×
Ad

ಧಾರವಾಡ | ಮಾಜಿ ಸೈನಿಕನ ಮೇಲೆ ಪೊಲೀಸರಿಂದ ಹಲ್ಲೆ: ಆರೋಪ

Update: 2025-09-29 20:36 IST

ಧಾರವಾಡ, ಸೆ.29: ಮಾಜಿ ಸೈನಿಕನ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಧಾರವಾಡದ ಸಪ್ತಾಪುರದ ಸ್ವಾಮಿ ವಿವೇಕಾನಂದ ಸರ್ಕಲ್ ಬಳಿಯ ಡಾಲ್ಫಿನ್ ಹೊಟೇಲ್ ಪಕ್ಕದಲ್ಲೇ ಇರುವ ಸೈನಿಕ ಮೆಸ್‌ನಲ್ಲಿ ರವಿವಾರ ರಾತ್ರಿ ನಡೆದಿದೆ. ಘಟನೆಯ ವೀಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಹಲ್ಲೆಗೊಳಗಾದ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಎಂದು ಗುರುತಿಸಲಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೆಸ್ ನಡೆಸುತ್ತಿರುವ ನನಗೆ ನಾಲ್ಕೈದು ಪೊಲೀಸರು ಹಾಗೂ ಓರ್ವ ಎಎಸ್ಸೈ ಸೇರಿಕೊಂಡು ಹೆಲ್ಮೆಟ್, ಲಾಠಿ ಸೇರಿದಂತೆ ಇತರ ವಸ್ತುಗಳಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ರಾಮಪ್ಪ ನಿಪ್ಪಾಣಿ ಆರೋಪಿಸಿದ್ದಾರೆ.

‘ರಾತ್ರಿ 11 ಗಂಟೆ ಸುಮಾರಿಗೆ ಮೆಸ್‌ನಲ್ಲಿ ಊಟ ಮಾಡಲು ರಾಮಪ್ಪ ಹಾಗೂ ಇತರರು ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಪೊಲೀಸರು, ಮೆಸ್ ಇನ್ನೂ ಏಕೆ ಬಂದ್ ಮಾಡಿಲ್ಲ ಎಂದು ಏಕಾಏಕಿ ರಾಮಪ್ಪನ ಕೊರಳುಪಟ್ಟಿ ಹಿಡಿದರು. ಮಾತಿಗೆ ಮಾತು ಬೆಳೆದು ಪೊಲೀಸರು ಹೆಲ್ಮೆಟ್, ಬಡಿಗೆಯಿಂದ ಹಲ್ಲೆ ನಡೆಸಿದರಲ್ಲದೆ, ಬೂಟುಗಾಲಿನಿಂದ ಎದೆಗೆ ಒದ್ದರು. ನನಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಬಾರದು ಎಂದು ಕ್ಯಾಮರಾಗಳನ್ನು ಕಿತ್ತೊಗೆದರು. ಅವರು ಮದ್ಯಪಾನ ಮಾಡಿಯೇ ಅಲ್ಲಿಗೆ ಬಂದಿದ್ದರು’ ಎಂದು ರಾಮಪ್ಪ ಅವರ ಪತ್ನಿ ಆರೋಪಿಸಿದ್ದಾರೆ.

‘ಈ ಘಟನೆ ನಡೆದ ಬಳಿಕ ಸ್ಥಳಕ್ಕೆ ಇನ್‌ಸ್ಪೆಕ್ಟರ್ ಅವರೂ ಭೇಟಿ ನೀಡಿದ್ದರು. ಮಾಜಿ ಸೈನಿಕ ರಾಮಪ್ಪ ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಅವರನ್ನು ಆಸ್ಪತ್ರೆಗೆ ದಾಖಲಿಸಲು ಅವಕಾಶ ಕೊಡದ ಪೊಲೀಸರು ಮೆಸ್‌ನಲ್ಲೇ ಇಟ್ಟುಕೊಂಡಿದ್ದರು. ನಂತರ ವಕೀಲರ ಸಹಾಯದಿಂದ ರಾಮಪ್ಪನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ, ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಯಿತು. ಈ ಘಟನೆ ಸಂಬಂಧ ನಾವು ಉಪನಗರ ಠಾಣೆಯಲ್ಲಿ ದೂರನ್ನೂ ನೀಡಿದ್ದೇವೆ’ ಎಂದು ರಾಮಪ್ಪನ ಸಂಬಂಧಿಕರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News