ನಾಲ್ವಡಿ ಮಹಾರಾಜರೊಂದಿಗೆ ಸಿದ್ದರಾಮಯ್ಯನವರ ಹೋಲಿಕೆ ಕೆಲಸದ ವಿಚಾರವಾಗಿಯೇ ವಿನಃ ವ್ಯಕ್ತಿಗತವಲ್ಲ: ಎಚ್.ಸಿ.ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ
ದಾವಣಗೆರೆ : ಸಿದ್ದರಾಮಯ್ಯ ಅವರ ಜೊತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೋಲಿಕೆ ಕೇವಲ ಕೆಲಸದ ವಿಚಾರವಾಗಿದೆಯೇ ವಿನಃ ವ್ಯಕ್ತಿಗತವಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಜನ ಪರವಾಗಿ ಸಾಮಾಜಿಕ ನ್ಯಾಯದ ಪರವಾಗಿ ಮಹತ್ವದ ಸಮ ಸಮಾಜವನ್ನು ನಿರ್ಮಾಣ ಮಾಡಿದವರು. ಯಾರನ್ನೂ ಒಬ್ಬ ವ್ಯಕ್ತಿಯ ಜೊತೆಗೆ ಹೋಲಿಕೆ ಮಾಡಲು ಸರಿಯಲ್ಲ. ಅವರು ಅವರಿಗೆ ಸಾಟಿ. ಸಿದ್ದರಾಮಯ್ಯ ಅವರ ಜೊತೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೋಲಿಕೆ ಕೆಲಸದ ವಿಚಾರವಾಗಿದೆಯೇ ವಿನಃ ವ್ಯಕ್ತಿಗತವಲ್ಲ ಎಂದು ಪುನರುಚ್ಛರಿಸಿದರು.
ಸುರ್ಜೇವಾಲ್ ಅವರು ಸೂಪರ್ ಸಿಎಂ ರೀತಿ ವರ್ತನೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಮಾಲೆ ಕಣ್ಣಿಂದ ನೋಡಿದ್ದೆಲ್ಲ ಹಳದಿ, ಅದೇ ರೀತಿ ಬಿಜೆಪಿ ನಾಯಕರು. ಕಾಂಗ್ರೆಸ್ ಪಕ್ಷ ಸರಕಾರದ ಕೆಲಸಗಳಲ್ಲಿ ಎಂದು ಕೂಡ ತಲೆ ಹಾಕಿಲ್ಲ. ಉಸ್ತುವಾರಿಗಳು ಬಂದು ಸಚಿವರನ್ನು ಹಾಗೂ ಶಾಸಕರನ್ನು ವಿಮರ್ಶೆ ಮಾಡಿದ ಉದಾಹರಣೆ ಇಲ್ಲ ಎಂದರು.