×
Ad

ಮುಖ್ಯಮಂತ್ರಿ ಬದಲಾವಣೆ ವಿಚಾರ | ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ: ಝಮೀರ್ ಅಹ್ಮದ್ ಖಾನ್

Update: 2026-01-17 00:25 IST

ಧಾರವಾಡ  : ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಸಾಕಷ್ಟು ಊಹಾಪೋಹ ಚರ್ಚೆಗಳು ನಡೆಯುತ್ತಿದ್ದು, ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ ಎಂದು ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂದು ಬಿಜೆಪಿಯವರು ಹೇಳಿದ್ದರು. ನವೆಂಬರ್ ಆದ ಮೇಲೆ ಬಿಜೆಪಿಯವರಿಗೆ ವಾಂತಿ, ಬೇಧಿ ಆರಂಭ ಆಗುತ್ತದೆ ಎಂದು ನಾನು ಹೇಳಿದ್ದೆ. ಈಗ ಅದೇ ರೀತಿ ಆಗಿದೆ ಎಂದು ವ್ಯಂಗ್ಯವಾಡಿದರು.

ನವೆಂಬರ್ ಮುಗಿದಿದೆ. ಸಂಕ್ರಾಂತಿಯೂ ಮುಗಿದಿದೆ. ಮುಂದೆ ಯುಗಾದಿ ಆರಂಭ ಆಗಿ ಮುಗಿದು ಹೋಗುತ್ತದೆ. ನಮ್ಮಲ್ಲಿ ಸಿಎಂ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಅವರ ಬದಲಾವಣೆ ನಮ್ಮಿಂದ ಸಾಧ್ಯ ಇಲ್ಲ. ಬದಲಾವಣೆ ಮಾಡುವುದು ಪಕ್ಷದ ಹೈಕಮಾಂಡ್‌ನಿಂದ ಮಾತ್ರ ಸಾಧ್ಯ. ನಮ್ಮ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧ ಎಂದರು.

ರನ್ ವೇನಲ್ಲಿ ರಾಹುಲ್ ಗಾಂಧಿ ಜೊತೆ ಸಿಎಂ, ಡಿಸಿಎಂ ಮಾತನಾಡಿದ್ದು ಸಹಜ. ಮುಖಂಡರು ಬಂದಾಗ ಅವರನ್ನು ಬರ ಮಾಡಿ ವಾಪಸ್ ಕಳುಹಿಸಿಕೊಡುವುದು ನಮ್ಮ ಪದ್ಧತಿ. ಅಲ್ಲಿ ಸಿಎಂ ಅಷ್ಟೇ ಅಲ್ಲದೆ ಡಿಕೆಶಿ, ಜಾರ್ಜ್, ಮಹದೇವಪ್ಪ ಸೇರಿದಂತೆ ಹಲವರು ಇದ್ದರು ಎಂದರು.

ಬಿಜೆಪಿಯಲ್ಲಿ ಸಿಎಂ ಬದಲಾವಣೆ ಮಾಡುವ ಪದ್ಧತಿ ಇದೆ. 2008ರಿಂದ 2013ರವರೆಗೆ ಮೂರು ಜನ ಸಿಎಂಗಳನ್ನು ಅವರು ಬದಲಾವಣೆ ಮಾಡಿದ್ದರು. ಬಿಜೆಪಿಗೆ ಇಲ್ಲಿಯವರೆಗೂ ಬಹುಮತ ಬಂದಿಲ್ಲ. ಅವರು ಆಪರೇಶನ್ ಕಮಲ ಮಾಡಿಯೇ ಅಧಿಕಾರಕ್ಕೆ ಬಂದಿದ್ದಾರೆ. ಅವರಲ್ಲಿಯೇ ಸಿಎಂ ಬದಲಾವಣೆ ಮಾಡುವ ಪದ್ಧತಿ ಇದೆ ಎಂದು ತಿರುಗೇಟು ನೀಡಿದರು.

ಡಿಕೆಶಿ ದಿಲ್ಲಿಗೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಝಮೀರ್ ಅಹ್ಮದ್, ಡಿಸಿಎಂಗೆ ಕೊಟ್ಟಿರುವುದು ದೊಡ್ಡ ಇಲಾಖೆ. ಇದಕ್ಕೆ ಸಂಬಂಧಿಸಿದ ಸಭೆಗಳನ್ನು ಮಾಡಲು ಅವರು ಹೋಗಿರುತ್ತಾರೆ. ರಾಜ್ಯದಿಂದ ದಿಲ್ಲಿಗೆ ಹೋದಾಗ ನಮ್ಮ ನಾಯಕರನ್ನು ನಾವು ಭೇಟಿ ಮಾಡುವ ಪದ್ಧತಿ ಇದೆ. ನಾನೂ ಹೋದಾಗ ನಮ್ಮ ನಾಯಕರ ಭೇಟಿಗೆ ಸಮಯಾವಕಾಶ ಕೇಳುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News