×
Ad

ರಾಸಾಯನಿಕವಾಗಿ ಬಲಿತ ಬಾಳೆಹಣ್ಣು ತಿನ್ನುತ್ತಿದ್ದೀರಾ? ವ್ಯತ್ಯಾಸ ತಿಳಿಯವುದು ಹೇಗೆ?

Update: 2026-02-28 20:25 IST

ಸಾಂದರ್ಭಿಕ ಚಿತ್ರ | Photo Credit : freepik

ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣುಗಳು ಮತ್ತು ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳ ನಡುವಿನ ವ್ಯತ್ಯಾಸವನ್ನು ಅವುಗಳ ಬಣ್ಣ, ವಿನ್ಯಾಸ ಮತ್ತು ರುಚಿಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಗುರುತಿಸಬಹುದು.

ಮುಂಬೈ ಮೂಲದ ಆರ್ತೊಪೆಡಿಕ್ ಸರ್ಜನ್, ಆರೋಗ್ಯ ಶಿಕ್ಷಕ ಮತ್ತು ನ್ಯೂಟ್ರಿಬೈಟ್ ವೆಲ್ನೆಸ್ ಸಹಸಂಸ್ಥಾಪಕರಾದ ಡಾ. ಮಾನವ್ ವೋರಾ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಹಜವಾಗಿ ಬಲಿತ ಬಾಳೆಹಣ್ಣು ಮತ್ತು ರಾಸಾಯನಿಕಗಳನ್ನು ಬಳಸಿ ಬಲಿತ ಬಾಳೆಹಣ್ಣನ್ನು ಪ್ರತ್ಯೇಕಿಸಿ ಗುರುತಿಸುವುದು ಹೇಗೆ ಎನ್ನುವ ವಿವರ ನೀಡಿದ್ದಾರೆ. ಫೆಬ್ರವರಿ 26ರಂದು ಪೋಸ್ಟ್ ಮಾಡಿದ ವೀಡಿಯೋದಲ್ಲಿ ಅವರು ಗ್ರಾಹಕರು ಗಮನಿಸಬೇಕಾದ ಪ್ರಮುಖ ವಿವರಗಳನ್ನು ತಿಳಿಸಿದ್ದಾರೆ. ಸಹಜವಾಗಿ ಬಲಿತ ಬಾಳೆಹಣ್ಣು ನೋಡಲು ಹೇಗಿರುತ್ತದೆ ಮತ್ತು ರುಚಿ ಸೂಚಕಗಳ ವಿವರ ನೀಡಿದ್ದಾರೆ. ಜೊತೆಗೆ ಗ್ರಾಹಕರು ಯಾವುದರತ್ತ ಗಮನಹರಿಸಬೇಕು ಮತ್ತು ಸಂಭಾವ್ಯ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳನ್ನು ಹೇಗೆ ತಪ್ಪಿಸಬಹುದು ಎಂದು ತಿಳಿಸಿದ್ದಾರೆ.

Full View

ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ?

ಮಾನವ್ ಅವರ ಪ್ರಕಾರ ನೈಸರ್ಗಿಕವಾಗಿ ಮಾಗಿದ ಬಾಳೆಹಣ್ಣುಗಳು ಮತ್ತು ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳ ನಡುವಿನ ವ್ಯತ್ಯಾಸವನ್ನು ಅವುಗಳ ಬಣ್ಣ, ವಿನ್ಯಾಸ ಮತ್ತು ರುಚಿಯನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಗುರುತಿಸಬಹುದು. ನೈಸರ್ಗಿಕವಾಗಿ ಬಳಿತ ಬಾಳೆಹಣ್ಣುಗಳು ಸಣ್ಣಕಂದು ಅಥವಾ ಗಾಢವಾದ ಚುಕ್ಕೆಗಳೊಂದಿಗೆ ಸಮಾನವಾಗಿರದ ಹಳದಿ ಬಣ್ಣ ಹೊಂದಿರುತ್ತವೆ ಮತ್ತು ಸಮೃದ್ಧ, ಸಿಹಿಯಾದ ಪರಿಮಳ ಹೊಂದಿರುತ್ತದೆ.

ಇದಕ್ಕೆ ವಿರುದ್ಧವಾಗಿ ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳು ಏಕರೂಪವಾಗಿ ಪ್ರಕಾಶಮಾನವಾದ ಹಳದಿ ಬಣ್ಣದಲ್ಲಿ ಬರುತ್ತವೆ. ಆದರೆ ಮೇಲ್ಭಾಗ ಮತ್ತು ಕೆಳಭಾಗದಲ್ಲಿರುವ ತುದಿಗಳು ಸ್ವಲ್ಪ ಹಸಿರು ಬಣ್ಣದಲ್ಲಿ ಉಳಿಯಬಹುದು ಮತ್ತು ಅವು ಸಾಮಾನ್ಯವಾಗಿ ಒಂದೇ ರೀತಿಯ ರುಚಿ ಹೊಂದಿರುವುದಿಲ್ಲ.

ವೈದ್ಯರ ಪ್ರಕಾರ, ಕೆಳಭಾಗ ಮತ್ತು ಮೇಲ್ಭಾಗದಲ್ಲಿ ಹಸಿರು ಬಣ್ಣದಲ್ಲಿದ್ದು, ಮಧ್ಯದ ಭಾಗ ಮಾತ್ರ ಹಳದಿ ಬಣ್ಣದಲ್ಲಿದ್ದರೆ ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳಾಗಿರುತ್ತವೆ. ಸಹಜವಾಗಿ ಮಾಗಿದ ಹಣ್ಣುಗಳು ಏಕರೂಪವಾದ ಪರಿಪೂರ್ಣ ಹಳದಿಬಣ್ಣ ಹೊಂದಿರುವುದಿಲ್ಲ. ಅವುಗಳಲ್ಲಿ ಸಣ್ಣ ಕಪ್ಪು ಕಲೆಗಳು ಮತ್ತು ಸಮೃದ್ಧ ರುಚಿ ಇರುತ್ತವೆ. ರಾಸಾಯನಿಕವಾಗಿ ಮಾಗಿದ ಬಾಳೆಹಣ್ಣುಗಳನ್ನು ಬಲವಂತವಾಗಿ ಹಳದಿ ಬಣ್ಣಕ್ಕೆ ತಿರುಗಿಸಲಾಗಿರುತ್ತದೆ.

ಸಹಜವಾಗಿ ಮಾಗಿದ ಹಣ್ಣುಗಳು ಮಾತ್ರ ಸೂಕ್ತವೇಕೆ?

ಕೆಲವು ವ್ಯಾಪಾರಿಗಳು ಬಾಳೆಹಣ್ಣು ಸೇರಿದಂತೆ ಹಣ್ಣುಗಳನ್ನು ತ್ವರಿತವಾಗಿ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡ್ ನಂತಹ ಕೃತಕ ವಸ್ತುಗಳನ್ನು ಬಳಸುತ್ತಾರೆ. ಅಂತಹ ಸಂದರ್ಭದಲ್ಲಿ ರಾಸಾಯನಿಕವಾಗಿ ಮಾತ್ರ ಹಣ್ಣು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಒಳಗೆ ಇರುವ ಹಣ್ಣು ಸರಿಯಾಗಿ ಬಲಿತಿರುವುದಿಲ್ಲ. ಹೀಗಾಗಿ ಸಹಜವಾದ ರುಚಿ ಮತ್ತು ರಚನೆ ಇರುವುದಿಲ್ಲ ಮುಂದುವರಿದು ಕ್ಯಾಲ್ಸಿಯಂ ಕಾರ್ಬೈಡ್ ನಲ್ಲಿ ವಿಷಕಾರಿ ಕಶ್ಮಲಗಳಾದ ಅರ್ಸೆನಿಕ್ ಮತ್ತು ಫಾಸ್ಪರಸ್ ಇರುತ್ತವೆ. ನಿಯಮಿತವಾಗಿ ಇಂತಹ ಬಾಳೆಹಣ್ಣುಗಳ ಸೇವನೆ ಹೊಟ್ಟೆ ಉಬ್ಬರಿಸುವುದು ಆಮ್ಲೀಯತೆ ಮತ್ತು ಒಟ್ಟು ಜೀರ್ಣಕ್ರಿಯೆಯಲ್ಲಿ ಅನನುಕೂಲತೆ ತರಬಹುದು.

ಯಾವಾಗಲೂ ಸಣ್ಣ ಕಲೆಗಳಿರುವ ಬಾಳೆಹಣ್ಣುಗಳನ್ನು ಖರೀದಿಸಬೇಕು. ಅಲ್ಲದೆ ಒಳಗೆ ಬೆಣ್ಣೆಯಂತಹ ರಚನೆ ಇರಬೇಕು. “ಸಹಜವಾಗಿ ಮಾಗಿದ ಬಾಳೆಹಣ್ಣು ಸಣ್ಣ ಕಲೆಗಳು ಮತ್ತು ಬೆಣ್ಣೆಯಂತಹ ರಚನೆಯನ್ನು ಹೊಂದಿರುತ್ತವೆ. ಆದರೆ ಕೃತಕವಾಗಿ ಮಾಗಿದ ಹಣ್ಣುಗಳು ಬಹುತೇಕ ಏಕರೂಪದ ಹಳದಿ ಬಣ್ಣವನ್ನು ಹೊಂದಿರುತ್ತವೆ ಮತ್ತು ರುಚಿಯು ಚೆನ್ನಾಗಿರುವುದಿಲ್ಲ” ಎಂದು ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News