×
Ad

ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನವರು ಸತೀಶ್ ಜಾರಕಿಹೊಳಿಯನ್ನು ಸಿಎಂ ಮಾಡುವುದಿಲ್ಲ : ಗೋವಿಂದ ಕಾರಜೋಳ

"ದಲಿತ ಮುಖ್ಯಮಂತ್ರಿ ವಿಚಾರ ಕೇವಲ ಚರ್ಚೆಗೆ ಮಾತ್ರ ಸೀಮಿತ"

Update: 2025-10-23 19:06 IST

ಹುಬ್ಬಳ್ಳಿ : ಕಾಂಗ್ರೆಸ್ ನವರು ಯಾವುದೇ ಕಾರಣಕ್ಕೂ ದಲಿತರನ್ನು ಮುಖ್ಯಮಂತ್ರಿ ಮಾಡಲ್ಲ. ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಮಾತ್ರ ಉಪಯೋಗಿಸುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೆ ಕಾರಣಕ್ಕೂ ಕಾಂಗ್ರೆಸ್ ನವರು ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ದಲಿತ ಮುಖ್ಯಮಂತ್ರಿ ವಿಚಾರ ಕೇವಲ ಚರ್ಚೆಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಸರಕಾರದ ಉದ್ದೇಶ ಒಳ ಜಗಳ ಮಾಡಿಸೋದು. ದಿಲ್ಲಿ ನಾಯಕರು ಕಡಲೆ ತಿನ್ನುತ್ತಾ ಕುಳಿತಿರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲು 40 ವರ್ಷ, ಡಾ.ಜಿ.ಪರಮೇಶ್ವರ್ 20 ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಯಾವುದೆ ಪ್ರಯೋಜನವಾಗಿಲ್ಲ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ನಂತರ ಬಹುಕಾಲದ ವರೆಗೆ ಆಡಳಿತ ನಡೆಸಿರುವ ಕಾಂಗ್ರೆಸ್ ಎಂದಿಗೂ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ಕೇವಲ ಅವರ ಮತಗಳನ್ನು ಪಡೆದು ಮೋಸ ಮಾಡುತ್ತಿದೆ. 35 ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಒಳ ಮೀಸಲಾತಿ ಜಾರಿ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಗೋವಿಂದ ಕಾರಜೋಳ ಪ್ರಶ್ನಿಸಿದರು.

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ಆದೇಶ ಮಾಡಿತ್ತು. ಪರಿಶಿಷ್ಟರಲ್ಲಿದ್ದ 5 ಗುಂಪುಗಳನ್ನು 3 ಗುಂಪುಗಳನ್ನಾಗಿ ಮಾಡಿದರು. ಆದರೆ, ಇತ್ತೀಚೆಗೆ ಸುಪ್ರೀಂಕೋರ್ಟ್‍ನಲ್ಲಿ ಪ್ರಕರಣದ ವಿಚಾರಣೆ ನಡೆದಾಗ ರಾಜ್ಯ ಸರಕಾರದಿಂದ ಯಾರೊಬ್ಬರೂ ಕಲಾಪಕ್ಕೆ ಹಾಜರಾಗಲಿಲ್ಲ ಎಂದು ಅವರು ಕಿಡಿಗಾರಿದರು.

ಸಿದ್ದರಾಮಯ್ಯ ನೇತೃತ್ವದ ಸರಕಾರ ಸಾಮಾಜಿಕ ನ್ಯಾಯವನ್ನು ಅನುಷ್ಠಾನ ಮಾಡಲು ತಯಾರಿಲ್ಲ. ಕೇವಲ ಕಣ್ಣು ಒರೆಸುವ, ಬಡವರಿಗೆ ಅನ್ಯಾಯ ಮಾಡುವ ಹಾಗೂ ಸಮಾಜದಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಒಳ ಮೀಸಲಾತಿ ಕಗ್ಗಂಟಾಗಿಯೆ ಇರಬೇಕು ಎಂಬುದು ಅವರ ಉದ್ದೇಶವಾಗಿದೆ ಎಂದು ಗೋವಿಂದ ಕಾರಜೋಳ ದೂರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News