×
Ad

ರಾಜಕೀಯ ಶಕ್ತಿ ಇದ್ದರೆ ಮಾತ್ರ ವೀರಶೈವ ಲಿಂಗಾಯತರಿಗೆ ಸಂಪೂರ್ಣ ನ್ಯಾಯ ಸಿಗಲು ಸಾಧ್ಯ : ಬೊಮ್ಮಾಯಿ

ಹುಬ್ಬಳ್ಳಿಯಲ್ಲಿ ʼವೀರಶೈವ ಲಿಂಗಾಯತ ಏಕತಾ ಸಮಾವೇಶʼ

Update: 2025-09-19 19:22 IST

ಹುಬ್ಬಳ್ಳಿ, ಸೆ.19 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಫಕೀರ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ವೀರಶೈವ ಲಿಂಗಾಯತ ಏಕತಾ ಸಮಾವೇಶವನ್ನು ಆಯೋಜಿಸಲಾಗಿತ್ತು.

ವಿವಿಧ ಮಠಾಧೀಶರು ದೀಪ ಬೆಳಗಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ವೀರಶೈವ ಲಿಂಗಾಯತ ಸಮಾಜ ಒಗ್ಗಟ್ಟಿಲ್ಲದ ಕಾರಣ ಜನಸಂಖ್ಯೆ ಕಡಿಮೆಯಾಗಿದ್ದು, ರಾಜಕೀಯ ಶಕ್ತಿ ಇದ್ದರೆ ಮಾತ್ರ ನಮಗೆ ಸಂಪೂರ್ಣ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದರು.

ಈಗ ಸಂವಿಧಾನದಲ್ಲಿ ಆರು ಧರ್ಮಗಳಿವೆ. ಅವು ಮಾತ್ರ ಅಂಗೀಕೃತವಾಗುತ್ತವೆ. ಜಾತಿ ಕಾಲಂ ವೀರಶೈವ ಲಿಂಗಾಯತ ಎಂದು ಬರೆಸಬೇಕು. ಉಪ ಪಂಗಡದಲ್ಲಿ ನಿಮ್ಮ ಮೀಸಲಾತಿಗೆ ಅವಕಾಶ ಇರುವಂತೆ ಬರೆಸಬೇಕೆಂದು ನುಡಿದರು.

ನಮ್ಮಲ್ಲಿ ಒಗ್ಗಟ್ಟಿದ್ದರೆ, ನಮ್ಮ ಭಾವನೆಗಳು ಒಂದಾಗಿದ್ದರೆ, ಯಾರೂ ನಮ್ಮನ್ನು ಮುಟ್ಟುವ ಸಾಹಸ ಮಾಡುವುದಿಲ್ಲ. ಶೇ.30 ಇದ್ದವರು ಈಗ ಶೇ.10ಗೆ ಇಳಿದಿದ್ದೇವೆ ಎಂದು ದಿಂಗಾಲೇಶ್ವರ ಶ್ರೀ ಹೇಳಿದ್ದು, ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರುವುದು ಅದಕ್ಕೆ ಕಾರಣ ಎಂದು ಬೊಮ್ಮಾಯಿ ಅಭಿಪ್ರಾಯಿಸಿದರು.

ಧರ್ಮದ ಆಧಾರ ಮುಖ್ಯವಲ್ಲ: ಆರ್ಥಿಕ ಸಾಮಾಜಿಕ ಸಮೀಕ್ಷೆಯಲ್ಲಿ ಯಾವ ಸಮಾಜ ಶೈಕಣಿಕ ಹಾಗೂ ಆರ್ಥಿಕವಾಗಿ ಎಷ್ಟು ಮುಂದಿದೆ?, ಬಡವರನ್ನು ಹೇಗೆ ಸರಿ ಸಮಾನ ಮಾಡಬೇಕು ಎಂದು ಸಮೀಕ್ಷೆ ಮಾಡಲಾಗುತ್ತಿದೆ. ಸಂವಿಧಾನದ ಪ್ರಕಾರ ಆರೇ ಧರ್ಮ ಇವೆ. ಹಿಂದೂ, ಇಸ್ಲಾಮ್, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ, ಇದರ ನಂತರ ಯಾವುದೇ ಧರ್ಮಕ್ಕೆ ಮಾನ್ಯತೆ ಕೊಟ್ಟಿಲ್ಲ. ಪ್ರಜಾಪಭುತ್ವದಲ್ಲಿ ಜನರ ಇಚ್ಚಾಶಕ್ತಿಯೇ ಅಂತಿಮ. ಆ ಆಶಾಭಾವನೆಯಿಂದ ನಾವು ಇರೋಣ. ಆದರೆ, ಇವತ್ತಿನ ಈ ಸಮೀಕ್ಷೆ ಧರ್ಮದ ಆಧಾರದ ಮೇಲೆ ಲೆಕ್ಕಕ್ಕೆ ಬರುವುದಿಲ್ಲ. ನೀವು ಯಾವುದೇ ಧರ್ಮಕ್ಕೆ ಸೇರಿದರೂ ಲೆಕ್ಕಕ್ಕೆ ಬರುವುದಿಲ್ಲ. ನೀವು ಯಾವ ಉಪ ಪಂಗಡಕ್ಕೆ ಸೇರಿದ್ದೀರಿ ಅನ್ನುವುದು ಮುಖ್ಯ. ಅಲ್ಲಿ ನಮ್ಮ ಸಂಖ್ಯೆ ತೋರಿಸುವುದು ಮುಖ್ಯವಾಗಿದೆ ಎಂದರು.

ನಮ್ಮ ಕಾಯಕ ಸಮಾಜಗಳನ್ನು ಒಡೆದು ಹಾಕಿದ್ದಾರೆ. ಕಳೆದ ಬಾರಿ ಆಗಿರುವ ದೋಷಗಳನ್ನು ಸರಿಪಡಿಸಬೇಕಿದೆ. ಜಾತಿಯ ವಿಚಾರದಲ್ಲಿ ವೀರಶೈವ ಲಿಂಗಾಯತ ಎಂದು ಹೇಳಲೇಬೇಕು. ನಿಮ್ಮ ಉಪ ಪಂಗಡಗಳನ್ನು ಹೇಳಿಕೊಳ್ಳಲು ಮಹಾಸಭೆ ಅವಕಾಶ ನೀಡಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರ ನಡೆಸುವ ಗಣತಿ ಜನವರಿಯಲ್ಲಿ ಬರುತ್ತದೆ. ಅದು 23 ವರ್ಷ ಇರುತ್ತದೆ. ಅದಕ್ಕೂ ಮೊದಲು ಅಖಿಲ ಭಾರತ ವೀರಶೈವ ಮಹಾಸಭೆ ಎಲ್ಲ ಉಪ ಪಂಗಡಗಳನ್ನು, ಸ್ವಾಮೀಜಿಗಳನ್ನು ಕರೆದು ಸಭೆ ಮಾಡಿ ಒಂದೇ ತೀರ್ಮಾನ ತೆಗೆದುಕೊಳ್ಳಬೇಕು. ನಾವು ಏನೇ ತೀರ್ಮಾಣ ಮಾಡಿದರೂ ಸಂವಿಧಾನ ಬದ್ಧ, ಕಾನೂನು ಬದ್ಧವಾಗಿರಬೇಕೆಂದು ಬೊಮ್ಮಾಯಿ ಸಲಹೆ ನೀಡಿದರು.

ರಂಭಾಪುರಿ ಶ್ರೀ, ಶ್ರೀಶೈಲ ಜಗದ್ಗುರು, ಕಾಶಿ, ಉಜನಿ ಜಗದ್ಗುರುಗಳು, ಸಿದ್ದಂಗಂಗಾ ಶ್ರೀ ಹಾಗೂ ಮೂರು ಸಾವಿರ ಮಠದ ಶ್ರೀ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಸಮಾವೇಶದಲ್ಲಿ ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್, ಸಚಿವರಾದ ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪುರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ, ನೂರಾರು ಮಠಾಧೀಶರು ಭಾಗಿಯಾಗಿದ್ದರು.

ಅಮಿತ್ ಶಾ ಹೆಸರು ಪ್ರಸ್ತಾವಕ್ಕೆ ಆಕ್ಷೇಪ

ವೀರಶೈವ ಲಿಂಗಾಯತ ಏಕತಾ ಸಮಾವೇಶದಲ್ಲಿ ಗೊಂದಲ ಉಂಟಾಗಿ ವೇದಿಕೆ ಮೇಲೆ ಮಹಾರಾಷ್ಟ್ರ ಶಿವ ಸಂಘಟನೆ ಮುಖಂಡನ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

ಮಹಾರಾಷ್ಟ್ರ ಮುಖಂಡ ಮನೋಹರ ದೊಂಡೆ ತಮ್ಮ ಭಾಷಣದಲ್ಲಿ, ‘ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸುವುದು ಬೇಡ. ವೀರಶೈವ ಲಿಂಗಾಯತ ಎಂದು ಬರೆಸುವಂತೆ ಕರೆಕೊಟ್ಟರು. ಅಲ್ಲದೆ, ಹಿಂದುತ್ವ ಪ್ರತಿಪಾದಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಧರ್ಮವೂ ಬೇರೆ ಎಂದು ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಸವರಾಜ ಬೊಮ್ಮಾಯಿ, ಮಾತನಾಡುವಾಗ ನಮಗೆ ಶಿಷ್ಟಾಚಾರ ಹೇಳಿದ್ದೀರಿ. ಈಗ ಶಿಷ್ಟಚಾರ ಉಲ್ಲಂಘನೆ ಆಗಿದೆ. ನಾವು ಮಾತನಾಡಲು ಆರಂಭಿಸಿದ್ದರೆ ಇದಕ್ಕಿಂತ ಹೆಚ್ಚು ಮಾತನಾಡುತ್ತೇವೆ ಎಂದು ವೇದಿಕೆಯಿಂದ ಮೇಲೆದ್ದು ಆಕ್ರೋಶ ವ್ಯಕ್ತಪಡಿಸಿದರು.

ಬೊಮ್ಮಾಯಿಗೆ ಸಂಸದ ಜಗದೀಶ್ ಶೆಟ್ಟರ್ ಅವರೂ ಧ್ವನಿಗೂಡಿಸಿದರು.

ಈ ವೇಳೆ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಮಹಾಸಭಾ ಕಾರ್ಯಕ್ರಮಕ್ಕೆ ಮೊದಲು ಕೆಲವು ನಿಯಮಾವಳಿ ಹಾಕಿಕೊಂಡಿತ್ತು. ರಾಜಕೀಯ ವ್ಯಕ್ತಿ ಹಾಗೂ ಪಕ್ಷದ ಹೆಸರು ಬಳಸದಂತೆ ಸೂಚಿಸಲಾಗಿತ್ತು. ಆದರೂ ಆಚಾತುರ್ಯದಿಂದ ನಡೆದಿದೆ. ಇದಕ್ಕೆ ನಾವು ವಿಷಾದ ವ್ಯಕ್ತಪಡಿಸುವುದಾಗಿ ಹೇಳಿ ಉಭಯ ನಾಯಕರನ್ನ ಸಮಾಧಾನಪಡಿಸಿದರು.

ಎಲ್ಲರನ್ನೂ ಒಟ್ಟುಗೂಡಿಸಿ ಏಕತಾ ಸಮಾವೇಶ ಮಾಡಿದ್ದು ಐತಿಹಾಸಿಕ. ನಮ್ಮ ಸಮಸ್ಯೆಯನ್ನು ಬದಿಗೊತ್ತಿ ಒಂದಾಗಿ ಹೋಗಬೇಕಿದೆ. ಒಟ್ಟಾಗಿರಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇದು ಶಕ್ತಿ ಪ್ರದರ್ಶನ ಅಲ್ಲ, ಭಕ್ತಿ ಪ್ರದರ್ಶನ. ಈ ರೀತಿಯ ವಾತಾವರಣ ಹೆಚ್ಚುತ್ತಾ ಹೋಗಲಿ.

ಸಿದ್ದಗಂಗಾ ಮಠದ ಸ್ವಾಮೀಜಿ

ಶೆಟ್ಟರ್ ಹೇಳಿಕೆಗೆ ಅತೃಪ್ತಿ :

ಲಿಂಗಾಯತ ಹಿಂದೂ ಧರ್ಮದ ಭಾಗವಾಗಿದೆ ಎಂಬ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆಗೆ ದಿಂಗಾಲೇಶ್ವರ ಶ್ರೀ ಅತೃಪ್ತಿ ವ್ಯಕ್ತಪಡಿಸಿದ ಘಟನೆ ನಡೆಯಿತು.

ಇದು ವೀರಶೈವ ಲಿಂಗಾಯತ ಏಕತಾ ಸಮಾವೇಶ. ಇದಕ್ಕೆ ಬದ್ಧರಾಗಿಯೇ ಮಾತನಾಡಬೇಕು. ಅದನ್ನು ಬಿಟ್ಟು ಬರೆದುಕೊಂಡು ಬಂದಿದ್ದನ್ನು ಓದಿ ಗೊಂದಲ ಮೂಡಿಸದಿರುವಂತೆ ಸಲಹೆ ನೀಡಿದರು.

ಅದ್ದೂರಿ ಮೆರವಣಿಗೆ :

ವೀರಶೈವ ಲಿಂಗಾಯತ ಏಕತಾ ಸಮಾವೇಶದ ಅಂಗವಾಗಿ ರಂಭಾಪುರಿ ಶ್ರೀ, ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ವಿವಿಧ ಮಠಾಧೀಶರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.

ಮೂರುಸಾವಿರ ಮಠದಿಂದ ಆರಂಭವಾದ ಮೆರವಣಿಗೆ ಕೊಪ್ಪಿಕರ್ ರಸ್ತೆ, ಸರ್.ಸಿದ್ದಪ್ಪ ಕಂಬಳಿ ರಸ್ತೆ ಮಾರ್ಗವಾಗಿ ನೆಹರೂ ಕ್ರೀಡಾಂಗಣದಲ್ಲಿನ ಹಾನಗಲ್ಲ ಶ್ರೀ ಕುಮಾರೇಶ್ವರ ಮಹಾ ಮಂಟಪದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ನಾವೆಲ್ಲರೂ ವೀರರೂ ಹೌದು, ಶೂರರೂ ಹೌದು. ಪ್ರತ್ಯೇಕ ಧರ್ಮದ ಹುಟ್ಟು ಹಾಕುವ ಶಕ್ತಿ ನಮಗಿದೆ. ಒಗ್ಗಟ್ಟಿನ ಮಂತ್ರ ಹೇಳದಿದ್ದರೆ ನಮಗೆ ಉಳಿಗಾಲವಿಲ್ಲ. ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭೆ ಕೈಗೊಳ್ಳುವ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ.

ವಿಜಯಾನಂದ ಕಾಶಪ್ಪನವರ , ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News