ನೀವು ಬಳಸುವ ಬೆಲ್ಲ ಶುದ್ಧವೆ? FSSAI ನೀಡಿದ ಎಚ್ಚರಿಕೆಯೇನು?
ಸಾಂದರ್ಭಿಕ ಚಿತ್ರ | Photo Credit : freepik
ಬೆಲ್ಲದ ಶುದ್ಧತೆ ಪರೀಕ್ಷಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕೆಲವು ಸರಳ ಮನೆ ಪರೀಕ್ಷೆಗಳನ್ನು ಹಂಚಿಕೊಂಡಿದೆ.
ಭಾರತೀಯ ಮನೆಗಳಲ್ಲಿ ಬೆಲ್ಲವನ್ನು ವರ್ಷವಿಡೀ ವ್ಯಾಪಕವಾಗಿ ಬಳಸುತ್ತೇವೆ. ಸಾಂಪ್ರದಾಯಿಕ ಸಿಹಿತಿನಿಸುಗಳಿಗೆ ಬಳಸುವುದರಿಂದ ತೊಡಗಿ ಆಯುರ್ವೇದದಲ್ಲೂ ಬಳಕೆಯಾಗುತ್ತದೆ. ನೈಸರ್ಗಿಕವಾದ ಸಿಹಿಯು ಆರೋಗ್ಯದ ಲಾಭಗಳಿಗೆ ಜನಪ್ರಿಯವಾಗಿದೆ. ಆದರೆ ಜನಪ್ರಿಯತೆಯ ಜೊತೆಗೆ ಕಲಬೆರಕೆಯ ಆತಂಕಕ್ಕೂ ಕಾರಣವಾಗಿದೆ. ಬೆಲ್ಲವನ್ನು ಹೆಚ್ಚಾಗಿ ಸಕ್ಕರೆ, ಸೀಮೆಸುಣ್ಣದ ಪುಟಿ ಅಥವಾ ಅಡುಗೆ ಸೋಡಾಗಳೊಂದಿಗೆ ಬೆರೆಸಲಾಗುತ್ತದೆ. ಹೀಗಾಗಿ ಬೆಲ್ಲದ ಶುದ್ಧತೆ ಕಡಿಮೆಯಾಗಿ ಗುಣಮಟ್ಟವೂ ಕುಸಿಯುತ್ತದೆ. ಇದೀಗ ಬೆಲ್ಲದ ಶುದ್ಧತೆ ಪರೀಕ್ಷಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಕೆಲವು ಸರಳ ಮನೆ ಪರೀಕ್ಷೆಗಳನ್ನು ಹಂಚಿಕೊಂಡಿದೆ.
ಬೆಲ್ಲ ಕಲಬೆರಕೆ ಮಾಡುವುದೇಕೆ?
ಬೆಲ್ಲದ ಬೆಲೆ ಹೆಚ್ಚಿರುವ ಕಾರಣದಿಂದ ಮತ್ತು ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಾಗುವುದರಿಂದ ಕಲಬೆರಕೆ ಮಾಡಲಾಗುತ್ತದೆ. ರಚನೆ, ಬಣ್ಣ ಮತ್ತು ತೂಕ ಹೆಚ್ಚಿಸಲು ಅಗ್ಗದ ವಸ್ತುಗಳೊಂದಿಗೆ ಕಲಬೆರಕೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮುಖ್ಯವಾಗಿ ಅಡುಗೆ ಸೋಡಾವನ್ನು (ಸೋಡಿಯಂ ಬೈಕಾರ್ಬೋನೇಟ್) ಕಲಬೆರಕೆ ಮಾಡಲಾಗುತ್ತದೆ. ಅಡುಗೆ ಸೋಡ ಬೆಲ್ಲದ ಚೂರುಗಳ ಹೊಳಪನ್ನು ಹೆಚ್ಚಿಸುತ್ತದೆ. ಆದರೆ ಬೆಲ್ಲದ ಪರಿಪೂರ್ಣತೆ ಮತ್ತು ರುಚಿಯನ್ನು ಬದಲಿಸುತ್ತದೆ.
ಅಡುಗೆ ಸೋಡಾವನ್ನು ಬೆಲ್ಲದಲ್ಲಿ ಬೆರೆಸಿದ್ದಾರೆಯೇ ಎಂದು ತಿಳಿದುಕೊಳ್ಳಲು FSSAI ಸರಳವಾದ ಪರೀಕ್ಷೆಯನ್ನು ತಿಳಿಸಿದೆ. ಪರೀಕ್ಷೆಯ ವೀಡಿಯೋವನ್ನು FSSAI ‘ಎಕ್ಸ್’ ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಪ್ರಕಟಿಸಿದೆ.
ಪರೀಕ್ಷೆ ಮಾಡುವುದು ಹೇಗೆ?
1. ಕಾಲು ಚಮಚ ಪುಡಿ ಮಾಡಿದ ಬೆಲ್ಲವನ್ನು ಸಣ್ಣ ಗ್ಲಾಸ್ ಅಥವಾ ಟೆಸ್ಟ್ ಟ್ಯೂಬ್‌ಗೆ ಹಾಕಿ.
2. 3 ಮಿಲೀ ಹೈಡ್ರೋಕ್ಲೋರಿಕ್ ಆಮ್ಲವನ್ನು ಅದೇ ಟೆಸ್ಟ್ ಟ್ಯೂಬ್‌ಗೆ ಸೇರಿಸಿ.
3. ರಾಸಾಯನಿಕ ಕ್ರಿಯೆಯನ್ನು ಗಮನಿಸಿ.
ಫಲಿತಾಂಶವಾಗಿ ಯಾವುದೇ ನೊರೆಗಳು ಬರದೆ ಇದ್ದರೆ ಬೆಲ್ಲ ಶುದ್ಧವೆಂದು ಭಾವಿಸಬೇಕು. ಫಲಿತಾಂಶವಾಗಿ ನೊರೆಗಳು ಕಂಡುಬಂದಲ್ಲಿ ಬೆಲ್ಲ ಕಲಬೆರಕೆಯಾಗಿದೆ ಎಂದು ತಿಳಿಯಬೇಕು.
ಬೆಲ್ಲದಲ್ಲಿ ನೊರೆಗಳು ಬರುವುದೇಕೆ?
ಬೆಲ್ಲದಲ್ಲಿ ಸೋಡಿಯಂ ಬೈಕಾರ್ಬೋನೇಟ್ ಇದ್ದಾಗ ನೊರೆಗಳು ಕಂಡುಬರುತ್ತವೆ. ಅದು ಹೈಡ್ರೋಕ್ಲೋರಿಕ್ ಆಮ್ಲದ ಜೊತೆಗೆ ರಾಸಾಯನಿಕ ಕ್ರಿಯೆಯಾಗಿ ಕಾರ್ಬನ್ ಡೈ ಆಕ್ಸೈಡ್ ಅನಿಲ ಬಿಡುಗಡೆಯಾಗಿ ನೊರೆಗಳು ಕಂಡುಬರುತ್ತವೆ. ಹೀಗೆ ನೊರೆಗಳು ಬಂದರೆ ಬೆಲ್ಲಕ್ಕೆ ಕಲಬೆರಕೆ ಮಾಡಲಾಗಿದೆ ಎಂದು ತಿಳಿದು ಬರಲಿದೆ. ವೀಡಿಯೋ ಜೊತೆಗೆ FSSAI ಎಚ್ಚರಿಕೆಯನ್ನೂ ಸೂಚಿಸಿದೆ. ಹಬ್ಬದ ಸಂದರ್ಭದಲ್ಲಿ ಬೆಲ್ಲಕ್ಕೆ ಬೇಡಿಕೆ ಏರುವಾಗ ಹೆಚ್ಚು ಜಾಗೃತರಾಗಿ ಪರೀಕ್ಷೆ ನಡೆಸಿ ಬೆಲ್ಲ ಶುದ್ಧವೇ ಎಂದು ಗಮನಿಸಬೇಕು ಎಂದು ಹೇಳಿದೆ.
ಅಡುಗೆ ಸೋಡ ಸಣ್ಣ ಪ್ರಮಾಣದಲ್ಲಿದ್ದರೆ ಅಪಾಯಕಾರಿಯಲ್ಲ ಎಂದು ನಿಮಗೆ ಅನಿಸಬಹುದು. ಆದರೆ ಇದು ಬೆಲ್ಲದ ಸ್ವಾಭಾವಿಕ ಸಂಯೋಜನೆಯನ್ನು ಬದಲಿಸುತ್ತದೆ. ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳ ಹೀರುವಿಕೆಯ ಮೇಲೆ ಪರಿಣಾಮ ಬೀರುತ್ತದ. ಕಲಬೆರಕೆ ಬೆಲ್ಲವನ್ನು ನಿತ್ಯವೂ ಸೇವಿಸುವುದರಿಂದ ಅದರ ಶುದ್ಧ ಲಾಭಗಳು ಸಿಗದಂತೆ ಮಾಡಬಹುದು. ಅಂದರೆ ಜೀರ್ಣಕ್ರಿಯೆಗೆ ಸಹಾಯ ಮಾಡುವುದು, ರೋಗ ನಿರೋಧಕ ಶಕ್ತಿ ಸುಧಾರಿಸುವುದು ಮತ್ತು ಶಕ್ತಿಯ ಮಟ್ಟವನ್ನು ಸುಧಾರಿಸುವಂತಹ ಲಾಭಗಳು ಸಿಗದೆ ಇರಬಹುದು.
FSSAI ಏನನ್ನು ಶಿಫಾರಸು ಮಾಡಿದೆ?
ಪ್ರಯೋಗಾಲಯದ ಪರೀಕ್ಷೆಗಳಿಗೆ ಹೋಲಿಸಿದರೆ ಮನೆಯಲ್ಲಿ ಮಾಡುವ ಪರೀಕ್ಷೆಗಳಲ್ಲಿ ಸಂಪೂರ್ಣವಾದ ಕಲಬೆರಕೆಯ ವಿವರಗಳು ಸಿಗದೆ ಇರಬಹುದು. ಆದರೆ ಜಾಗೃತರಾಗಿರಲು ಮತ್ತು ಉತ್ತಮ ಖರೀದಿ ಆಯ್ಕೆಗಳನ್ನು ಮಾಡಲು ಮನೆ ಪರೀಕ್ಷೆಗಳು ನೆರವಾಗಬಹುದು ಎಂದು FSSAI ಹೇಳಿದೆ.
ಕಲಬೆರಕೆಯ ಬೆಲ್ಲದಿಂದ ಪಾರಾಗುವುದು ಹೇಗೆ?
ಪ್ಯಾಕ್ ಮಾಡಿದ ಬೆಲ್ಲ ಖರೀದಿಸುವ ಮೊದಲು FSSAI ಲೈಸೆನ್ಸ್ ಸಂಖ್ಯೆಯನ್ನು ಗಮನಿಸಿ. ಹೆಚ್ಚು ಹೊಳೆಯುವ ಮತ್ತು ಪ್ರಕಾಶಮಾನವಾಗಿರುವ ಬೆಲ್ಲ ಖರೀದಿಸಬೇಡಿ. ಅದರಲ್ಲಿ ಕೃತಕ ಬಣ್ಣ ಅಥವಾ ಸೇರ್ಪಡೆಗಳಿರಬಹುದು. ವಿಶ್ವಾಸಾರ್ಹ ಬ್ರಾಂಡ್‌ಗಳು ಅಥವಾ ವ್ಯಾಪಾರಿಗಳಿಂದಲೇ ಗುಣಮಟ್ಟದ ಬೆಲ್ಲ ಖರೀದಿಸಿ. ಕಡು ಬಣ್ಣವಿರುವ ಕಡಿಮೆ ಸಂಸ್ಕರಿಸಿದ ಬೆಲ್ಲವನ್ನು ಆರಿಸಿಕೊಳ್ಳಿ. ಅಗ್ಗದ ಬೆಲ್ಲ ಖರೀದಿಸಬೇಡಿ. ಕಡಿಮೆ ಬೆಲೆಯೆಂದರೆ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚಿರುತ್ತದೆ.
ಕಲಬೆರಕೆ ಕಂಡುಬಂದಲ್ಲಿ ಏನು ಮಾಡಬೇಕು?
ಕಲಬೆರಕೆಯ ಬೆಲ್ಲ ಕಂಡುಬಂದಲ್ಲಿ ನೀವು ನೇರವಾಗಿ FSSAI ಆನ್‌ಲೈನ್ ಪೋರ್ಟಲ್‌ನಲ್ಲಿ ಅಥವಾ ಮೊಬೈಲ್ ಆ್ಯಪ್ನಲ್ಲಿ ದೂರು ಸಲ್ಲಿಸಬಹುದು. ಸ್ಥಳೀಯ ಆಹಾರ ಸುರಕ್ಷಾ ಇಲಾಖೆಯನ್ನೂ ಸಂಪರ್ಕಿಸಬಹುದು. ಇಂತಹ ಪ್ರಕರಣಗಳನ್ನು ವರದಿ ಮಾಡುವುದರಿಂದ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಮತ್ತು ಆಹಾರದ ಗುಣಮಟ್ಟ ನಿರ್ವಹಿಸಲು ಸಾಧ್ಯವಾಗುತ್ತದೆ.