ಐಪಿಎಲ್ ನಿಂದ ನಿರ್ಗಮನ: ಅನಪೇಕ್ಷಿತ ಇತಿಹಾಸ ಸೃಷ್ಟಿಸಿದ ಡೆಲ್ಲಿ ಕ್ಯಾಪಿಟಲ್ಸ್
PC: x.com/CricketNDTV
ಹೊಸದಿಲ್ಲಿ: ಐಪಿಎಲ್ ಸೀಸನ್ ನಲ್ಲಿ ಮೊದಲ ನಾಲ್ಕು ಪಂದ್ಯಗಳನ್ನು ಗೆದ್ದು, ಪ್ಲೇಆಫ್ ಹಂತಕ್ಕೆ ಮುನ್ನಡೆಯದ ಮೊಟ್ಟಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯನ್ನು ಡೆಲ್ಲಿ ಕ್ಯಾಪಿಟಲ್ ಸೃಷ್ಟಿಸಿದೆ. ಈ ಮೂಲಕ ಭಾರತದ ಐಪಿಎಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 59 ರನ್ ಗಳ ಸೋಲು ಅನುಭವಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ನಿರ್ಗಮಿಸಿದರೆ, ಮುಂಬೈ ತಂಡ 2025ರ ಐಪಿಎಲ್ ನಲ್ಲಿ ಪ್ಲೇಆಫ್ ಹಂತಕ್ಕೆ ಕಟ್ಟಕಡೆಯ ತಂಡವಾಗಿ ತಲುಪಿತು. ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಫಾಫ್ ಡುಪ್ಲೆಸಿಸ್ ನೇತೃತ್ವದಲ್ಲಿ ಮೈದಾನಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ 181 ರನ್ಗಳ ಗುರಿ ಪಡೆಯಿತು. ಆದರೆ ಕೇವಲ 121 ರನ್ ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿತು. ಜಸ್ಪ್ರೀತ್ ಬೂಮ್ರಾ ಮತ್ತು ಮಿಚೆಲ್ ಸ್ಯಾಂಟರ್ ತಲಾ ಮೂರು ವಿಕೆಟ್ ಗಳನ್ನು ಕಿತ್ತು ಎದುರಾಳಿಗಳ ಬ್ಯಾಟಿಂಗ್ ಅನ್ನು ಮಟ್ಟ ಹಾಕಿದರು.
ಈ ಗೆಲುವಿನೊಂದಿಗೆ 16 ಅಂಕ ಸಂಪಾದಿಸಿದ ಮುಂಬೈ ಇಂಡಿಯನ್ಸ್ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಪ್ಲೇಆಫ್ ಅರ್ಹತೆ ಸಂಪಾದಿಸಿತು. 13 ಪಂದ್ಯಗಳಿಂದ ಅಷ್ಟೇ ಅಂಕ ಕಲೆಹಾಕಿದ ದೆಹಲಿ ಟೂರ್ನಿಯಿಂದ ನಿರ್ಗಮಿಸಿತು. ಕೊನೆಯ ಪಂದ್ಯ ದೆಹಲಿ ಪಾಲಿಗೆ ಕೇವಲ ಔಪಚಾರಿಕ ಎನಿಸಿದೆ.
ಮೊದಲ ನಾಲ್ಕು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಭಾರಿ ನಿರೀಕ್ಷೆ ಮೂಡಿಸಿತ್ತು. ಅರ್ಧದಷ್ಟು ಪಂದ್ಯಗಳು ಮುಗಿದಾಗ ಎಂಟು ಪಂದ್ಯಗಳ ಪೈಕಿ ಆರನ್ನು ಗೆದ್ದು, ಇತರ ತಂಡಗಳಿಂದ ಅಂತರ ಕಾಯ್ದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ನಾಲ್ಕು ಸೋಲು ಹಾಗೂ ಒಂದು ಪಂದ್ಯದಲ್ಲಿ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಟೂರ್ನಿಯಿಂದಲೇ ನಿರ್ಗಮಿಸಿತು.