ಹುಬ್ಬಳ್ಳಿ: ಹಿರಿಯ ಸಿತಾರ್ ವಾದಕ ಪಂ. ಶ್ರೀನಿವಾಸ ಜೋಶಿ ಇನ್ನಿಲ್ಲ
ಹುಬ್ಬಳ್ಳಿ: ಖ್ಯಾತ ಸಿತಾರ್ ಕಲಾವಿದ ಮತ್ತು ಹಿಂದೂಸ್ತಾನಿ ಸಂಗೀತಜ್ಞ ಪಂಡಿತ್ ಶ್ರೀನಿವಾಸ ಜೋಶಿ (74) ಬುಧವಾರ ನಸುಕಿನ ಜಾವ ನಿಧನರಾಗಿದ್ದಾರೆ.
ಹುಬ್ಬಳ್ಳಿಯ ಗೋಕುಲ್ ರೋಡ್ ವೆಂಕಟೇಶ್ವರ ಕಾಲನಿಯಲ್ಲಿ ನೆಲೆಸಿದ್ದ ಪಂಡಿತ್ ಶ್ರೀನಿವಾಸ ಜೋಶಿಯವರು ಪತ್ನಿ ರಾಧಾ, ಸಿತಾರ್ ವಾದಕರಾದ ಪುತ್ರ ನಿಖಿಲ್ ಜೋಶಿ, ಗಾಯಕಿಯಾಗಿರುವ ಪುತ್ರಿ ಮೇಘಾ ಪ್ರಶಾಂತ್ ದೀಕ್ಷಿತ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶ್ರೀನಿವಾಸ ಜೋಶಿಯವರು ಹಿಂದೂಸ್ತಾನಿ ಸಿತಾರ್ ವಾದನದಲ್ಲಿ ಕರ್ನಾಟಕದ ಅತ್ಯಂತ ಶ್ರೇಷ್ಠ ದರ್ಜೆಯ ಕಲಾವಿದರಾಗಿದ್ದರು. `ಧಾರವಾಡ ಘರಾಣೆ'ಯ ಖ್ಯಾತ ಸಿತಾರ್ ವಾದಕರಾಗಿದ್ದ ದಿ. ಉಸ್ತಾದ್ ಬಾಲೇಖಾನ್ ಅವರ ಶಿಷ್ಯರಾಗಿದ್ದ ಜೋಶಿ, ಸಮಗ್ರ ಹಿಂದೂಸ್ತಾನಿ ಸಂಗೀತ ಜ್ಞಾನ ಪ್ರಕಾರದ ತಜ್ಞರಾಗಿದ್ದರು. ಸರಳ. ಸಜ್ಜನಿಕೆಯ ಕಲಾವಿದರಾಗಿ ಹುಬ್ಬಳ್ಳಿ-ಧಾರವಾಡ ಸಂಗೀತ ಪರಂಪರೆಯ ಮಾರ್ಗದರ್ಶಿ ಶಕ್ತಿಗಳಲ್ಲಿ ಒಬ್ಬರಾಗಿದ್ದ ಅವರು, ಪ್ರಚಾರ, ಪ್ರಶಸ್ತಿ ಹಾಗೂ ಸನ್ಮಾನಗಳಿಂದ ಸಂಪೂರ್ಣ ದೂರವಿದ್ದರು.
ಉತ್ತರ ಕರ್ನಾಟಕ ಹವ್ಯಾಸಿ ರಂಗಭೂಮಿಯಲ್ಲೂ ಸಕ್ರಿಯವಾಗಿದ್ದ ಜೋಶಿ, ಗಿರೀಶ್ ಕಾರ್ನಾಡರ ಹಯವದನ, ಮೃಚ್ಛುಕಟಿಕ ಸೇರಿದಂತೆ ಹಲವಾರು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿ ಗಮನ ಸೆಳೆದಿದ್ದರು. ಭಾವಗೀತೆ, ಜಾನಪದ ಹಾಗೂ ಭಕ್ತಿಗೀತೆಗಳ ಸಂಯೋಜನೆಯಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದರು.