ಹೊನ್ನಾಳಿ | ದಲಿತಳೆಂಬ ಕಾರಣಕ್ಕೆ ಸದಸ್ಯರಿಂದ ಅಸಹಕಾರ : ಬೆನಕನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಗಣೇಶ್ ಆರೋಪ
ಹೊನ್ನಾಳಿ : ತಾಲೂಕಿನ ಬೆನಕನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿರುವ ರೇಷ್ಮಾ ಗಣೇಶ್ ದಲಿತ ಮಹಿಳೆಯಾಗಿದ್ದಾರೆ ಎಂಬ ಏಕೈಕ ಕಾರಣಕ್ಕೆ ಗ್ರಾಪಂ ಅಭಿವೃದ್ಧಿ ಕೆಲಸಗಳಿಗೆ ಸಹೋದ್ಯೋಗಿ ಸದಸ್ಯರು ಕೈಜೋಡಿಸದೆ ಹಿಂದೆ ಸರಿಯುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಮೇ 29ರಂದು ಬೆನಕನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ರೇಷ್ಮಾ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಇವರ ಅಧ್ಯಕ್ಷತೆಯಲ್ಲಿ ಮೂರು ಸಾಮಾನ್ಯ ಸಭೆ ನಡೆದರೂ ಸದಸ್ಯರು ಸಭೆಗೆ ಹಾಜರಾಗದೆ ಗೈರಾಗಿದ್ದಾರೆ. ಕೋರಂ ಕೊರತೆಯಿಂದ ಸಭೆಗಳನ್ನು ಮುಂದೂಡುತ್ತಲೇ ಬರಲಾಗಿದೆ. ಮಾತ್ರವಲ್ಲ, ರೇಷ್ಮಾ ಗಣೇಶ್ ಅಧಿಕಾರ ವಹಿಸಿಕೊಂಡು ಎರಡು ತಿಂಗಳಾದರೂ ಈವರೆಗೂ ಯಾವುದೇ ಗ್ರಾಪಂ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ದಲಿತ ಮಹಿಳೆ ಎಂಬ ಕಾರಣಕ್ಕೆ ಸದಸ್ಯರು ಕೈಜೋಡಿಸುತ್ತಿಲ್ಲ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಬೇಕೆಂಬ ಆಸೆ ಇತ್ತು. ಅಧ್ಯಕ್ಷರಾಗಿ ನನ್ನ ಜನರಿಗೆ ಹಾಗೂ ಗ್ರಾಮಕ್ಕೆ ಏನಾದರೂ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎನ್ನುವ ಸದುದ್ದೇಶ ಇಟ್ಟುಕೊಂಡಿದ್ದೆ. ಈಗ ಅದು ಲಭಿಸಿದೆ. ಆದರೆ ಸದಸ್ಯರ ಅಸಹಕಾರದಿಂದ ನನಗೆ ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ಗ್ರಾಪಂ ಅಧ್ಯಕ್ಷೆ ರೇಷ್ಮಾ ಗಣೇಶ್ ಹೇಳಿದ್ದಾರೆ.
ನಾನು ದಲಿತಳೆಂಬ ಕಾರಣಕ್ಕೆ ಉಳಿದವರು ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ನನ್ನ ಪತಿ ಗ್ರಾಮ ಪಂಚಾಯತ್‌ನಲ್ಲಿ ನೀರುಗಂಟಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಸಹ ಸದಸ್ಯರಿಗೆ ಕೀಳರಿಮೆಯಾಗಿದೆ. ನನ್ನ ಆಯ್ಕೆ ಮಾಡಿದ ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ನನ್ನನ್ನು ಕಾಡುತ್ತಿದೆ.
ರೇಷ್ಮಾ ಗಣೇಶ್, ಗ್ರಾಪಂ ಅಧ್ಯಕ್ಷೆ, ಬೆನಕನಹಳ್ಳಿ
ಗ್ರಾಪಂ ಸದಸ್ಯರು ಸಭೆಗೆ ಸ್ವಯಂ ಪ್ರೇರಣೆಯಿಂದ ಬರಬೇಕು. ತಮ್ಮ ಗ್ರಾಮದ ಅಭಿವೃದ್ಧಿಗಾಗಿ ಚರ್ಚಿಸಲು ಹಲವಾರು ಕಾಮಗಾರಿ, ಮೂಲಭೂತ ಸೌಕರ್ಯಗಳನ್ನು ಕ್ರಿಯಾ ಯೋಜನೆ ಮೂಲಕ ಕಲ್ಪಿಸಲು ಸಾಮಾನ್ಯ ಸಭೆಗಳು ಮಹತ್ವ ಪಡೆದುಕೊಳ್ಳುತ್ತವೆ. ಆದರೆ ಸದಸ್ಯರು ಗೈರಾಗುತ್ತಿರುವುದರಿಂದ ಅವರನ್ನು ಆಯ್ಕೆ ಮಾಡಿದ ಜನಕ್ಕೆ ಮೋಸ ಮಾಡಿದಂತಾಗುತ್ತದೆ.
ಪ್ರಕಾಶ್, ತಾಪಂ ಇಒ, ಹೊನ್ನಾಳಿ
ಸಭೆ ಕರೆಯಲು ಸೂಚನೆ
ಬೆನಕನಹಳ್ಳಿ ಗ್ರಾಪಂನಲ್ಲಿ ಮೂರು ಬಾರಿ ಸಾಮಾನ್ಯ ಸಭೆ ನಡೆದರೂ ಕೋರಂ ಕಡಿಮೆ ಇದ್ದು ಸದಸ್ಯರು ಗೈರಾಗಿದ್ದಾರೆ. 15 ಜನ ಸದಸ್ಯರಲ್ಲಿ ಕನಿಷ್ಠ ಎಂಟು ಜನರು ಇರಲೇಬೇಕು. ಇಲ್ಲವಾದರೆ ಸಭೆ ನಡೆಯುವುದಿಲ್ಲ. ನಾಲ್ಕನೇ ಬಾರಿಯೂ ಸಾಮಾನ್ಯ ಸಭೆಗೆ ಬಾರದಿದ್ದರೆ ಕೆಪಿಆರ್ ಆಕ್ಟ್ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು. ಗ್ರಾಮ ಅಭಿವೃದ್ಧಿ ಅಧಿಕಾರಿ ಮೂಲಕ ಸದಸ್ಯರಿಗೆ ನಾಲ್ಕನೇ ಬಾರಿ ಸಾಮಾನ್ಯ ಸಭೆ ಕರೆಯಲು ನೋಟಿಸ್ ನೀಡುವಂತೆ ನಿರ್ದೇಶನ ನೀಡಲಾಗುವುದು ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್‌ರಾವ್ ತಿಳಿಸಿದ್ದಾರೆ.