ಧಾರವಾಡ | ಕಾಂಗ್ರೆಸ್ ನಿಂದ ಮನರೇಗಾ ಉಳಿಸಿ ಆಂದೋಲನ
ಧಾರವಾಡ: ಕಾಂಗ್ರೆಸ್ ಪಕ್ಷದ ಧಾರವಾಡ ಗ್ರಾಮೀಣ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಮನರೇಗಾ ಯೋಜನೆ ಉಳಿಸಿ ಆಂದೋಲನ ಇಂದು ಧಾರವಾಡ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ನಡೆಯಿತು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ಧೋರಣೆ ಖಂಡಿಸಿ ಧಿಕ್ಕಾರ ಕೂಗಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಶಿವಲೀಲಾ ಕುಲಕರ್ಣಿ ಮಾತನಾಡಿ, ಗ್ರಾಮೀಣ ಭಾಗದ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಜಾರಿಗೆ ಬಂದಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರವು ಸಂಪೂರ್ಣವಾಗಿ ಹಳಿ ತಪ್ಪಿಸುತ್ತಿದೆ. ಬಡವರಿಗೆ ಉದ್ಯೋಗ ನೀಡುವ ಬದಲು, ಈ ಯೋಜನೆಯನ್ನು ಬಂಡವಾಳಶಾಹಿ ಮತ್ತು ಕಾಂಟ್ರಾಕ್ಟರ್ ಗಳ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಅತ್ಯಂತ ಆಘಾತಕಾರಿ ವಿಚಾರ ಎಂದರು.
ಮನರೇಗಾ ನಿಯಮದ ಪ್ರಕಾರ ಯಾವುದೇ ಕಾಮಗಾರಿಯಲ್ಲಿ ಮಧ್ಯವರ್ತಿಗಳು ಅಥವಾ ಕಾಂಟ್ರಾಕ್ಟರ್ ಗಳಿಗೆ ಅವಕಾಶವಿರಬಾರದು. ಆದರೆ ಬಿಜೆಪಿ ಸರಕಾರವು ತರುತ್ತಿರುವ ಹೊಸ ನಿಯಮಗಳು ಮತ್ತು ಯಂತ್ರೋಪಕರಣಗಳ ಬಳಕೆಗೆ ನೀಡುತ್ತಿರುವ ಆದ್ಯತೆಯು ಪರೋಕ್ಷವಾಗಿ ಕಾಂಟ್ರಾಕ್ಟರ್ ಗಳಿಗೆ ಮಣೆ ಹಾಕುತ್ತಿದೆ. ಇದರಿಂದ ಬಡ ಕಾರ್ಮಿಕರ ಕೈಗೆ ಸಿಗಬೇಕಾದ ಹಣ ಗುತ್ತಿಗೆದಾರರ ಪಾಲಾಗುತ್ತಿದೆ ಎಂದು ತಿಳಿಸಿದರು.
ಜಿ-ರಾಮ-ಜಿ ಹೆಸರಿನಲ್ಲಿ ದಿಕ್ಕು ತಪ್ಪಿಸುವಿಕೆ: ಯೋಜನೆಯ ಮೂಲ ಸ್ವರೂಪವನ್ನೇ ಬದಲಿಸಿ, ಅದನ್ನು ಕೇವಲ ತಾಂತ್ರಿಕತೆ ಮತ್ತು ಕಾಂಟ್ರಾಕ್ಟ್ ಆಧಾರಿತ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ಸರ್ಕಾರ ಸಂಚು ರೂಪಿಸಿದೆ. ಇದು 'ಬಡವರ ಯೋಜನೆ'ಯನ್ನು 'ಶ್ರೀಮಂತರ ಲಾಭದ ಯೋಜನೆ'ಯನ್ನಾಗಿ ಮಾಡುತ್ತಿದೆ ಇದರ ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದರು.
ಬ್ಲಾಕ್ ಸಮಿತಿಯ ಅಧ್ಯಕ್ಷ ಅರವಿಂದ ಎಗನಗೌಡರ್ ಮಾತನಾಡಿ, ಮಾನವ ಶ್ರಮಕ್ಕೆ ಆದ್ಯತೆ ನೀಡಬೇಕಾದ ಕಡೆಗಳಲ್ಲಿ ಕಾಂಟ್ರಾಕ್ಟರ್ ಗಳು ಜೆಸಿಬಿ ಮತ್ತು ಇತರ ಯಂತ್ರಗಳನ್ನು ಬಳಸಿ ಕೆಲಸ ಮುಗಿಸುತ್ತಿದ್ದಾರೆ. ಅಧಿಕಾರಿಗಳು ಇದಕ್ಕೆ ಸಾಥ್ ನೀಡುತ್ತಿದ್ದು, ಬಡ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಟ್ರಾಕ್ಟರ್ಗಳಿಗೆ ಮಣೆ ಹಾಕುವುದರಿಂದ ಯೋಜನೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಕಲಿ ಬಿಲ್ಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ಲೂಟಿ ಮಾಡಲು ವ್ಯವಸ್ಥಿತವಾಗಿ ದಾರಿ ಮಾಡಿಕೊಡಲಾಗುತ್ತಿದೆ. ಯೋಜನೆಯಲ್ಲಿ ಕಾಂಟ್ರಾಕ್ಟರ್ಗಳು ಮತ್ತು ಮಧ್ಯವರ್ತಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಈಶ್ವರ್ ಶಿವಳ್ಳಿ ಭೀಮಪ್ಪ ಕಸಾಯಿ, ಪರಮೇಶ್ವರ್ ಕಾಳೆ ಸೇರಿದಂತೆ ಮಹಿಳಾ ಮುಖಂಡರು ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರತಿಭಟನೆಯ ಬಳಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.