ನೇಮಕಾತಿ ಪ್ರಕ್ರಿಯೆ ನಡೆಸದೆ ನಿರ್ಲಕ್ಷ ಆರೋಪ; ರಾಜ್ಯ ಸರಕಾರದ ಕ್ರಮ ಖಂಡಿಸಿ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ
ಧಾರವಾಡ: ನೇಮಕಾತಿ ಪ್ರಕ್ರಿಯೆ ನಡೆಸದ ರಾಜ್ಯ ಸರಕಾರದ ಧೋರಣೆ ಖಂಡಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಸಂಘಟನೆಯ ರಾಜ್ಯಾಧ್ಯಕ್ಷ ಕಾಂತಕುಮಾರ ನೇತೃತ್ವದಲ್ಲಿ ನಗರದ ಜುಬಿಲಿ ವೃತ್ತದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ಸರಕಾರದ ತಪ್ಪು ನಿರ್ಣಯಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳು ದೀರ್ಘಕಾಲದಿಂದ ತೀವ್ರ ತೊಂದರೆಗಳನ್ನು ಅನುಭವಿಸುತ್ತಿವೆ. ಕಳೆದ ಹಲವು ವರ್ಷಗಳಿಂದ ಅನೇಕ ಇಲಾಖೆಗಳ ನೇಮಕಾತಿ ನಡೆಯದ ಕಾರಣ ವಿದ್ಯಾರ್ಥಿಗಳು ವಯೋಮಿತಿಯನ್ನು ಮೀರಿದ್ದಾರೆ. ಇನ್ನು ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆದಿಲ್ಲ. 4-5 ವರ್ಷಗಳಿಂದ ಪೊಲೀಸ್ ಕಾನ್ಸ್ಟೇಬಲ್, ಪಿಎಸ್ಸೈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯೂ ಸ್ಥಗಿತವಾಗಿದೆ. 7-8 ವರ್ಷಗಳಿಂದ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಯೂ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಿ ತಕ್ಷಣವೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಅಲ್ಲದೆ, KAS ಅಧಿಸೂಚನೆಯಲ್ಲಿ ಕಂಡು ಬಂದಿರುವ ಕನ್ನಡ ಅನುವಾದದ ತಪ್ಪುಗಳನ್ನು ಪರಿಶೀಲಿಸಿ, ಅಧಿಸೂಚನೆಯನ್ನು ರದ್ದುಪಡಿಸುವ ಅಗತ್ಯವಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರ ಭಾವಚಿತ್ರ ಹಿಡಿದು ರಾಜ್ಯ ಸರಕಾರದ ವಿರುದ್ಧ ವಿದ್ಯಾರ್ಥಿಗಳು ಧಿಕ್ಕಾರ ಕೂಗಿದರು. ಅಲ್ಲದೆ ಜ್ಯುಬಿಲಿ ವೃತ್ತದಲ್ಲಿ ವಿವಿಧ ಕಾಂಗ್ರೆಸ್ ನಾಯಕರು ಹಬ್ಬದ ಶುಭಾಶಯ ಕೋರಿ ಹಾಕಿದ್ದ ಬ್ಯಾನರ್ ಗಳನ್ನೂ ಕಿತ್ತು ಹಾಕಿ ವಿದ್ಯಾರ್ಥಿಗಳು ತಮ್ಮ ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಈ ಬೇಡಿಕೆಗಳನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ಗಮನಿಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ಉಳಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಮನವಿ ಮಾಡಿಕೊಂಡಿದೆ.