×
Ad

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ದಿಲ್ಲಿಯಲ್ಲಿ ಹೋರಾಟ; ರಾಷ್ಟ್ರೀಯ ಬಸವ ದಳದ ದಾವಣಗೆರೆ ಜಿಲ್ಲಾ ಸಮ್ಮೇಳನದಲ್ಲಿ ನಿರ್ಣಯ

Update: 2025-11-02 19:30 IST

ದಾವಣಗೆರೆ : ಲಿಂಗಾಯತ ಮಠಾಧೀಶರನ್ನು ನಿಂದಿಸಿರುವ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಶಾಸಕರು, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸುವುದು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ರಾಷ್ಟ್ರೀಯ ಬಸವ ದಳದ ದಾವಣಗೆರೆ ಜಿಲ್ಲಾ ಸಮ್ಮೇಳನ ನಿರ್ಣಯ ಕೈಗೊಂಡಿದೆ.

ರವಿವಾರ ಸರಸ್ವತಿ ಬಡಾವಣೆಯಲ್ಲಿರುವ ಬಸವ ಮಂಟಪದಲ್ಲಿ ನಡೆದ ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಮ್ಮೇಳನದಲ್ಲಿ ಈ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ ದಿಲ್ಲಿಯಲ್ಲಿ ರ್ಯಾಲಿ ನಡೆಸುವುದು, ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಮಾನ್ಯತೆ ನೀಡಬೇಕು, ತಾಲೂಕು, ಹೋಬಳಿ ಕೇಂದ್ರಗಳಲ್ಲಿಯೂ ವಚನ ಸಾಹಿತ್ಯ ಪ್ರಚುರಪಡಿಸಬೇಕು, ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗೆ ಶಿಫಾರಸು ಮಾಡಿದ ನಿವೃತ್ತ ನ್ಯಾ.ನಾಗಮೋಹನ್ ದಾಸ್ ವರದಿ ಮರು ಪರಿಶೀಲಿಸಬೇಕು ಎಂದು ಸಮ್ಮೇಳನ ಒಕ್ಕೊರಲಿನಿಂದ ಆಗ್ರಹಿಸಿದೆ.

ಇದಕ್ಕೂ ಮುನ್ನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಬಸವ ಪರಂಪರೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ, ಎಲ್ಲರೂ ಒಂದೇ ಎಂದು ತಿಳಿದು ಪಾದಯಾತ್ರೆ ಮತ್ತು ಅಭಿಯಾನದಲ್ಲಿ ಭಾಗವಹಿಸಿದ್ದೆವು ಎನ್ನುವುದು ಹೆಮ್ಮೆ ತರುವ ವಿಷಯ. ಕೆಲವೇ ಕೆಲವು ವ್ಯಕ್ತಿಗಳಿಂದ ಇದು ಖಂಡಿತ ನಾಶ ಆಗಲ್ಲ. ಯಾರು ಕೆಟ್ಟ ಶಬ್ದಗಳನ್ನು ಬಳಸಿದರೋ ಅವರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಹಾಗಾಗಿ ಬಸವಣ್ಣನನ್ನು ಯಾರು ವಿರೋಧಿಸುತ್ತಾರೋ ಅವರಿಗೆ ಶಿಕ್ಷೆ ಇದೆ. ಎಂತಹ ಸಂದರ್ಭ ಬಂದರೂ ನಮ್ಮ ತತ್ವ, ಸಿದ್ಧಾಂತ, ತಾತ್ವಿಕ ವಿಚಾರಗಳಿಂದ ದೂರ ಉಳಿಯದೆ ನಮ್ಮ ನಿಲುವಿಗೆ ಬದ್ಧರಾಗಿರಬೇಕು ಎಂದು ಕರೆ ನೀಡಿದರು

ಬಸವಣ್ಣನವರ ಭಕ್ತರೇ ಬೇರೆ, ಅನುಯಾಯಿಗಳೇ ಬೇರೆ, ಅಭಿಮಾನಿಗಳೇ ಬೇರೆ. ಆದರೆ, ಎಲ್ಲರೂ ಬಸವ ತತ್ವ, ಧರ್ಮದ ಬಗ್ಗೆ ಪ್ರಚಾರ ಮಾಡುವವರೇ. ಅವರಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಒಟ್ಟಿನಲ್ಲಿ ಹೇಳುವುದಾದರೆ ಯಾರೇ ಆಗಲಿ, ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕುವ ಕೆಲಸ ಮಾಡಬಾರದು. ಬಸವ ಧರ್ಮದ ಮಠಾಧೀಶರು ರಾಜ್ಯಾದ್ಯಂತ ಪ್ರವಾಸ ಮಾಡಿ ಬಸವ ತತ್ವದ ಸಂದೇಶಗಳನ್ನು ಸಾರುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕೆಲವರು ನಮ್ಮ ಮಠಾಧೀಶರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಹೇಳುತ್ತಿದ್ದಾರೆ. ಇವನ್ನೆಲ್ಲಾ ಹಿಮ್ಮೆಟ್ಟಿಸುವ ಉದ್ದೇಶದಿಂದ ನಾವೆಲ್ಲರೂ ಒಂದಾಗಬೇಕಿದೆ. ಆದ್ದರಿಂದ ನಮ್ಮಲ್ಲಿನ ಭಿನ್ನ, ಭೇದ, ಭಾವಗಳನ್ನು ತೊರೆದು ಒಂದಾಗಿ ನಮ್ಮ ಶಕ್ತಿ ತೋರಿಸಬೇಕಾಗಿದೆ. ಲಿಂಗಾಯತ ಧರ್ಮದ ಬಗ್ಗೆ ನಮ್ಮವರಿಂದಲೇ ಇಲ್ಲ ಸಲ್ಲದ ಮಾತುಗಳು ಕೇಳಿ ಬರುತ್ತಿವೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇನ್ನಾದರೂ ನಾವು ಒಟ್ಟಾಗಿ ಸಾಗಿ ಹೊಸ ಅಧ್ಯಾಯ, ಹೊಸ ಇತಿಹಾಸ ಬರೆಯಬೇಕಾಗಿದೆ ಎಂದು ಗುರುಬಸವ ಸ್ವಾಮೀಜಿ ಹೇಳಿದರು.

ರಾಷ್ಟ್ರೀಯ ಬಸವದಳ ಜಿಲ್ಲಾ ಸಮಿತಿಯ ಅಧ್ಯಕ್ಷ ವೈ.ನರೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೂಡಲ ಸಂಗಮದ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಸಾನಿಧ್ಯ ವಹಿಸಿದ್ದರು. ಸದ್ಗುರು ಬಸವ ಯೋಗಿ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಲಿಂಗಾಯತ ಗಣನಾಯಕ ಕೆ.ವೀರಣ್ಣ ಧ್ವಜಾರೋಹಣ ನೆರವೇರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಚಂದ್ರಮೌಳಿ ವಿಷಯ ಮಂಡಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷ ಕೆ.ವಿವೇಕ್, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಶಿವಕುಮಾರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಪರಮೇಶಪ್ಪ, ಮಮತಾ ನಾಗರಾಜ್, ಕುಸುಮಾ ಲೋಕೇಶ್, ಎ.ಚಂದ್ರಶೇಖರ್, ರವೀಂದ್ರನಾಥ್, ಷಣ್ಮುಖಯ್ಯ, ವೀಣಾ ಮಂಜುನಾಥ್, ವನಜ ಮಹಾಲಿಂಗಪ್ಪ, ಪಲ್ಲವಿ, ಮಂಜುನಾಥ್ ಮೇಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News