ಇಂದು (ಜೂನ್ 12) ಧಾರವಾಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಧಾರವಾಡ : ಹವಾಮಾನ ಇಲಾಖೆಯು ಧಾರವಾಡ ಜಿಲ್ಲೆಯಲ್ಲಿ ಆರೆಂಜ್ ಅಲೆರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ಧಾರವಾಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪಿಯು ಮತ್ತು ಪದವಿ ಕಾಲೇಜುಗಳಿಗೆ ಜೂನ್ 12ರಂದು ರಜೆ ಘೋಷಿಸಿ ಧಾರವಾಡ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.
ಈ ಕುರಿತು ಇಂದು ಪ್ರಕಟಣೆ ನೀಡಿರುವ ಅವರು, ಇಂದು ಹವಾಮಾನ ಇಲಾಖೆಯಿಂದ ಜಿಲ್ಲೆಗೆ ರೆಡ್ ಅಲರ್ಟ್ ಸೂಚಿಸಲಾಗಿದೆ. ಮಳೆಯೂ ನಿರಂತರವಾಗಿ ಆಗುತ್ತಿರುವುದರಿಂದ ಅನೇಕ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ನಿನ್ನೆ ರಾತ್ರಿ ವ್ಯಾಪಕ ಮಳೆಯಾಗಿದ್ದರಿಂದ, ಎರಡು ಹಳ್ಳದ ಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರವಾಹ ಪರಿಸ್ಥತಿ ಉಂಟಾಗಬಹುದು. ರಾಜ್ಯ ಹವಾಮಾನ ಇಲಾಖೆಯ ವರದಿಯಂತೆ ಮುಂದಿನ 3 ದಿನ ಮಳೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಹಾಗೂ ಬೆಣ್ಣಿ ಹಳ್ಳ ಮತ್ತು ತುಪ್ಪರಿ ಹಳ್ಳದ ಅಚ್ಚು-ಕಟ್ಟು ಪ್ರದೇಶದಲ್ಲಿ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಅವರು ಸೂಚಿಸಿದ್ದಾರೆ.
ಇಂದೂ ಪಿಯುಸಿ ವಾರ್ಷಿಕ ಪರೀಕ್ಷೆ-3 ಜರುಗುತ್ತದೆ: ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ( ಪಿಯುಸಿ ಬೊರ್ಡ್)ಯ ವೇಳಾಪಟ್ಟಿಯಂತೆ ಈಗಾಗಲೇ ಇಂದು ನಿಗಧಿ ಆಗಿರುವ ಪಿಯುಸಿ ವಾರ್ಷಿಕ ಪರೀಕ್ಷೆ-3 ಅನ್ನು ಜರುಗಿಸಲಾಗುತ್ತದೆ. ಈ ಪರೀಕ್ಷೆಯು ಹುಬ್ಬಳ್ಳಿಯ ಮೂರು, ಧಾರವಾಡದ ಮೂರು ಹಾಗೂ ಕುಂದಗೋಳ, ಕಲಘಟಗಿ ಮತ್ತು ಅಣ್ಣಿಗೇರಿ ಪಟ್ಟಣದ ತಲಾ ಒಂದು ಕೇಂದ್ರ ಸೇರಿ ಒಟ್ಟು ಒಂಬತ್ತು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಯಥಾ ಪ್ರಕಾರ ಪರೀಕ್ಷೆ ನಡೆಯಲಿದೆ. ಸಂಭಂದಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಎಲ್ಲ ಇಲಾಖೆ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದು, ಮಳೆ, ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಈ ಕುರಿತು ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ನೀಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.