ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಂದಿನ ನೇಮಕಾತಿ ಸಂದರ್ಭದಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಕನಿಷ್ಠ ಶೇ.20ರಿಂದ 25ರಷ್ಟು ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯ / ಸಮುದಾಯ ವಿಜ್ಞಾನ ಮಹಾವಿದ್ಯಾನಿಲಯ ಪದವೀಧರರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಸಚಿವೆ, ನನ್ನ ಇಲಾಖೆಗೆ ಅಗತ್ಯವಾದ ಕೌಶಲಗಳನ್ನು ಇಲ್ಲಿ ಕಲಿಸಲಾಗುತ್ತದೆ. ಇಲ್ಲಿ ಪದವಿ ಪಡೆದವರು ನಮ್ಮ ಇಲಾಖೆಗೆ ಹೆಚ್ಚು ಸೂಕ್ತವಾಗುತ್ತಾರೆ. ಈಗಾಗಲೇ ಸಾಕಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಮುಂದಿನ ನೇಮಕಾತಿ ಸಂದರ್ಭದಲ್ಲಿ ಹೆಚ್ಚು ಆದ್ಯತೆ ನೀಡುವ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುವೆ, ಜೊತೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಕೌಶಾಲ್ಯಭಿವೃದ್ದಿ ಸಚಿವರ ಜೊತೆಗೂ ಚರ್ಚೆ ನಡೆಸಿ ಕೂಸಿನ ಮನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಹೆಚ್ಚು ಅವಕಾಶ ಸಿಗುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಧಾರವಾಡವನ್ನು ವಿದ್ಯಾಕಾಶಿ ಎಂದು ಕರೆಯುತ್ತೇವೆ. ಇಲ್ಲಿಯ ಕರ್ನಾಟಕ ವಿಶ್ವವಿದ್ಯಾನಿಲಯ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ನಮ್ಮ ಹೆಮ್ಮೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಣ್ಣಿಸಿದರು.
ಈ ವೇಳೆ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಲ್. ಪಾಟೀಲ, ವಿದ್ಯಾಧಿಕಾರಿ ಡಾ.ಲತಾ ಪೂಜಾರ್, ನಿವೃತ್ತ ಡೀನ್ ಪುಷ್ಪ ಖಾದಿ, ಪದವೀಧರರ ಸಂಘದ ಅಧ್ಯಕ್ಷೆ ಡಾ.ಸರೋಜಿನಿ ಕರಕಣ್ಣವರ್, ಕಾರ್ಯದರ್ಶಿ ಡಾ.ವೀಣಾ ಜಾಧವ, ಜಂಟಿ ಕಾರ್ಯದರ್ಶಿ ಡಾ.ಸಾಧನಾ ಕುಳ್ಳೊಳ್ಳಿ, ಖಜಾಂಚಿ ಡಾ.ಮಂಜುಳಾ ಪಾಟೀಲ, ಸಹ ಖಜಾಂಚಿ ಡಾ.ಉಮಾ ಕುಲಕರ್ಣಿ, ಸದಸ್ಯರಾದ ಡಾ.ಹೇಮಲತಾ, ಡಾ.ರೇಣುಕಾ ಸಾಳುಂಕೆ, ಡಾ.ಗೀತಾ ಚಿಟಗುಬ್ಬಿ, ಡಾ.ಪ್ರೇಮಾ ಪಾಟೀಲ, ಡಾ.ರಾಜೇಶ್ವರಿ,ಮಾಳವಿಕಾ ಮೊಕಾಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.