ಮಹಿಳೆಯ ವಿವಸ್ತ್ರ ಪ್ರಕರಣದ ಹಿಂದೆ ಶಾಸಕ ಮಹೇಶ್ ಟೆಂಗಿನಕಾಯಿ ಕೈವಾಡ : ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಆರೋಪ
ಹುಬ್ಬಳ್ಳಿ: ಮಹಿಳೆಯ ವಿವಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮಹೇಶ್ ಟೆಂಗಿನಕಾಯಿ ವಿರುದ್ಧ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರು ಗಂಭೀರ ಆರೋಪ ಮಾಡಿದ್ದಾರೆ. ಇದು ಶಾಸಕರೇ ರೂಪಿಸಿರುವ ಪೂರ್ವನಿಯೋಜಿತ ರಾಜಕೀಯ ಟೂಲ್‌ಕಿಟ್ ಆಗಿದ್ದು, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆ ಕದಡುವ ಉದ್ದೇಶದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರು ಮಹಿಳೆಯನ್ನು ಕರೆದೊಯ್ಯುವಾಗ ಉದ್ದೇಶಪೂರ್ವಕವಾಗಿ ವಿಡಿಯೋ ಚಿತ್ರೀಕರಿಸಲಾಗಿದೆ. ನಂತರ ಅವಳೇ ಬಟ್ಟೆ ಬಿಚ್ಚಿಕೊಂಡಿರುವ ದೃಶ್ಯವನ್ನು ತಿರುಚಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ವಿಡಿಯೋವನ್ನು ಮಹಿಳೆಯ ತಮ್ಮ ಮರಿಯಾದಾಸ್ ಎಂಬಾತನೇ ಚಿತ್ರೀಕರಿಸಿದ್ದಾನೆ ಎಂಬ ಮಾಹಿತಿ ಲಭ್ಯವಿದೆ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯನ್ನು ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದಲೇ ಈ ವಿಡಿಯೋ ಹರಿಬಿಡಲಾಗಿದೆ. ಶಾಸಕ ಮಹೇಶ್ ಟೆಂಗಿನಕಾಯಿ ಅವರ ಕುಮ್ಮಕ್ಕಿನಿಂದಲೇ ಈ ಕೃತ್ಯ ನಡೆದಿದ್ದು, ರಾಕ್ಷಸ ಪ್ರವೃತ್ತಿಯ ವ್ಯಕ್ತಿಗಳನ್ನು ಪಕ್ಷದಲ್ಲಿರಿಸಿಕೊಂಡು ಇಂತಹ ಕೃತ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ರಜತ್ ಉಳ್ಳಾಗಡ್ಡಿಮಠ ಆರೋಪಿಸಿದರು.
ಶಾಸಕರಿಗೆ ರಾಜಕೀಯವಾಗಿ ಅಭದ್ರತೆ ಕಾಡುತ್ತಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮತ್ತು ಪ್ರಚಾರಕ್ಕಾಗಿ ಇಂತಹ ಕೀಳುಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಉತ್ತರ ಕರ್ನಾಟಕ ಪ್ರವಾಸದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಇದ್ದ ದಿನವೇ ಈ ವಿಡಿಯೋ ಬಿಡುಗಡೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೊದಲು ಕೇವಲ 8-9 ಸೆಕೆಂಡ್‌ಗಳ ತುಣುಕನ್ನು ಹಂಚಿ, ಸತ್ಯ ಹೊರಬರುತ್ತಿದ್ದಂತೆ ನಿಲುವು ಬದಲಿಸಿದ್ದಾರೆ ಎಂದು ಅವರು ಟೀಕಿಸಿದರು.
ಮಹಿಳೆಯ ನಡವಳಿಕೆಗೆ ಸಂಬಂಧಿಸಿದ ಪೂರ್ಣ ವಿಡಿಯೋವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಈ ಕುರಿತು ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.