ಹೊನ್ನಾಳಿ | ಬಾಯ್ಲರ್ ಸ್ಫೋಟ; ಬಾಲಕಿ ಮೃತ್ಯು, ಮೂವರಿಗೆ ಗಂಭೀರ ಗಾಯ
ಸಾಂದರ್ಭಿಕ ಚಿತ್ರ | PC : freepik
ಹೊನ್ನಾಳಿ : ಮನೆಯಲ್ಲಿದ್ದ ಬಾಯ್ಲರ್ ಸ್ಫೋಟಗೊಂಡು ಬಾಲಕಿ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಳಿ ನಡೆದಿದೆ.
ದುರ್ಗಿಗುಡಿ ಬಡಾವಣೆಯಲ್ಲಿ ವಾಸವಾಗಿದ್ದ ಹೊವಾನಾಯ್ಕ್ ಅವರ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಬಾಯ್ಲರ್ ಸ್ಫೋಟಗೊಂಡು ಮೂವರಿಗೆ ಗಾಯಗಳಾಗಿದ್ದು, ಬಾಲಕಿ ಸ್ವೀಕೃತಿ (11) ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಹೊವಾನಾಯ್ಕ್ ಬೆನಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ನಿರೀಕ್ಷರಾಗಿದ್ದದು, ದುರ್ಗಿಗುಡಿ ಉತ್ತರ ಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಹೊವಾನಾಯ್ಕ್ ಅವರ ಮಗಳು ಸ್ವೀಕೃತಿ ಮಂಗಳವಾರ ಬೆಳಗ್ಗೆ ಸ್ನಾನ ಮಾಡಲು ಹೋದಾಗ ಬಾಯ್ಲರ್ ಬ್ಲಾಸ್ಟ್ ಆಗಿ ಸ್ವೀಕೃತಿಗೆ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ಮನೆಯಲ್ಲೇ ಇದ್ದ ತಂದೆ ಹೊವಾನಾಯ್ಕ್, ತಾಯಿ ಸುನೀತಾ ಬಾಯಿ ಹಾಗೂ ಅಜ್ಜಿ ತಿರ್ಥಿಬಾಯಿ ಅವರು ಬೆಂಕಿ ನಂದಿಸಿದರು. ಆದರೆ, ಎಲ್ಲರಿಗೂ ಬೆಂಕಿ ತಗುಲಿ ಸುಟ್ಟಗಾಯಗಳಾಗಿದ್ದವು.
ಕೂಡಲೇ ಸ್ಥಳೀಯರು ನಾಲ್ಕು ಜನರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಬುಧವಾರ ಬೆಳಗ್ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸ್ವೀಕೃತಿ ಮೃತಪಟ್ಟಿದ್ದಾರೆ. ಉಳಿದ ಮೂವರೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.