Hubballi | ಅಪರಿಚಿತ ವಾಹನ ಢಿಕ್ಕಿ: ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ
ಹುಬ್ಬಳ್ಳಿ: ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಮೃತಪಟ್ಟು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕಿರೇಸೂರು ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಹುನಗುಂದ ತಾಲೂಕಿನ ಕೆಲೂರು ಗ್ರಾಮದ ಶರೀಫ್ ಸಾಬ್ ಬಾಬು ಸಾಬ್ ಸೀಮಿಕೇರಿ (35) ಮೃತಪಟ್ಟವರು. ಜೊತೆಗಿದ್ದ ಇದೇ ಗ್ರಾಮದ ದುರಗೇಶ್ ವಡ್ಡರ (30) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶರೀಫ್ ಸಾಬ್ ಬಾಬು ಸಾಬ್ ಸೀಮಿಕೇರಿ ಮತ್ತು ದುರಗೇಶ್ ವಡ್ಡರ ಇಂದು ಮುಂಜಾನೆ 4 ಗಂಟೆಯ ಬಳಿಕ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಿರೆಸೂರು ಗ್ರಾಮದ ಬಳಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಈ ವೇಳೆ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ತೀವ್ರ ಗಾಯಗಳಾಗಿದ್ದ ಶರೀಫ್ ಸಾಬ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಪಘಾತವೆಸಗಿ ಪರಾರಿಯಾದ ವಾಹನ ಮತ್ತು ಚಾಲಕನ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.