×
Ad

ಗೋಡ್ಸೆ ವಂಶಸ್ಥರಿಂದ ಗಾಂಧಿ ವಿಚಾರಧಾರೆಗಳ ಹತ್ಯೆ : ರಣದೀಪ್ ಸಿಂಗ್ ಸುರ್ಜೇವಾಲ

Update: 2025-01-18 21:11 IST

ರಣದೀಪ್ ಸಿಂಗ್ ಸುರ್ಜೇವಾಲ (Photo: X/@rssurjewala)

ಧಾರವಾಡ: ಗೋಡ್ಸೆ ವಂಶಸ್ಥರು ನಿರಂತರವಾಗಿ ಗಾಂಧಿ ಅವರ ವಿಚಾರಧಾರೆಗಳನ್ನು ಹತ್ತಿಕ್ಕುತ್ತಲೇ ಬಂದಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಧಾರವಾಡದಲ್ಲಿ ಪಕ್ಷದ ನಾಯಕರೊಂದಿಗೆ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶದ ಪೂರ್ವಭಾವಿ ಸಭೆ ನಡೆಸಿದ ನಂತರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಗಾಂಧಿ ಅವರ ಹತ್ಯೆಯಾದಾಗ ಅದು ಕೇವಲ ಅವರ ದೇಹದ ಹತ್ಯೆ ಮಾತ್ರವಲ್ಲ. ಗಾಂಧಿ ಅವರ ವಿಚಾರಧಾರೆಯ ಹತ್ಯೆಯಾಗಿದೆ. ಭಾರತದ ಸಂಸ್ಕೃತಿ ಹಾಗೂ ಸಂವಿಧಾನದ ವಿಚಾರವಾಗಿ ಇಂದಿಗೂ ಆ ಹೋರಾಟ ಮುಂದುವರಿಯುತ್ತಿದೆ. ಗೋಡ್ಸೆ, ಹಿಂಸೆ, ವಿಭಜನೆ ವಿಚಾರಧಾರೆ ಹಾಗೂ ಪ್ರೀತಿ, ಸೌಹಾರ್ದತೆಯ ವಿಚಾರ ನಡುವೆ ಸಂಘರ್ಷ ನಡೆಯುತ್ತಿದೆ ಎಂದು ಅವರು ಹೇಳಿದರು.

ಬಿಜೆಪಿಯವರು ಬೇಧ ಭಾವ ಮಾಡುತ್ತಾರೆ. ನಾವು ಎಲ್ಲರನ್ನು ಸಮನಾಗಿ ಕಾಣುತ್ತೇವೆ. ಬಿಜೆಪಿ ದಲಿತ, ಶೋಷಿತ, ಆದಿವಾಸಿ, ಬಡವರು, ಮಹಿಳೆಯರು, ಯುವಕರ ಮೇಲೆ ದೌರ್ಜನ್ಯ ನಡೆಸಿದರೆ ನಾವು ಈ ವರ್ಗದವರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದೇವೆ. ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದರೆ, ನಾವು ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ಸಮಾನತೆ ನೀಡುತ್ತಿದ್ದೇವೆ ಎಂದು ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.

ಬಿಜೆಪಿಯವರು ಶ್ರೀಮಂತರಿಗೆ ನೆರವು ನೀಡಿದರೆ, ನಾವು ಬಡತನದ ವಿರುದ್ಧ ಹೋರಾಟ ಮಾಡಿ ಎಲ್ಲರಿಗೂ ಸಮಾನ ಅವಕಾಶ ನೀಡುವ ಪ್ರಯತ್ನ ಮಾಡುತ್ತೇವೆ. ಇದೇ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ವ್ಯತ್ಯಾಸ. ಬೆಳಗಾವಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ‘ಹೊಸ ಇತಿಹಾಸ ನಿರ್ಮಿಸುವಷ್ಟು ಜನ ಬರುತ್ತಾರೆ’ ಎಂದು ಅವರು ಹೇಳಿದರು.

ದಿಲ್ಲಿಯಲ್ಲಿ ಉತ್ತಮ ಆಡಳಿತ ನೀಡುವುದು ಕಾಂಗ್ರೆಸ್ ಗುರಿ: ಇಂಡಿಯಾ ಮೈತ್ರಿಕೂಟದಿಂದ ಕಾಂಗ್ರೆಸ್ ಅನ್ನು ಹೊರಗಿಡುವ ಯತ್ನದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರ್ಜೆವಾಲಾ, ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹೋರಾಟ ಮಾಡುತ್ತಿವೆ. ದಿಲ್ಲಿಯಲ್ಲಿ ಕಾಂಗ್ರೆಸ್ ಪಕ್ಷ ಶೀಲಾ ದೀಕ್ಷಿತ್ ಅವರ ನೇತೃತ್ವದಲ್ಲಿ 15 ವರ್ಷಗಳ ಕಾಲ ಅತ್ಯುತ್ತಮ ಆಡಳಿತ ನೀಡಿತ್ತು. ದಿಲ್ಲಿಯಲ್ಲಿ ಸಾಧನೆ ಮಾಡಿದ್ದರೆ ಅದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಂದು ತಿಳಿಸಿದರು.

ಆನಂತರ ದಿಲ್ಲಿ ವಾಯು ಮಾಲೀನ್ಯ, ಕೊಳೆಗೇರಿ ಸೇರಿದಂತೆ ಅನೇಕ ಸಮಸ್ಯೆಗಳಿಂದ ತತ್ತರಿಸಿದೆ. ದೇಶದ ಎಲ್ಲ ಭಾಗಗಳಿಂದ ದಿಲ್ಲಿಗೆ ಹೋಗುವ ಜನ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಅನಿವಾರ್ಯತೆ ಎದುರಾಗಿದೆ. ದಿಲ್ಲಿಯಲ್ಲಿ ಉಸಿರಾಡುವುದು ಕಷ್ಟವಾಗಿದೆ. ಇದಕ್ಕೆ ಮೋದಿ ಸರಕಾರ ಹಾಗೂ ಆಪ್ ಸರಕಾರ ಪಾಲುದಾರರಾಗಿದ್ದು, ದಿಲ್ಲಿಯ ಸಮಸ್ಯೆಗೆ ಕಾಂಗ್ರೆಸ್ ಪರಿಹಾರವಾಗಿದೆ ಎಂದು ಸುರ್ಜೇವಾಲ ಹೇಳಿದರು.

ಪಕ್ಷದ ಮುಂದಾಳತ್ವ ತೀರ್ಮಾನ ಹೈಕಮಾಂಡ್ ನದ್ದು:

ರಾಜ್ಯ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಆರಂಭವಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಮುಂದಾಳತ್ವವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದನ್ನು ಹೈಕಮಾಂಡ್ ನಾಯಕರು ತೀರ್ಮಾನ ನೀಡುತ್ತಾರೆ. ಈ ಬಗ್ಗೆ ನಿನ್ನೆ ಮಲ್ಲಿಕಾರ್ಜುನ ಖರ್ಗೆ ಎಲ್ಲರೂ ಬೇರೆ ಕೆಲಸ ಮಾಡುವುದನ್ನು ಬಿಟ್ಟು ತಮಗೆ ನೀಡಲಾಗಿರುವ ಕೆಲಸ ಮಾತ್ರ ಮಾಡಿ ಎಂದು ಸ್ಪಷ್ಟವಾಗಿ ತೀಳಿಸಿದ್ದಾರೆ. ಇದು ಎಲ್ಲರ ರಾಜಕೀಯ ಭವಿಷ್ಯಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದು ತಿಳಿಸಿದರು.

ಜಾತಿ ಗಣತಿ ಯಾವ ಜಾತಿಯ ವಿರುದ್ಧವಲ್ಲ:

ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯ ಇರಬೇಕು ಎಂದು ಹೇಳಿದೆ. ಬಿಜೆಪಿ ಸಾಮಾಜಿಕ ನ್ಯಾಯ ಎಂಬ ಶಬ್ಧವನ್ನೇ ಸಂವಿಧಾನದಿಂದ ತೆಗೆದುಹಾಕಬೇಕು ಎಂದು ಹೇಳುತ್ತಿದೆ. ಜಾತಿ ಗಣತಿಯು ಯಾವುದೇ ಜಾತಿಯ ವಿರುದ್ಧವಲ್ಲ. ಜಾತಿಗಣತಿಯು ಸಮಾಜದಲ್ಲಿ ಅಸಮಾನತೆಗೆ ಒಳಗಾಗಿರುವ ಸಮುದಾಯಗಳನ್ನು ಸರಕಾರದ ಅನುದಾನದ ಮೂಲಕ ಮೇಲೆತ್ತಲು ನೆರವಾಗುವ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಆರೋಪದಲ್ಲಿ ಆಧಾರವಿಲ್ಲ:

ಜಾರಿ ನಿರ್ದೇಶನಾಲಯವು ಮುಡಾ ಪ್ರಕರಣದಲ್ಲಿ 300 ಕೋಟಿ ರೂ.ಗಳಷ್ಟು ಆಸ್ತಿ ಜಪ್ತಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರ್ಜೆವಾಲಾ, ಮೋದಿ ಸರಕಾರ ಹಾಗೂ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ನಡೆಯುತ್ತಿರುವ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶಕ್ಕೆ ಬೆದರಿದ್ದಾರೆ. ಹೀಗಾಗಿ ಇಂತಹ ಕೆಲಸಕ್ಕೆ ಮುಂದಾಗಿದ್ದಾರೆ. ಇವರ ಆರೋಪಗಳಿಗೆ ಯಾವುದೇ ಆಧಾರವಿಲ್ಲ, ಅಸ್ಥಿತ್ವವೂ ಇಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿ ಇತಿಹಾಸವೇ ದ್ವೇಷದ ರಾಜಕಾರಣ. ದ್ವೇಷ ಸಾಧಿಸುವುದೇ ಬಿಜೆಪಿಯ ಗುಣ. ಹೀಗಾಗಿ ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಈ ಹಿಂದೆ ಡಿ.ಕೆ.ಶಿವಕುಮಾರ್ ವಿರುದ್ಧ ಪಿತೂರಿ ನಡೆಸಿದ್ದರು. ರಾಹುಲ್ ಗಾಂಧಿ. ಪ್ರಿಯಾಂಕ್ ಗಾಂಧಿ, ಮನಮೋಹನ್ ಸಿಂಗ್ ವಿರುದ್ಧ ದಿನನಿತ್ಯ ದಾಳಿ ಮಾಡುತ್ತಿದ್ದಾರೆ. ವಿಪಕ್ಷಗಳ ನಾಯಕರ ವಿರುದ್ಧ ನಿರಂತರ ದಾಳಿ ಮಾಡುತ್ತಿದ್ದಾರೆ. ಶೋಷಿತ ಸಮುದಾಯಗಳ ಪರವಾಗಿ ಧ್ವನಿ ಎತ್ತುವ ಎಲ್ಲರ ವಿರುದ್ಧವೂ ಬಿಜೆಪಿಯವರು ದಾಳಿ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News