×
Ad

ಬಿಪಿಎಲ್ ಪಡಿತರ ಚೀಟಿಗಳ ಪರಿಷ್ಕರಣೆ ಮಾಡಬೇಕಾಗಿದೆ : ಸಚಿವ ಕೆ.ಎಚ್.ಮುನಿಯಪ್ಪ

Update: 2025-07-26 21:52 IST

ಕೆ.ಎಚ್.ಮುನಿಯಪ್ಪ

ಹುಬ್ಬಳ್ಳಿ : ಬಿಪಿಎಲ್ ಕಾರ್ಡು(ಪಡಿತರ ಚೀಟಿ)ಗಳನ್ನು ಪರಿಷ್ಕರಣೆ ಮಾಡಬೇಕಾಗಿದೆ. ಕೇಂದ್ರ ಸರಕಾರವು ಪಡಿತರ ಚೀಟಿಗಳಿಗೆ ಮಿತಿ ಹೇರಿರುವುದರಿಂದ, ರಾಜ್ಯ ಸರಕಾರವು 17 ಲಕ್ಷ ಹೆಚ್ಚುವರಿ ಪಡಿತರ ಚೀಟಿಗಳಿಗೆ ಆಹಾರ ಧಾನ್ಯವನ್ನು ನೀಡುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿಗಳ ಮಿತಿಯನ್ನು ಹೆಚ್ಚಳ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಕೇಂದ್ರ ಸರಕಾರ ರಾಜ್ಯದ 1.04 ಕೋಟಿ ಕಾರ್ಡುಗಳಿಗೆ ಪಡಿತರ ನೀಡುತ್ತಿದೆ. ರಾಜ್ಯ ಸರಕಾರವು ಹೆಚ್ಚುವರಿಯಾಗಿ 17 ಲಕ್ಷ ಕಾರ್ಡುಗಳಿಗೆ ಪಡಿತರ ನೀಡುತ್ತಿದೆ ಎಂದು ಹೇಳಿದರು.

ರಾಜ್ಯದ ಕಾರ್ಡುಗಳಿಗೂ ಕೇಂದ್ರ ಸರಕಾರದ ವತಿಯಿಂದಲೆ ಪಡಿತರ ವಿತರಣೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. 2011ರ ಜನಗಣತಿ ಪ್ರಕಾರ ರಾಜ್ಯದ 4.50 ಕೋಟಿ ಜನ ಬಿಪಿಎಲ್ ನಲ್ಲಿದ್ದಾರೆ ಎಂದು ಮುನಿಯಪ್ಪ ತಿಳಿಸಿದರು.

ಜೋಳ ಖರೀದಿ ಮಾಡಿ ಮೂರು ತಿಂಗಳು ಬಿಟ್ಟರೆ ಹುಸಿ ಬೇಗ ಬರುತ್ತದೆ. ಆದುದರಿಂದ, ಖರೀದಿ ಮಾಡಿದ ಒಂದೆ ತಿಂಗಳಲ್ಲಿ ಹಂಚಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಖರೀದಿ ಸಂದರ್ಭದಲ್ಲಿ ಹಂಚಿಕೆ ಮಾಡಲು ಅವಕಾಶವಿಲ್ಲ. ಈ ನಿಯಮಗಳಿಗೂ ಅಗತ್ಯ ತಿದ್ದುಪಡಿ ತರುವಂತೆಯೂ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರಕಾರದ ಕಾರ್ಡುಗಳಿಗೆ ನೀಡುತ್ತಿರುವ ಅಕ್ಕಿಯನ್ನು ಕೇಂದ್ರ ಸರಕಾರದ ಭಾರತೀಯ ಆಹಾರ ನಿಗಮ(ಎಫ್‍ಸಿಐ)ದಿಂದ ಖರೀದಿ ಮಾಡುತ್ತಿದ್ದೇವೆ. ಅಗತ್ಯವಿರುವಷ್ಟು ಅಕ್ಕಿ ನಮಗೆ ಸಿಗುತ್ತಿದೆ. ಎಲ್ಲಿಯವರೆಗೆ ಅವರು ನಮಗೆ ಅಕ್ಕಿಯನ್ನು ನೀಡುತ್ತಾರೋ ನೋಡಬೇಕು ಎಂದು ಮುನಿಯಪ್ಪ ಹೇಳಿದರು.

ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದೇವೆ. ಅಕ್ಕಿ ಜೊತೆಗೆ ಬೇಳೆ, ಎಣ್ಣೆ ಕೊಡುವ ಬಗ್ಗೆಯೂ ಚಿಂತನೆ ನಡೆದಿದೆ. ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿ ಎಂದು ಅವರು ತಿಳಿಸಿದರು.

ರಸಗೊಬ್ಬರ ವಿಚಾರದಲ್ಲಿ ಕೇಂದ್ರ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಮೊದಲು ಸಕಾಲದಲ್ಲಿ ನಮಗೆ ಅಗತ್ಯವಿರುವಷ್ಟು ರಸಗೊಬ್ಬರ ಕೊಡುತ್ತಿದ್ದರು. ಆದರೆ, ಈ ಬಾರಿ ರಸಗೊಬ್ಬರದ ಕೊರತೆಯಾಗಿದೆ ಎಂದು ಅವರು ತಿಳಿಸಿದರು.

ಯಾವ ಕ್ರಾಂತಿಯೂ ಆಗುವುದಿಲ್ಲ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೆಪ್ಟಂಬರ್‍ನಲ್ಲಿ ಕ್ರಾಂತಿ ಆಗಲಿದೆ ಎಂದು ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ, ಯಾವ ಕ್ರಾಂತಿಯೂ ಆಗುವುದಿಲ್ಲ. ಸುಸೂತ್ರವಾಗಿ ಸರಕಾರ ನಡೆಯುತ್ತಿದೆ. ಹೈಕಮಾಂಡ್ ತೀರ್ಮಾನ ಹಾಗೂ ಶಾಸಕರ ಆಯ್ಕೆಯಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮಲ್ಲಿ ಯಾವುದೆ ಸಮಸ್ಯೆಗಳು ಇಲ್ಲ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾವಣೆಯ ವಿಷಯ ನಮ್ಮ ಮುಂದಿಲ್ಲ. ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸಚಿವರು ತಮ್ಮ ಖಾತೆಗಳನ್ನು ಹಾಗೂ ಉಸ್ತುವಾರಿಯಾಗಿರುವ ಜಿಲ್ಲೆಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಮುನಿಯಪ್ಪ ತಿಳಿಸಿದರು.

ಬಿಜೆಪಿಯವರ ಹೋರಾಟ ಅರ್ಥಹೀನ: ಒಳ ಮೀಸಲಾತಿಗಾಗಿ ಆಗ್ರಹಿಸಿ ಬಿಜೆಪಿಯವರು ಆ.1ರಂದು ಕರೆ ನೀಡಿರುವ ಪ್ರತಿಭಟನೆಗೆ ಅರ್ಥವಿಲ್ಲ. ಅವರು ಅಧಿಕಾರದಲ್ಲಿದ್ದಾಗ ಒಳ ಮೀಸಲಾತಿ ಜಾರಿ ಮಾಡುವ ಕೆಲಸ ಮಾಡಬೇಕಿತ್ತು. 35 ವರ್ಷಗಳ ಈ ಸಮುದಾಯಗಳ ಹೋರಾಟಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ನಮ್ಮ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದಾರೆ. ಈಗಾಗಲೆ ರಾಜ್ಯದಾದ್ಯಂತ ಪರಿಶಿಷ್ಟ ಜಾತಿಯವರ ಶೇ.96ರಷ್ಟು ಸಮೀಕ್ಷೆಯಾಗಿದೆ. ಬೆಂಗಳೂರು ನಗರದಲ್ಲಿ ಸ್ವಲ್ಪ ಹಿನ್ನಡೆಯಾಗಿತ್ತು. ಸಮೀಕ್ಷೆಯ ಕಾಲಾವಕಾಶ ವಿಸ್ತರಣೆ ಮಾಡಿದ್ದರಿಂದ, ಅಲ್ಲಿಯೂ ತುಂಬಾ ಚೆನ್ನಾಗಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಮುನಿಯಪ್ಪ ತಿಳಿಸಿದರು.

ನಾಗಮೋಹನ್ ದಾಸ್ ಸಮಿತಿಯು ಸಮೀಕ್ಷೆ ಪೂರ್ಣಗೊಳಿಸಿ ಆದಷ್ಟು ಬೇಗ ವರದಿ ನೀಡುವುದಾಗಿ ತಿಳಿಸಿದೆ. ವರದಿ ಬಂದ ತಕ್ಷಣ ಅದನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಗುವುದು. ಬಿಜೆಪಿಯವರು ಈ ವಿಚಾರದಲ್ಲಿ ಪ್ರತಿಭಟನೆ ಮಾಡುವ ಅವಶ್ಯಕತೆಯಿಲ್ಲ. ಇದರಿಂದ, ಅವರಿಗೆ ಯಾವ ಲಾಭವು ಆಗುವುದಿಲ್ಲ ಎಂದು ಮುನಿಯಪ್ಪ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News