂದೇ ಬರಲಿದೆ. ರಾಜ್ಯದಲ್ಲೂ ಕಾಂಗ್ರೆಸ್‌ನ ಜನಪರ ಕೆಲಸಗಳು ಪಕ್ಷದ ಗೆಲುವಿಗೆ ನೆರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅತೃಪ್ತಿಗೊಂಡಿರುವ ರಾಜ್ಯದ ಹಲವು ಮಂದಿ ಜೆಡಿಎಸ್ ಧುರೀಣರು ನನ್ನನ್ನು ಸಂಪರ್ಕಿಸಿದ್ದಾರೆ ಎಂದು ಮಧು ಬಂಗಾರಪ್ಪ ಎಂದು ಮಾಹಿತಿ ನೀಡಿದರು.

*ಪ್ರಣವಾನಂದರ ಬ್ಯಾಕ್‌ಗ್ರೌಂಡ್ ಕೆದಕಿ ನೋಡಿ: ಪ್ರಣವಾನಂದ ಸ್ವಾಮೀಜಿಯವರು ಅವರು ಈಡಿಗ ಸಮುದಾಯದ ಸ್ವಾಮಿ ಅಲ್ಲ. ಅವರ ಬ್ಯಾಕ್ ಗ್ರೌಂಡ್ ಸ್ವಲ್ಪ ಕೆದಕಿ ನೋಡಿ ಆಗ ಅವರು ಯಾರೆಂದು ಗೊತ್ತಾಗುತ್ತದೆ. ಹಿಂದುಳಿದ ವರ್ಗದವರ ಬಗ್ಗೆ ಕಾಳಜಿ ಇರುವವರು ಅವರೊಬ್ಬರೇ ಅಲ್ಲ, ಬೇರೆ ಹಲವು ಮಂದಿ ಇದ್ದಾರೆ. ಪ್ರಣವಾನಂದ ಸ್ವಾಮಿಜಿ ಬಗ್ಗೆ ಯಾಕೆ ಹೆಚ್ಚು ಪ್ರಚಾರ ನೀಡುತ್ತೀರಿ ? ನಾನು ಅವರನ್ನು ಲೆಕ್ಕಕ್ಕೇ ತಗೊಂಡಿಲ್ಲ. ನಾನು ಯಾವುದೇ ಸ್ವಾಮೀಜಿಯನ್ನು ಮುಂದಿಟ್ಕೊಂಡು ಮತ ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ರಾಜ್ಯ ಸಭಾ ಸದಸ್ಯ ಬಿ.ಇಬ್ರಾಹಿಂ, ಮಾಜಿ ಸಚಿವ ಅಭಯ ಚಂದ್ರ ಜೈನ್,ಮಾಜಿ ಶಾಸಕ ಜೆ ಆರ್ ಲೋಬೊ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿ ಸೋಜ ,ಪಕ್ಷದ ಧುರೀಣರಾದ ಇಬ್ರಾಹಿಂ ಕೊಡಿಜಾಲ್, ಇನಾಯತ್ ಅಲಿ, ಶಶಿಧರ್ ಹೆಗ್ಡೆ, ಜೋಕಿಮ್ ಡಿ ಸೋಜ, ಜೆ ಅಬ್ದುಲ್ ಸಲೀಂ, ಡಾ. ರಾಜಾರಾಮ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಕೃಪಾ ಅಮರ್ ಆಳ್ವಾ, ಅಶ್ವನಿ ಕುಮಾರ್ ರೈ, ಪದ್ಮರಾಜ್.ಆರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News