×
Ad

‘ಜಾತಿ ಗಣತಿ’ ವಿಚಾರದಲ್ಲಿ ಬಿಜೆಪಿ ಯೂಟರ್ನ್ : ಸತೀಶ್ ಜಾರಕಿಹೊಳಿ

Update: 2025-05-04 20:06 IST

 ಸತೀಶ್ ಜಾರಕಿಹೊಳಿ

ಹುಬ್ಬಳ್ಳಿ : ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ಯೂಟರ್ನ್ ಹೊಡೆದಿದೆ. ಜಾತಿ ಗಣತಿ ಬಗ್ಗೆ ಅವರಿಗೆ ಏಕಾಏಕಿ ಪ್ರೀತಿ ಬಂದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜಾತಿ ಗಣತಿ ಮಾಡಿದಾಗ ಬಿಜೆಪಿಯವರು ವಿರೋಧ ಮಾಡಿದರು. ಈಗ ಕೇಂದ್ರ ಸರಕಾರ ಜಾತಿ ಗಣತಿ ಮಾಡುವ ತೀರ್ಮಾನ ಕೈಗೊಂಡಿರುವುದಕ್ಕೆ, ಪ್ರಧಾನಿಗೆ ದೂರದೃಷ್ಟಿಯಿದೆ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಯುದ್ಧ ಮಾಡೋದು ಕೇಂದ್ರಕ್ಕೆ ಬಿಟ್ಟ ವಿಚಾರ: ಪಹಲ್ಗಾಮ್‍ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ಯುದ್ಧ ಮಾಡಬೇಕೋ, ಬೇಡವೋ ಎಂಬುದು ಕೇಂದ್ರ ಸರಕಾರಕ್ಕೆ ಬಿಟ್ಟ ವಿಚಾರ. ಏನು ಮಾಡಬೇಕು ಎಂದು ಅವರೇ ನಿರ್ಧಾರ ಮಾಡಬೇಕು. ಸೂಕ್ತ ಸಮಯದಲ್ಲಿ ಕೇಂದ್ರ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ದೇಶ ಕಾಯಲು 22 ಲಕ್ಷ ಸೈನಿಕರಿದ್ದಾರೆ: ಕೇಂದ್ರ ಸರಕಾರ ಸೂಸೈಡ್ ಬಾಂಬ್ ಕೊಟ್ಟರೆ ನಾನೇ ಪಾಕಿಸ್ತಾನಕ್ಕೆ ಹೋಗಿ ಬಾಂಬ್ ಹಾಕಿ ಬರುತ್ತೇನೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯುದ್ಧ ಮಾಡೋಕೆ ನಾವು ಹೋಗುತ್ತೇವೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಯುದ್ಧ ಮಾಡೋಕೆ ಆಗುವುದಿಲ್ಲ. ನಮ್ಮವರೂ ಹೋಗುವುದಿಲ್ಲ, ಬಿಜೆಪಿಯವರು ಹೋಗುವುದಿಲ್ಲ. ದೇಶ ಕಾಯಲು ನಮ್ಮ 22 ಲಕ್ಷ ಸೈನಿಕರಿದ್ದಾರೆ. ಅವರ ಕೆಲಸವನ್ನು ಅವರು ಮಾಡುತ್ತಾರೆ ಎಂದು ಹೇಳಿದರು.

ಮೃತ ವ್ಯಕ್ತಿಗೆ ಪರಿಹಾರ ಕೊಟ್ಟರೆ ತಪ್ಪೇನು?: ಮಂಗಳೂರಿನಲ್ಲಿ ಮೃತ ವ್ಯಕ್ತಿಗಳಿಗೆ ಪರಿಹಾರ ವಿತರಣೆ ವಿಚಾರದಲ್ಲಿ ಪರಸ್ಪರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಕೆಸರೆರಚಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಮೃತ ವ್ಯಕ್ತಿಗೆ ಪರಿಹಾರ ಕೊಟ್ಟರೆ ತಪ್ಪೇನು?. ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರಗೆ ಬರುತ್ತದೆ ಎಂದು ಹೇಳಿದರು.

ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪೊಲೀಸರಿಗೆ ಈ ಪ್ರಕರಣದಲ್ಲಿ ಮುಕ್ತ ಸ್ವಾತಂತ್ರ್ಯ ಕೊಟ್ಟಿರುವುದರಿಂದಲೇ ಆರೋಪಿಗಳನ್ನು ಅಷ್ಟು ಬೇಗ ಬಂಧಿಸಲು ಸಾಧ್ಯವಾಗಿದ್ದು. ಅಪರಾಧ ಪ್ರಕರಣಗಳಲ್ಲಿ ಸರಕಾರ ಹಿಂದೂ, ಮುಸ್ಲಿಮ್ ಅಂತ ಬೇದಭಾವ ಮಾಡುವುದಿಲ್ಲ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News