Dharwad | ವಿದ್ಯಾರ್ಥಿ ಕೊಲೆ ಪ್ರಕರಣ; ಮೂವರು ಬಾಲಕರು ವಶಕ್ಕೆ : ಎಸ್ಪಿ ಗುಂಜನ್ ಆರ್ಯ
ಸಾಂದರ್ಭಿಕ ಚಿತ್ರ | PC : freepik
ಧಾರವಾಡ : ಪಟ್ಟಣದ ಬಸ್ ನಿಲ್ದಾಣ ಬಳಿಯ ಟಿಎಪಿಎಂಎಸ್ ಸೊಸೈಟಿ ಮೈದಾನದಲ್ಲಿ ಬುಧವಾರ ನಡೆದ ವಿದ್ಯಾರ್ಥಿ ನಿಂಗರಾಜ ಮಲ್ಲಿಕಾರ್ಜುನ ಅವಾರಿ (16) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಗುರುವಾರ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಸಿನ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದು, ಉಳಿದವರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಕೊಲೆಗೆ ಹಳೇ ದ್ವೇಷ ಹಾಗೂ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳವೇ ಕಾರಣವಾಗಿದೆ. ಇದನ್ನೇ ದೊಡ್ಡದು ಮಾಡಿ ಕೃತ್ಯ ಎಸಗಿದ್ದಾರೆ. ಇದರಲ್ಲಿ ಓರ್ವನಿಗೆ ಗಾಯವೂ ಆಗಿವೆ. ಕೊಲೆಯಾದ ಹುಡುಗ ಮತ್ತು ಕೊಲೆ ಮಾಡಿದ ಎ1 ಆರೋಪಿ ಒಂದೇ ಶಾಲೆಯಲ್ಲಿ ಕಲಿಯುತ್ತಿದ್ದವರು. ಇವರ ಫೋನ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ರೀಲ್ಸ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್ಪಿ ಗುಂಜನ್ ಆರ್ಯ ಮಾಹಿತಿ ನೀಡಿದರು.
ಕುಂದಗೋಳದಲ್ಲಿ ಅಂತ್ಯ ಸಂಸ್ಕಾರ: ಬುಧವಾರ ಹತ್ಯೆಗೀಡಾಗಿದ್ದ ವಿದ್ಯಾರ್ಥಿ ನಿಂಗರಾಜ ಮಲ್ಲಿಕಾರ್ಜುನ ಅವಾರಿಯ ಮರಣೋತ್ತರ ಪರೀಕ್ಷೆಯನ್ನು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ನಡೆಸಿ, ಪೋಷಕರಿಗೆ ಗುರುವಾರ ಹಸ್ತಾಂತರಿಸಲಾಯಿತು. ಬಳಿಕ ಕುಂದಗೋಳ ಪಟ್ಟಣದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
"ನಿನ್ನೆ ನಮ್ಮ ಮಗ ಶಾಲೆಗೆ ಹೋದವನು ಮರಳಿ ಬರಲಿಲ್ಲ. ಸಂಜೆ 5 ಗಂಟೆಗೆ ನಮ್ಮ ಮಗ ಇನ್ನೂ ಮನೆಗೆ ಬಂದಿಲ್ಲ ಎಂದು ಶಾಲೆಗೆ ಫೋನ್ ಮಾಡಿ ವಿಚಾರಿಸಿದಾಗ, ಶಾಲೆ ಬಿಟ್ಟಿದೆ, ಆತ ಹೋಗಿದ್ದಾನೆ ಎಂದು ಶಿಕ್ಷಕರು ತಿಳಿಸಿದ್ದರು. ಬಳಿಕ ನಾನು ಶಾಲೆಯ ಬಳಿ ಹುಡುಕಾಡುತ್ತಿದ್ದೆ, ಅಷ್ಟರಲ್ಲಿ ಶಿಕ್ಷಕರು ನನಗೆ ಫೋನ್ ಮಾಡಿ ಸೊಸೈಟಿ ಮೈದಾನದ ಬಳಿ ಬರುವಂತೆ ಹೇಳಿದರು.ಅಲ್ಲಿ ಹೋಗಿ ನೋಡಿದರೆ ನನ್ನ ಮಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತ ಯಾರ ಜೊತೆಗೂ ಜಗಳವಾಡುತ್ತಿರಲಿಲ್ಲ. ನಾಲ್ಕರಿಂದ ಐದು ಜನರು ಸೇರಿ ಮಗನನ್ನು ಕೊಲೆ ಮಾಡಿದ್ದಾರೆ"
-ಮಲ್ಲಿಕಾರ್ಜುನ ಅವಾರಿ, ಮೃತ ವಿದ್ಯಾರ್ಥಿ ತಂದೆ